ಕೊಟ್ಟೂರು: ಸರ್ಕಾರ ಪ್ರತಿ ರೈತ ಕುಟುಂಬಕ್ಕೆ ಬರ ಪರಿಹಾರವಾಗಿ ₹ 2500 ನೀಡುವ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ, ಬದಲಾಗಿ 25 ಸಾವಿರ ಪರಿಹಾರ ನೀಡುವ ಮೂಲಕ ನೊಂದ ರೈತರ ನೆರವಿಗೆ ಮುಂದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ ಒತ್ತಾಯಪಡಿಸಿದರು.
ಸರ್ಕಾರ ಮಹಿಳೆಯರು ಮತ್ತು ಯುವಕರು ಸೇರಿದಂತೆ ಎಲ್ಲರಿಂದಲೂ ವಿಶ್ವಾಸ ಮತ್ತು ನಂಬಿಕೆ ಕಳೆದುಕೊಂಡಿದೆ. ರೈತರ ಸ್ಥಿತಿಯಂತೂ ಯಾರೊಬ್ಬರು ಕೇಳದಂತಾಗಿದ್ದಾರೆ. ಬರವನ್ನು ಸಮರ್ಥವಾಗಿ ಎದುರಿಸಬೇಕಿದ್ದ ಸರ್ಕಾರ ಈ ವಿಷಯ ಗಂಭೀರವಾಗಿ ಪರಿಗಣಿಸದೇ ಕೇವಲ ತೋರಿಕೆಗಾಗಿ 3 ದಿನದ ವಿಧಾನಸಭೆ ಅಧೀವೇಶನ ನಡೆಸಿ ಕೈ ತೊಳೆದುಕೊಂಡಿದೆ. ವಿರೋಧ ಪಕ್ಷದವರು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯ ಅಧ್ಯಯನ ಮತ್ತು ಸಮೀಕ್ಷೆ ಕೈಗೊಂಡು ಸರ್ಕಾರದ ಗಮನ ಸೆಳೆದಿದ್ದಾರೆ. ರಾಜ್ಯದ ಯಾವುದೇ ಸಚಿವರು ಬರದ ಸಂಪೂರ್ಣ ಸಮೀಕ್ಷೆ ಇಲ್ಲವೇ ವೀಕ್ಷಣೆ ಮಾಡುವ ಕಾರ್ಯದತ್ತ ಮುಂದಾಗದೇ ಕೇವಲ ಬೂಟಾಟಿಕೆ, ಪ್ರಚಾರದ ತಂತ್ರಕ್ಕೆ ಸೀಮಿತಗೊಂಡು ಕೋಟ್ಯಂತರ ಅನುದಾನ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಅವರು, ಸರ್ಕಾರ ಸದ್ಯದ ಮಟ್ಟಿಗೆ ಹೆಚ್ಚಿನ ಸಾಲ ಪಡೆಯಲು ಅರ್ಹತೆ ಪಡೆಯದಂತಾಗಿದೆ. ಸಾಲ ಪಡೆಯಲು ಇದೀಗ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಬೇಕಾದ ಪ್ರಮೇಯ ಬಂದಿದೆ ಎಂದರು.
ಬಿಜೆಪಿ ಪ್ರತಿ ಹಂತದಲ್ಲೂ ಸರ್ಕಾರದ ಗಮನ ಸೆಳೆಯುತ್ತ ಬಂದಿದೆ. ಮುಂದೆಯೂ ಸಹ ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಸಾಗಿಸಿ ಜನತೆಯ ನೆರವಿಗೆ ಬರುತ್ತೇವೆ ಎಂದು ಹೇಳಿದರು.ಬಿಜೆಪಿ ಜಿಲ್ಲಾ ಪ್ರಭಾರಿ ಪಿ. ಚನ್ನಬಸವನಗೌಡ, ಕೊಟ್ಟೂರು ಅಧ್ಯಕ್ಷ ಪಂಪಾಪತಿ ಅಂಗಡಿ, ವಿಕ್ರಮ್ ನಂದಿ, ತಾಪಂ ಮಾಜಿ ಅಧ್ಯಕ್ಷ ಗುರುಮೂರ್ತಿ ಹರಾಳು, ಪಪಂ ಮಾಜಿ ಉಪಾಧ್ಯಕ್ಷ ಜಿ. ಸಿದ್ದಯ್ಯ, ಬಿಜೆಪಿ ಮಾಜಿ ಅಧ್ಯಕ್ಷ ವೀರೇಶಗೌಡ, ಬಸವರಾಜ, ಚಿರಿಬಿ ನಾಗರಾಜ, ಅಭಿ ಮತ್ತಿತರರು ಇದ್ದರು.