ಸರ್ಕಾರ ಮೇಯರ್‌ ಕಾಲಾವಧಿ ಹೆಚ್ಚಿಸಲಿ

KannadaprabhaNewsNetwork |  
Published : Jun 29, 2025, 01:33 AM IST
28ಎಚ್‌ಯುಬಿ30ಸಾರ್ಥಕ ಸಂಭ್ರಮ ಕಾರ್ಯಕ್ರಮದಲ್ಲಿ ಮೇಯರ್ ರಾಮಣ್ಣ ಬಡಿಗೇರ ಅವರನ್ನು ಅಭಿನಂದಿಸಲಾಯಿತು. | Kannada Prabha

ಸಾರಾಂಶ

ನನಗೆ ಸಿಕ್ಕ ಒಂದು ವರ್ಷದಲ್ಲಿ ಜನರಿಗೆ ಹತ್ತಿರವಾದ ಕೆಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದೇನೆ. ಪೋನ್‌- ಇನ್‌ಗೆ ಬಂದ ಸಮಸ್ಯೆಗಳಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿಯೇ ಬಗೆಹರಿಸುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಸರ್ಕಾರ ಮಟ್ಟದಲ್ಲಿ ಆಗಬೇಕಾದ ಕೆಲಸಗಳನ್ನು ಸರ್ಕಾರಕ್ಕೆ ಬರೆದು ತಿಳಿಸಲಾಗಿದೆ. ಒಂದು ವರ್ಷದ ಮೇಯರ್ ಅವಧಿಯಲ್ಲಿ ಎಲ್ಲ ಸಮಸ್ಯೆಗಳಿಗೆ ಸ್ಪಂದನೆ ಅಸಾಧ್ಯ, ಆದಾಗ್ಯೂ ಉತ್ತಮ ಕೆಲಸಗಳನ್ನು ಮಾಡಿದ ಸಂತೃಪ್ತಿಯಿದೆ.

ಹುಬ್ಬಳ್ಳಿ: ಕರ್ನಾಟಕ ಮತ್ತು ಚಂಡೀಗಢನಲ್ಲಿ ಮೇಯರ್ ಅವಧಿ ಒಂದು ವರ್ಷ. ಇಷ್ಟು ಸಣ್ಣ ಅವಧಿಯಲ್ಲಿ ಜನರ ಕೆಲಸ ಮಾಡಲು ಆಗುವುದಿಲ್ಲ. ಅದಕ್ಕಾಗಿ ಮೇಯರ್ ಅವಧಿಯನ್ನು 5 ವರ್ಷ ಇಲ್ಲವೇ ಎರಡೂವರೆ ವರ್ಷಕ್ಕೆ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಿದೆ ಎಂದು ಮೇಯರ್‌ ರಾಮಪ್ಪ ಬಡಿಗೇರ ಹೇಳಿದರು.

ಜೂ. 28ಕ್ಕೆ ಮೇಯರ್ ಅಧಿಕಾರಾವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಶನಿವಾರ ನಗರದ ಕರ್ನಾಟಕ ಜಿಮ್‌ಖಾನಾ ಕ್ಲಬ್‌ನ ಸಭಾಭವನದಲ್ಲಿ ಆಯೋಜಿಸಿದ್ದ ಸಾರ್ಥಕ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನನಗೆ ಸಿಕ್ಕ ಒಂದು ವರ್ಷದಲ್ಲಿ ಜನರಿಗೆ ಹತ್ತಿರವಾದ ಕೆಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದೇನೆ. ಪೋನ್‌- ಇನ್‌ಗೆ ಬಂದ ಸಮಸ್ಯೆಗಳಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿಯೇ ಬಗೆಹರಿಸುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಸರ್ಕಾರ ಮಟ್ಟದಲ್ಲಿ ಆಗಬೇಕಾದ ಕೆಲಸಗಳನ್ನು ಸರ್ಕಾರಕ್ಕೆ ಬರೆದು ತಿಳಿಸಲಾಗಿದೆ. ಒಂದು ವರ್ಷದ ಮೇಯರ್ ಅವಧಿಯಲ್ಲಿ ಎಲ್ಲ ಸಮಸ್ಯೆಗಳಿಗೆ ಸ್ಪಂದನೆ ಅಸಾಧ್ಯ, ಆದಾಗ್ಯೂ ಉತ್ತಮ ಕೆಲಸಗಳನ್ನು ಮಾಡಿದ ಸಂತೃಪ್ತಿಯಿದೆ ಎಂದರು.

ಘನತ್ಯಾಜ್ಯ ಸಮಸ್ಯೆ ನಿವಾರಣೆಗೆ ಅನೇಕ ಹೊಸ ಪ್ರಯತ್ನ ಮಾಡಲಾಗಿದೆ. ಈಗಾಗಲೇ ಖಾಸಗಿ ಕಂಪನಿಗೆ ಕಸ ಕರಗಿಸುವ ಟೆಂಡರ್ ನೀಡಲಾಗಿದೆ. ಆ ಎಲ್ಲ ಕಸದ ಗುಡ್ಡೆಗಳು ಕರಗಿದರೆ, ಇಂದೋರ್‌ಗಿಂತ ಹು-ಧಾ ಮಹಾನಗರ ಪಾಲಿಕೆಯೇ ದೇಶಕ್ಕೆ ಮಾದರಿಯಾಗಲಿದೆ ಎಂದು ಹೇಳಿದರು.

ಪಾಲಿಕೆ ಏನೆಲ್ಲ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡರೂ ಅವುಗಳ ಬಗ್ಗೆ ಜನರಿಗೆ ಸಮಾಧಾನವಿಲ್ಲ. ಈಗಲೂ ಪಾಲಿಕೆಯನ್ನು ತಿರಸ್ಕಾರ ಭಾವನೆಯಿಂದಲೇ ನೋಡುತ್ತಿದ್ದಾರೆ. ಇದರಿಂದ ಪಾಲಿಕೆ ಹೊರಬರಬೇಕಿದೆ. 127 ಪೌರ ಕಾರ್ಮಿಕರನ್ನು ಕಾಯಂಗೊಳಿಸಲಾಗಿದೆ. ಪಾಲಿಕೆ ಸದಸ್ಯರ ವಾರ್ಡ್ ಅನುದಾನವನ್ನು ₹1 ಕೋಟಿಗೆ ಹೆಚ್ಚಿಸಿದ್ದೇನೆ. ವಲಯವಾರು ಇ-ಸ್ವತ್ತು ಹಾಗೂ ಟ್ಯಾಕ್ಸ್ ಮೇಳ ನಡೆಸಿ ಸಂಪನ್ಮೂಲ ಕ್ರೋಢಿಕರಣಕ್ಕೆ ಒತ್ತು ನೀಡಿದ್ದೇನೆ. ಪಾಲಿಕೆ ಹಾಗೂ ಕೆಐಎಡಿಬಿಗೆ ಟ್ಯಾಕ್ಸ್ ಪಾವತಿಸಬೇಕಿದ್ದ ಕೈಗಾರಿಕೆಗಳಿಗೆ ಆರು ವರ್ಷದ ಟ್ಯಾಕ್ಸ್ ಪಾವತಿಸಿಕೊಂಡು ಒಂದೇ ಕಡೆ ತೆರಿಗೆ ನೀಡುವ ವ್ಯವಸ್ಥೆ ಜಾರಿಗೆ ತರುವ ಮೂಲಕ ಕೈಗಾರಿಕೆಗಳನ್ನು ಉತ್ತೇಜಿಸುವ ಕೆಲಸ ಮಾಡಿದ್ದೇನೆ ಎಂದರು.

ನನ್ನ ಅಧಿಕಾರವಧಿಯಲ್ಲಿಯೇ 24x7 ಕುಡಿಯುವ ನೀರು ಒದಗಿಸುವ ಭರವಸೆ ನೀಡಿದ್ದೆ. ಕೆಲ ತಾಂತ್ರಿಕ ಕಾರಣಗಳಿಂದ ನೀಡಲು ಸಾಧ್ಯವಾಗಿಲ್ಲ. ಆ ಕಾಮಗಾರಿಗೆ ಇದ್ದ ಅಡೆತಡೆಗಳನ್ನು ನಿವಾರಿಸುವಲ್ಲಿ ಯಶಸ್ವಿಯಾಗಿದ್ದು, ಶೀಘ್ರದಲ್ಲಿಯೇ ಯೋಜನೆ ಅನುಷ್ಠಾನಗೊಳ್ಳಲಿದೆ. ನಗರ ಪಕ್ಕದ ಐದು ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು ಟೆಂಡರ್ ನೀಡಲಾಗಿದೆ. ಒಂದೆರಡು ತಿಂಗಳಲ್ಲಿ ಈ ಯೋಜನೆ ಆರಂಭವಾಗಲಿದೆ ಎಂದರು.

ಕಿರ್ಲೋಸ್ಕರ್ ಫ್ಯಾಕ್ಟರಿಯಲ್ಲಿ ನೌಕರನಾಗಿದ್ದ ನನ್ನನ್ನು ದಿ. ಎಸ್.ಆರ್. ಬೊಮ್ಮಾಯಿ ಅವರು ರಾಜಕೀಯಕ್ಕೆ ಕರೆತಂದು ಪಾಲಿಕೆ ಸದಸ್ಯನನ್ನಾಗಿ ಮಾಡಿದರು. ನಂತರದಲ್ಲಿ ಸ್ಥಳೀಯ ಬಿಜೆಪಿ ನಾಯಕರ ಹಾಗೂ ವಾರ್ಡ್ ಜನರ ಸಹಕಾರದಿಂದ ಮೇಯರ್ ಸೇರಿದಂತೆ ಪಾಲಿಕೆಯ ಎಲ್ಲ ಸ್ಥರದ ಹುದ್ದೆಗಳನ್ನು ನಿಭಾಯಿಸಿದ್ದೇನೆ ಎಂದು ತಿಳಿಸಿದರು.

ಇದೇ ವೇಳೆ ಪಾಲಿಕೆ ಸದಸ್ಯರು ಮೇಯರ್ ರಾಮಪ್ಪ ಅವರನ್ನು ಸನ್ಮಾನಿಸಿದರು. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ, ಪಾಲಿಕೆ ಉಪಮೇಯರ್ ದುರ್ಗಮ್ಮ ಬಿಜವಾಡ, ಸಭಾನಾಯಕ ವೀರಣ್ಣ ಸವಡಿ, ಆಯುಕ್ತ ರುದ್ರೇಶ್ ಘಾಳಿ, ವಿರೋಧ ಪಕ್ಷದ ನಾಯಕ ರಾಜಶೇಖರ ಕುಮತಿ ಮಾತನಾಡಿ, ರಾಮಣ್ಣ ಬಡಿಗೇರ ಅವರ ಸರಳ ಸಜ್ಜನಿಕೆ ಹಾಗೂ ಆಡಳಿತ ವೈಖರಿಯನ್ನು ಶ್ಲಾಘಿಸಿದರು.

ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ತಿಪ್ಪಣ್ಣ ಮಜ್ಜಗಿ, ಶಿವು ಹಿರೇಮಠ, ಉಮೇಶಗೌಡ ಕೌಜಗೇರಿ, ಸಂತೋಷ ಚವ್ಹಾಣ, ರಾಧಾಭಾಯಿ ಸಫಾರೆ, ರೂಪಾ ಶೆಟ್ಟಿ, ಇಮ್ರಾನ್ ಯಲಿಗಾರ ಸೇರಿದಂತೆ ಪಾಲಿಕೆಯ ಬಹುತೇಕ ಸದಸ್ಯರು, ಪಾಲಿಕೆ ಅಧಿಕಾರಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ