ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತಾರದ ಸರ್ಕಾರಿ ಶಾಲೆಗಳು: ಶಾಸಕ ಎಚ್.ಟಿ.ಮಂಜು ಬೇಸರ

KannadaprabhaNewsNetwork |  
Published : May 08, 2025, 12:38 AM IST
7ಕೆಎಂಎನ್ ಡಿ16  | Kannada Prabha

ಸಾರಾಂಶ

ಕೆ.ಆರ್.ಪೇಟೆ ತಾಲೂಕಿನಲ್ಲಿ 23 ಸರ್ಕಾರಿ ಪ್ರೌಢಶಾಲೆಗಳಲ್ಲಿ ಹರಿಹರಪುರ ಸರ್ಕಾರಿ ಪ್ರೌಢಶಾಲೆ ಶೇ.92 ಕ್ಕೂ ಅಧಿಕ ಫಲಿತಾಂಶ ನೀಡಿದೆ. ಆದರೆ, ಉಳಿದೆಲ್ಲಾ ಶಾಲೆಗಳು ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಇದರಿಂದ ತಾಲೂಕಿನ ಶೇಕಡವಾರು ಫಲಿತಾಂಶ ಕೇವಲ 60.89 ಕ್ಕೆ ಕುಸಿದಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ಯಾವುದೇ ಒಂದು ಸರ್ಕಾರಿ ಶಾಲೆಗಳು ಉತ್ತಮ ಫಲಿತಾಂಶದ ಸಾಧನೆ ಮಾಡದಿರುವುದು ಬೇಸರ ತರಿಸಿದೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.

ಪಟ್ಟಣದ ಕೆ.ಪಿ.ಎಸ್.ಶಾಲೆಯ ಆವರಣ ಬಿಆರ್‌ಸಿ ತರಬೇತಿ ಕೇಂದ್ರದ ಆವರಣದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತ ಹಿನ್ನೆಲೆಯಲ್ಲಿ ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಜೊತೆ ಸಮಾಲೋಚನಾ ಸಭೆ ನಡೆಸಿ ಮಾತನಾಡಿದರು.

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ಖಾಸಗಿ ಶಾಲೆ ಮಗು 625 ಅಂಕಗಳಿಸಿ ರಾಜ್ಯದ ಟಾಪ್ ಸಾಲಿಗೆ ಸೇರಿದ್ದು, ನನಗೆ ಅತೀವ ಸಂತಸ ತಂದಿದೆ. ಅದೇ ರೀತಿ ಹಲವು ಖಾಸಗಿ ಶಾಲೆ ಮಕ್ಕಳು ಉತ್ತಮ ಅಂಕಗಳಿಸಿ ಗಮನ ಸೆಳೆದಿದ್ದಾರೆ ಎಂದರು.

ತಾಲೂಕಿನಲ್ಲಿ 23 ಸರ್ಕಾರಿ ಪ್ರೌಢಶಾಲೆಗಳಲ್ಲಿ ಹರಿಹರಪುರ ಸರ್ಕಾರಿ ಪ್ರೌಢಶಾಲೆ ಶೇ.92 ಕ್ಕೂ ಅಧಿಕ ಫಲಿತಾಂಶ ನೀಡಿದೆ. ಆದರೆ, ಉಳಿದೆಲ್ಲಾ ಶಾಲೆಗಳು ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಇದರಿಂದ ತಾಲೂಕಿನ ಶೇಕಡವಾರು ಫಲಿತಾಂಶ ಕೇವಲ 60.89 ಕ್ಕೆ ಕುಸಿದಿದೆ ಎಂದರು.

ಯಾವುದೇ ಒಂದು ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶದ ಸಾಧನೆ ಮಾಡಿಲ್ಲ. ತಾಲೂಕಿನ 6 ಮೊರಾರ್ಜಿ ವಸತಿ ಶಾಲೆಗಳಲ್ಲಿ ಗವೀಮಠದ ಮೊರಾರ್ಜಿ ಶಾಲೆ ಮಾತ್ರ ಶೇ.100 ಫಲಿತಾಂಶ ಪಡೆದಿದೆ. ಉಳಿದ 5 ವಸತಿ ಶಾಲೆಗಳು ನಿರೀಕ್ಷಿತ ಸಾಧನೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶಿಕ್ಷಕರು ಹೆಚ್ಚು ಬುದ್ದಿವಂತರು. ಅವರಿಗೆ ಶಾಸಕನಾಗಿ ನಾನು ತಿಳಿವಳಿಕೆ ಹೇಳುವುದು ಸರಿಯಲ್ಲ. ಸರ್ಕಾರ ಅರ್ಹತೆ ಆಧರಿಸಿ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಿ ಶಾಲೆಗಳಿಗೆ ನೇಮಕ ಮಾಡುತ್ತಿದೆ. ಶಿಕ್ಷಕ ಸಮುದಾಯಕ್ಕೆ ಕೈತುಂಬಾ ಸಂಬಳ, ಕಾಲಕಾಲಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡುತ್ತಿದೆ. ಆದರೂ ಶಿಕ್ಷಕರು ತಮ್ಮ ತಮ್ಮ ಶಾಲೆಗಳಲ್ಲಿ ಉತ್ತಮ ಫಲಿತಾಂಶ ನೀಡುತ್ತಿಲ್ಲ ಎಂದರೆ ಇದಕ್ಕೆ ಏನು ಹೇಳಬೇಕು ಎಂದು ಪ್ರಶ್ನಿಸಿದರು.

ಫಲಿತಾಂಶ ಕುಸಿತದ ಪರಿಣಾಮ ಸರ್ಕಾರಿ ಶಾಲೆಗಳ ಬಗ್ಗೆ ಪೋಷಕ ಸಮುದಾಯ ನಂಬಿಕೆ ಕಳೆದುಕೊಳ್ಳುತ್ತಿದೆ. ಶಾಲೆಗಳಲ್ಲಿರುವ ಅಲ್ಪ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕ ಸಮುದಾಯ ವಿಫಲವಾಗುವುದಾರೆ ಅವರು ಅರ್ಹತಾ ಪರೀಕ್ಷೆಗಳನ್ನು ಬರೆದು ಸರ್ಕಾರಿ ಶಾಲೆಗಳಿಗೆ ಶಿಕ್ಷಕರಾಗಿ ಆಯ್ಕೆಯಾಗಿದರೂ ಏನು ಅರ್ಥವಿದೆ ಎಂದರು.

ಫಲಿತಾಂಶ ಕುಸಿತದ ಬಗ್ಗೆ ಶಿಕ್ಷಕ ಸಮುದಾಯ ಸಬೂಬು ಹೇಳುವುದನ್ನು ನಿಲ್ಲಿಸಬೇಕು. ಮಕ್ಕಳ ಫಲಿತಾಂಶದ ಬಗ್ಗೆ ಉದಾಸೀನ ಸಲ್ಲದು. ಶಿಕ್ಷಕ ಸಮುದಾಯ ಸಮಾಜದ ನಂಬಿಕೆ ಕಳೆದುಕೊಳ್ಳಬಾರದು. ಶಿಕ್ಷಕರು ತಮ್ಮ ಆತ್ಮಸಾಕ್ಷಿಗೆ ದ್ರೋಹ ಮಾಡಿಕೊಳ್ಳಬಾರದು ಎಂದರು.

ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ, ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಆರ್. ವೆಂಕಟೇಶ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಂ.ಬಸವರಾಜು, ಶಿಕ್ಷಕ ಸಂಘದ ಪ್ರತಿನಿಧಿ ಪುಟ್ಟರಾಜು, ವಿವಿಧ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಇದ್ದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?