ಸರ್ಕಾರಿ ಶಾಲೆಗಳು ಗ್ರಾಮೀಣ ಪ್ರದೇಶದ ಅಸ್ಮಿತೆ: ಶಾಸಕ ಬಸವರಾಜ ಶಿವಣ್ಣನವರ

KannadaprabhaNewsNetwork |  
Published : Nov 09, 2026, 02:15 AM IST
ಬ್ಯಾಡಗಿ ತಾಲೂಕಿನ ಅತ್ತಿಕಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಸೂಡಂಬಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿದರು. | Kannada Prabha

ಸಾರಾಂಶ

ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗಳ ಕುರಿತು ತಾತ್ಸಾರ ಮನೋಭಾವ ಬೇಡ, ಸರ್ಕಾರಿ ಶಾಲೆಗಳು ಗ್ರಾಮೀಣ ಪ್ರದೇಶದ ಅಸ್ಮಿತೆಯಾಗಿದ್ದು ಅವುಗಳ ಸಬಲೀಕರಣಕ್ಕೆ ಗ್ರಾಮಸ್ಥರು ಸಂಘಟಿತವಾಗಿ ಪ್ರಯತ್ನಿಸಬೇಕಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯಪಟ್ಟರು.

ಬ್ಯಾಡಗಿ: ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗಳ ಕುರಿತು ತಾತ್ಸಾರ ಮನೋಭಾವ ಬೇಡ, ಸರ್ಕಾರಿ ಶಾಲೆಗಳು ಗ್ರಾಮೀಣ ಪ್ರದೇಶದ ಅಸ್ಮಿತೆಯಾಗಿದ್ದು ಅವುಗಳ ಸಬಲೀಕರಣಕ್ಕೆ ಗ್ರಾಮಸ್ಥರು ಸಂಘಟಿತವಾಗಿ ಪ್ರಯತ್ನಿಸಬೇಕಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯಪಟ್ಟರು.

ತಾಲೂಕಿನ ಅತ್ತಿಕಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಸೂಡಂಬಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಯ್ಕೆಯಾದ ಪ್ರತಿಭಾವಂತ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅದರ ಪ್ರಯೋಜನ ಪಡೆದುಕೊಳ್ಳಬೇಕಾಗಿದೆ, ಆದರೆ ಸರ್ಕಾರಿ ಶಾಲೆಗಳು ಜನರಿಗೆ ಬೇಡವಾದರೆ ಬರುವ ದಿನಗಳಲ್ಲಿ ಅವುಗಳ ಅಸ್ತಿತ್ವವೇ ಇಲ್ಲದಂತಾಗಲಿದೆ. ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿ ಸರಕಾರಿ ಶಾಲೆಗಳನ್ನು ನಿರ್ಲಕ್ಷಿಸದಂತೆ ಮನವಿ ಮಾಡಿದ ಅವರು, ಅಂತಹ ಶಿಕ್ಷಕರ ಜ್ಞಾನ, ಅನುಭವ ಹಾಗೂ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಜವಾಬ್ದಾರಿ ಸಮಾಜದ ಮೇಲಿದೆ ಎಂದರು.

ಪರಂಪರೆ ಪೋಷಿಸುವ ಜೀವಂತ ನೆಲೆಗಳು: ಶಾಲೆಗಳು ಕೇವಲ ಶಿಕ್ಷಣ ನೀಡುವ ಕೇಂದ್ರಗಳಲ್ಲ, ಬದಲಾಗಿ ಜ್ಞಾನದ ಜೊತೆಗೆ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪರಂಪರೆಗಳನ್ನು ಪೋಷಿಸುವ ಜೀವಂತ ನೆಲೆಗಳು, ಸಾಂಸ್ಕೃತಿಕ ವೈಭವ ಹಾಗೂ ಸಾಮಾಜಿಕ ಸಂಬಂಧದ ಬೇರುಗಳು ಶಾಲೆಗಳಲ್ಲಿ ಅಡಗಿದ್ದು, ಅವುಗಳನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳನ್ನು ಶಿಕ್ಷಣ ಇಲಾಖೆ ಪರಿಚಯಿಸುತ್ತಿರುವುದು ಅತ್ಯಂತ ಸ್ತುತ್ಯಾರ್ಹ ಹಾಗೂ ಸ್ವಾಗತಾರ್ಹ ಎಂದರು.

ಕಾರ್ಯಕ್ರಮ ಶ್ಲಾಘನೀಯ:ಗ್ರಾಮೀಣ ಭಾಗದ, ಮಲೆನಾಡಿನ ಅಂಚಿನ ಪುಟ್ಟ ಹಳ್ಳಿಯಾದ ಅತ್ತಿಕಟ್ಟಿಯಲ್ಲಿ ಗ್ರಾಮಸ್ಥರು ಒಗ್ಗಟ್ಟಿನಿಂದ ಕೈಜೋಡಿಸಿ, ದೊಡ್ಡ ಪ್ರಮಾಣದಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ವಿಜೃಂಭಣೆಯಿಂದ ಆಯೋಜಿಸಿದ್ದು ನಿಜಕ್ಕೂ ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಗ್ರಾಮದಲ್ಲಿ ಶಿಕ್ಷಣದ ಬಗ್ಗೆ ಇರುವ ಆಸಕ್ತಿ ಶಾಲೆ ಮೇಲಿನ ಅಭಿಮಾನ ಮತ್ತು ಸಮುದಾಯದ ಒಗ್ಗಟ್ಟನ್ನು ಪ್ರತಿಬಿಂಬಿಸುತ್ತವೆ ಎಂದರು.

ಊರುಗೋಲಾಗಿ ಕೆಲಸ ನಿರ್ವಹಿಸಿ: ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ತಹಶೀಲದವರ ಮಾತನಾಡಿ, ಉಚಿತ ಪಠ್ಯಪುಸ್ತಕ, ಬಿಸಿಯೂಟದ ಜೊತೆಗೆ ಮಕ್ಕಳ ಪೌಷ್ಟಿಕತೆ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಹಾಲು, ಮೊಟ್ಟೆ, ಬಾಳೆಹಣ್ಣು ವಿತರಿಸುವ ಯೋಜನೆ ಸರ್ಕಾರ ಜಾರಿಗೊಳಿಸಿದೆ, ಇವೆಲ್ಲವೂ ಮಕ್ಕಳ ಕಲಿಕೆ, ಆರೋಗ್ಯ ಮತ್ತು ಭವಿಷ್ಯ ಉತ್ತಮಗೊಳಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಮಹತ್ವದ ಕ್ರಮಗಳಾಗಿದ್ದು, ಸೌಲಭ್ಯಗಳ ಸದ್ಬಳಕೆಯೊಂದಿಗೆ ಶಿಕ್ಷಕರು, ಪಾಲಕರು ಮತ್ತು ಗ್ರಾಮಸ್ಥರು ಬಡಮಕ್ಕಳ ಬದುಕಿಗೆ ಊರುಗೋಲಾಗಿ ಕೆಲಸ ನಿರ್ವಹಿಸುವಂತೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ಪಿಎಚ್ ಡಿ ಪದವಿ ಪಡೆದ ಗ್ರಾಮದ ಮಹೇಂದ್ರ ಕರಿನಾಗಣ್ಣನವರ ಇವರನ್ನು ಸನ್ಮಾನಿಸಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ಶಂಕ್ರಪ್ಪ ಸೋಮಸಾಗರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಸಮನ್ವಯಾಧಿಕಾರಿ, ಮಲ್ಲೇಶಪ್ಪ ಹುಳ್ಯಾಳ, ಪಿಎಲ್ ಡಿ ಬ್ಯಾಂಕ್‌ ಉಪಾಧ್ಯಕ್ಷ ಸಂಜೀವ ಕುಲಮಿ, ಮಲ್ಲಪ್ಪ ಚಿಕ್ಕಳ್ಳಿ, ಸುರೇಶ ಹುಳಬುತ್ತಿ, ಬಾಬಾಜಾನ ಮುಲ್ಲಾನವರ, ಪರಮೇಶ ಚಿಕ್ಕಳ್ಳಿ, ಪ್ರಕಾಶ ಮಲ್ಲಾಪುರ, ಲಿಂಗರಾಜ ಕುಮ್ಮೂರ, ಬಸವರಾಜ ಬಸಪ್ಪನವರ, ಪಿ. ಬಸವರಾಜಪ್ಪ, ಸಿ.ಬಿ.ಪಾಟೀಲ, ಸಿ.ಜಿ. ಹಿರೇಮಠ, ಕೋಟೆಪ್ಪ ಪುಟ್ಟಪ್ಪನವರ, ಹನುಮಂತಪ್ಪ ಚಿಕ್ಕಳ್ಳಿ, ರುದ್ರಪ್ಪ ಹಂಜೇರ, ಹುಚ್ಚಪ್ಪ ಚಿನ್ನಿಕಟ್ಟಿ, ಆಂಜನೇಯ ಗಿರೇಗೊಂಡ್ರ, ಮಮತಾ ಕರಿನಾಗಣ್ಣನವರ, ಹುಚ್ಚಪ್ಪ ಗಿರೇಗೊಂಡ್ರ ಎಸ್‌ಡಿಎಂಸಿ ಸರ್ವಸದಸ್ಯರು ಹಾಗೂ ಮುಖ್ಯಶಿಕ್ಷಕ ಎಚ್ .ಎನ್. ಛಲವಾದಿ ಉಪಸ್ಥಿತರಿದ್ದರು. ಸಿಆರ್‌ಪಿ ಮಹದೇವ ಕರಿಯಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ. ಈಶಪ್ಪ ಸ್ವಾಗತಿಸಿದರು. ಸುಮನ ಮತ್ತು ಪೂರ್ವಿ ನಿರೂಪಿಸಿದರು. ಜಮೀರ ರಿತ್ತಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟನ್ ಕಬ್ಬಿಗೆ ₹1,000 ಹೆಚ್ಚುವರಿ ದರ ನಿಗದಿಗೆ ಪಟ್ಟು
ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ತಕ್ಷಣ ಆರಂಭಿಸಿ