ಸರ್ಕಾರಿ ಶಾಲೆ ಬೆಳವಣಿಗೆಗೆ ಸಮಾಜದ ಪ್ರತಿಯೊಬ್ಬರ ಸಹಕಾರ ಅಗತ್ಯ: ಶಬಾನಾ ಅಂಜುಮ್ ಕರೆ

KannadaprabhaNewsNetwork |  
Published : Dec 06, 2025, 02:15 AM IST
ನರಸಿಂಹರಾಜಪುರ ತಾಲೂಕಿನ ಗುಳದಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಕ್ಲಬ್ ವತಿಯಿಂದ ಶಾಲೆಗೆ ಸ್ಮಾರ್ಟ್ ಕ್ಲಾಸ್ ಕೊಡುಗೆಾಗಿ ನೀಡಿದ ಸಮಾರಂಭವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಉದ್ಘಾಟಿಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರ ಸರ್ಕಾರಿ ಶಾಲೆ ಬೆಳವಣಿಗೆ ಹೊಂದಬೇಕಾದರೆ ಸಮಾಜದ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಕರೆ ನೀಡಿದರು.

- ಗುಳದ ಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಸಂಸ್ಥೆಯಿಂದ ಸ್ಮಾರ್ಟ್ ಕ್ಲಾಸ್ ಕೊಡುಗೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಸರ್ಕಾರಿ ಶಾಲೆ ಬೆಳವಣಿಗೆ ಹೊಂದಬೇಕಾದರೆ ಸಮಾಜದ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಕರೆ ನೀಡಿದರು.

ಗುರುವಾರ ಕಡಹಿನಬೈಲು ಗ್ರಾಮ ಪಂಚಾಯಿತಿಯ ಗುಳದಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಕ್ಲಬ್ ನಿಂದ ಶಾಲೆಗೆ ಸ್ಮಾರ್ಟ್ ಕ್ಲಾಸ್ ಕೊಡುಗೆ ನೀಡಿದ ಸಮಾರಂಭವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಗ್ರಾಪಂ, ಹಳೇ ವಿದ್ಯಾರ್ಥಿ ಸಂಘ, ಎಸ್.ಡಿ.ಸಿ ಹಾಗೂ ಪೋಷಕರು ಶಾಲೆಗಳ ಮೂಲ ಭೂತ ಸೌಕರ್ಯ ಗಳಿಗೆ ಸಹಾಯ ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ ಕಲಿತವರು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಿದ್ದಾರೆ. ಉನ್ನತ ಹುದ್ದೆಗೆ ಏರಿದ್ದಾರೆ. ಸರ್ಕಾರ ಶಿಕ್ಷಣಕ್ಕಾಗಿ ಲಕ್ಷಾಂತರ ರು. ಖರ್ಚು ಮಾಡುತ್ತಿದೆ. ಆದ್ದರಿಂದ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಬೇಕು. ಗುಳದಮನೆ ಶಾಲೆಯ ಶಿಕ್ಷಕಿ ಶಿಲ್ಪ ಕುಮಾರಿ ಅವರ ಪ್ರಯತ್ನದಿಂದ ಈ ಸರ್ಕಾರಿ ಶಾಲೆ ಉಳಿದುಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲೆಗೆ ಸ್ಮಾರ್ಟ್ ಕ್ಲಾಸ್ ಕೊಡುಗೆಯಾಗಿ ನೀಡಿದ ರೋಟರಿ ಸಂಸ್ಥೆ ಅಧ್ಯಕ್ಷ ಕಣಿವೆ ವಿನಯ್ ಮಾತನಾಡಿ, ಖಾಸಗಿ ಶಾಲೆಗೆ ಮಕ್ಕಳನ್ನು ಕಲಿಸಿದರೆ ಉತ್ತಮ ಶಿಕ್ಷಣ ಸಿಗುತ್ತದೆ ಎಂಬುದು ಫೋಷಕರ ಭ್ರಮೆ. ಬಹಳ ವರ್ಷಗಳ ಹಿಂದೆ ಶಿಕ್ಷಣ ನೀಡುವಾಗ ಶೇ. 80 ರಷ್ಟು ಸಂಸ್ಕಾರ ಕಲಿಸಲಾಗುತ್ತಿತ್ತು. ಈಗ ಬದಲಾಗಿದ್ದು ಶೇ. 20 ರಷ್ಟು ಮಾತ್ರ ಸಂಸ್ಕಾರ ಕಲಿಸಲಾಗುತ್ತಿದೆ. ಪ್ರಸ್ತುತ ಮಕ್ಕಳು ವಿದ್ಯಾವಂತರಾಗಿ ವಿದೇಶದಲ್ಲಿದ್ದಾರೆ. ಆದರೆ, ತಂದೆ,ತಾಯಿಗಳನ್ನು ವೃದ್ದಾಶ್ರಮಕ್ಕೆ ಸೇರಿಸುತ್ತಿರುವುದು ವಿಪರ್ಯಾಸ.

ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿದರೆ ಮಾತ್ರ ಮುಂದಿನ ಜೀವನ ಸುಖವಾಗಲಿದೆ. ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ನಿಜವಾದ ಪ್ರತಿಭೆ ಹುಟ್ಟುತ್ತಿದೆ. ಈ ದೇಶದಲ್ಲಿ ಸಂಸ್ಕಾರ ಉಳಿಯಬೇಕಾದರೆ ಸರ್ಕಾರಿ ಶಾಲೆಗಳು ಉಳಿಯಬೇಕು ಎಂದು ಅಭಿಪ್ರಾಯಪಟ್ಟರು.

ಗುಳದಮನೆ ಸರ್ಕಾರಿ ಶಾಲೆ ಎಸ್.ಡಿ.ಎಂ.ಸಿ.ಅಧ್ಯಕ್ಷ ವಿಜು ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಪಿ.ಎಸ್.ವಿದ್ಯಾನಂದಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಎಚ್.ಟಿ.ಧನಂಜಯ ಸ್ಮಾರ್ಟ್ ಕ್ಲಾಸ್ ಅನಾವರಣಗೊಳಿಸಿದರು. ಮುಖ್ಯ ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷೆ ಲಿಲ್ಲಿ ಮಾತುಕುಟ್ಟಿ, ಉಪಾಧ್ಯಕ್ಷ ಸುನೀಲ್ ಕುಮಾರ್, ಸದಸ್ಯೆ ಅಶ್ವಿನಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಸ್.ಎಸ್.ಸಂತೋಷ್ ಕುಮಾರ್, ಕಸಾಪ ನಿಕಟಪೂರ್ವ ಅಧ್ಯಕ್ಷ ಎನ್.ಎಂ.ಕಾಂತರಾಜ್, ರೋಟರಿ ಕ್ಲಬ್ ಕಾರ್ಯದರ್ಶಿ ಕಟಗಳಲೆ ಲೋಕೇಶ್,ಸಿ.ಆರ್.ಪಿ.ತಿಮ್ಮಮ್ಮ, ಪಿಡಿಒ ವಿಂದ್ಯಾ,ಶಾಲಾ ಮುಖ್ಯೋಪಾಧ್ಯಾಯಿನಿ ಶಿಲ್ಪಕುಮಾರಿ ಇದ್ದರು.

ಇದೇ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ.ಸಿಯಿಂದ ಮಕ್ಕಳಿಗೆ ಪ್ರಗತಿ ಪತ್ರ ವಿತರಣೆ, ಅಭಿನಂದನಾ ಪತ್ರ ನೀಡಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಹಾಗೂ ಸ್ಮಾರ್ಟ್ ಕ್ಲಾಸ್ ನೀಡಿದ ರೋಟರಿ ಕ್ಲಬ್ ಅಧ್ಯಕ್ಷ ಕಣಿವೆ ವಿನಯ ಅವರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲ ಭಾಷೆ ಕಲಿಯಿರಿ, ಕನ್ನಡವನ್ನು ಪ್ರೀತಿಸಿ, ಬೆಳೆಸಿ
ರಾಟ್ ವೀಲರ್ ನಾಯಿ ದಾಳಿಗೆ ಮಹಿಳೆ ಬಲಿ