ಹಾನಗಲ್ಲ: ಮಹರ್ಷಿ ವಾಲ್ಮೀಕಿ ಅವರು ಕೇವಲ ರಾಮಾಯಣ ಮಹಾಕಾವ್ಯದ ಕರ್ತೃ ಮಾತ್ರವಲ್ಲ, ಮಾನವೀಯ ಮೌಲ್ಯಗಳು, ಸಮಾನತೆ, ಸತ್ಯ ಮತ್ತು ಧರ್ಮದ ಪ್ರತಿಪಾದಕರಾಗಿದ್ದಾರೆ. ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಎಂತಹ ಬದಲಾವಣೆಯನ್ನು ಸಾಧಿಸಬಹುದು ಎನ್ನುವುದಕ್ಕೆ ಮಹರ್ಷಿ ವಾಲ್ಮೀಕಿ ಬದುಕೇ ನಮಗೆಲ್ಲ ಅತ್ಯುತ್ತಮ ಉದಾಹರಣೆ ಎಂದು ಶಾಸಕ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶ್ರೀನಿವಾಸ ಮಾನೆ ಹೇಳಿದರು.
ಸಾನ್ನಿಧ್ಯ ವಹಿಸಿದ್ದ ರಾಜನಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ತಮ್ಮ ಅಗಾಧ ಜ್ಞಾನ, ತಪ್ಪಸ್ಸು ಹಾಗೂ ಸಾಹಿತ್ಯಿಕ ಸಾಧನೆಯ ಮೂಲಕ ಭಾರತೀಯ ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ್ದಾರೆ. ರಾಮಾಯಣದ ಮೂಲಕ ಆದರ್ಶ ಕುಟುಂಬ, ಉತ್ತಮ ಆಡಳಿತ, ಸಹೋದರತ್ವ, ತ್ಯಾಗ ಮತ್ತು ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಅವರ ಸಾಹಿತ್ಯ ಇಂದಿನ ಯುವಪೀಳಿಗೆಗೆ ದಾರಿದೀಪವಾಗಿದೆ. ವಾಲ್ಮೀಕಿಯವರ ಜೀವನ ಸಾಧನೆ ಪ್ರತಿಯೊಬ್ಬರಲ್ಲಿಯೂ ಆತ್ಮವಿಶ್ವಾಸ ಮತ್ತು ಸಾಧನೆಯ ಛಲವನ್ನು ಮೂಡಿಸುತ್ತದೆ. ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾಸಭಾ ತಾಲೂಕಾಧ್ಯಕ್ಷ ಹನುಮಂತಪ್ಪ ಶಡಗರವಳ್ಳಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ಇಡೀ ಮನುಕುಲದ ಆಸ್ತಿ. ಅವರ ಚಿಂತನೆಗಳು ಜಾತಿ, ಧರ್ಮದ ಎಲ್ಲೆ ಮೀಡಿದ್ದು ಸರ್ವರಿಗೂ ಸಮಾನತೆ ಮತ್ತು ಮಾನವೀಯತೆಯ ಸಂದೇಶ ಸಾರುತ್ತವೆ. ಶಿಕ್ಷಣ ಮತ್ತು ಜ್ಞಾನದ ಮೂಲಕ ಸಮಾಜದಲ್ಲಿ ಪರಿವರ್ತನೆ ತರಬಹುದು ಎನ್ನುವುದನ್ನು ಅವರ ಬದುಕು ನಮಗೆ ಕಲಿಸುತ್ತದೆ. ವಿಶೇಷವಾಗಿ ಯುಜನತೆ ವಾಲ್ಮೀಕಿ ಅವರ ಜೀವನ ಚರಿತ್ರೆ ಹಾಗೂ ರಾಮಾಯಣದ ಮೌಲ್ಯಗಳನ್ನು ಅಧ್ಯಯನ ಮಾಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕಿದೆ ಎಂದರು.ತಹಸೀಲ್ದಾರ್ ವಿಠ್ಠಲ್ ಚೌಗಲಾ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹನುಮಂತಪ್ಪ ಮರಗಡಿ, ತಾಲೂಕಾಧ್ಯಕ್ಷ ವೀರಪ್ಪ ಬೈಲವಾಳ, ಮಹಾಸಭಾ ಜಿಲ್ಲಾಧ್ಯಕ್ಷ ರಮೇಶ ಆನವಟ್ಟಿ, ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಪುಟ್ಟಪ್ಪ ನರೇಗಲ್, ರವಿ ಲಕ್ಮಾಪುರ, ಪ್ರಕಾಶ ನಂದಿಕೊಪ್ಪ, ಶಿವು ತಳವಾರ, ತ್ಯಾಗರಾಜ್ ಓಲೇಕಾರ, ಲೋಹಿತ್ ಕಾಟಣ್ಣನವರ, ಬಸವರಾಜ ಡುಮ್ಮನವರ, ವಿನೋದ ವಾಲಿಕಾರ, ನಾಗರಾಜ್ ಶೀಗಿಹಳ್ಳಿ, ರತ್ನಮ್ಮ ಗುಡ್ಡದಮತ್ತಳ್ಳಿ, ಎಂ.ಎಚ್. ಹೊಸೂರ, ಮಹಾದೇವಿ ತಳವಾರ, ಪುಟ್ಟಪ್ಪ ವೆಂಕಟಾಪೂರ, ಸುಭಾಸ್ ತಳವಾರ, ಪ್ರಕಾಶ ಯಳ್ಳೂರ, ಬಸವಣ್ಣೆಪ್ಪ ವಾಲಿಕಾರ, ರಾಮಣ್ಣ ಮಡ್ಲೂರ, ಶಿವಾನಂದ ಕನ್ನಕ್ಕನವರ, ಪರಶುರಾಮ ಮುನಿಯಣ್ಣನವರ ಸೇರಿದಂತೆ ಇನ್ನೂ ಹಲವರು ಇದ್ದರು.