ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಜಾತಿಗೊಂದು ಜಯಂತಿ, ನಿಗಮಗಳ ಸ್ಥಾಪನೆಗಳ ಮೂಲಕ ಸರ್ಕಾರಗಳು ಸಮುದಾಯಗಳನ್ನು ಒಗ್ಗೂಡಿಸುವ ಬದಲು ಒಡೆದು ಆಳುವ ನೀತಿ ಅನುಸರಿಸುತ್ತಿವೆ ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಕಿಡಿಕಾರಿದರು.ತಾಲೂಕಿನ ಹೇಮಗಿರಿಯಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶಾಖಾ ಮಠಕ್ಕೆ ಸೇರಿದ ಬಿಜಿಎಸ್ ಕೇಂದ್ರೀಯ ಶಿಕ್ಷಣ ಶಾಲೆಯಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಜಯಂತಿಗಳಿಂದಾಗಿ ಮಾನವತಾ ವಾದಿಗಳಾದ ಮಹಾನ್ ಪುರುಷರು ಜಾತಿವಾದಿಗಳ ಹಿಡಿತಕ್ಕೆ ಸಿಲುಕಿದ್ದಾರೆ. ಇದೊಂದು ಸಾಮಾಜಿಕ ದುರಂತ. ಮುಂದಿನ ದಿನಗಳಲ್ಲಿ ಸರ್ಕಾರದ ಜಯಂತಿಗಳು ಸಮಾಜಕ್ಕೆ ಮಾರಕವಾಗಲಿವೆ. ಮಹನೀಯರ ವಿಚಾರಗಳನ್ನು ಪಠ್ಯದಲ್ಲಿ ಅಳವಡಿಸಿ ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕು. ಕಾಯಕ ತತ್ವದ ಅಡಿಯಲ್ಲಿ ಸಮಾಜವನ್ನು ಕಟ್ಟುವ ಕೆಲಸವಾಗಬೇಕು ಎಂದರು.ಒಂದು ಸರ್ಕಾರ ಮಾಡಬೇಕಾದ ಕೆಲಸಗಳನ್ನು ಮಠಗಳು ಮಾಡುತ್ತಿವೆ. ನನಗೆ ಕನ್ನಡ ಬಿಟ್ಟು ಬೇರೆ ಭಾಷೆಗಳು ಬರುವುದಿಲ್ಲ. ಕನ್ನಡದ ತಳಹದಿ ಮೇಲೆ 35 ದೇಶಗಳನ್ನು ಸುತ್ತುತ್ತಿದ್ದೇನೆ. ಬೇರೆ ಬೇರೆ ದೇಶಗಳಲ್ಲಿ ಅಲ್ಲಿನ ಸರ್ಕಾರಗಳು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಉಚಿತಗೊಳಿಸಿವೆ. ಆದರೆ, ಇಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಖಾಸಗೀಕರಣ ಮಾಡುತ್ತಿವೆ ಸರ್ಕಾರಗಳ ವಿರುದ್ಧ ಕಿಡಿಕಾರಿದರು.
ಕನ್ನಡದ ಬಗ್ಗೆ ಕೀಳರಿಮೆ ಸಲ್ಲದು. ಚೆನ್ನಾಗಿ ಇಂಗ್ಲಿಷ್ ಕಲಿಯಿರಿ. ಆದರೆ, ಕನ್ನಡದ ಮೇಲೆ ಪ್ರಭುತ್ವ ಸಾಧಿಸಬೇಕು. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿಯೇ ಇದೆ. ಎಳೆಯ ವಯಸ್ಸಿನಿಂದಲೇ ನಾವು ಸಮಯ ಪ್ರಜ್ಞೆ, ಸಾಂದರ್ಭಿಕ ಪ್ರಜ್ಞೆ ಮತ್ತು ಸಮುದಾಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದರು.ರಾಜಕಾರಣದಲ್ಲಿಂದು ಮೌಲ್ಯಗಳು ಮೆರಯಾಗುತ್ತಿವೆ. ಪ್ರಶಸ್ತಿಗಳು ಮೌಲ್ಯ ಕಳೆದುಕೊಳ್ಳುತ್ತಿವೆ. ಸಮಾಜದಲ್ಲಿಂದು ಒಳ್ಳೆಯ ರಾಜಕಾರಣಿಗಳ ಅಭಾವವಿದೆ. ನಾಡಪ್ರಭು ಕೆಂಪೇಗೌಡರಂತಹ ಜಾತ್ಯತೀತ ಮನೋಭಾವದ ದೂರದೃಷ್ಟಿಯ ನಾಯಕತ್ವ ಸಮಾಜಕ್ಕೆ ಬೇಕಾಗಿದೆ ಎಂದರು.
ಶಾಸಕ ಎಚ್.ಟಿ.ಮಂಜು ಮಾತನಾಡಿ, ಕೆಂಪೇಗೌಡರು ಸರ್ವ ಜನಾಂಗದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿದವರು. ಕೃಷಿ ಸಂಸ್ಕೃತಿಗೆ ಪೂರಕವಾಗಿ ಬೆಂಗಳೂರು ನಗರವನ್ನು ನಿರ್ಮಿಸಿದರು. ಮಹನೀಯರ ಜಯಂತಿಗಳು ಇಂದು ಸಮಾಜಕ್ಕೆ ಹೊರೆಯಾಗುತ್ತಿವೆ. ಇದರ ಬಗ್ಗೆ ಎಲ್ಲರೂ ಕೂಡಿ ಮರು ಚಿಂತನೆ ಮಾಡಬೇಕು ಎಂದರು.ರಾಜ್ಯ ಒಕ್ಕಲಿಗರ ಸಂಘದಿಂದ ಕೆ.ಆರ್.ಪೇಟೆಯಲ್ಲಿ ಒಂದು ನರ್ಸಿಂಗ್ ಕಾಲೇಜು ಹಾಗೂ ವಸತಿ ನಿಲಯ ಆರಂಭಿಸುವಂತೆ ಶಾಸಕರು ಮನವಿ ಮಾಡಿದರು. ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ನಾಡಪ್ರಭು ಕೆಂಪೇಗೌಡರನ್ನು ಕುರಿತು ವಿಶೇಷ ಉಪನ್ಯಾಸ ನೀಡಿದರು.
ಇದೇ ವೇಳೆ ಶಾಸಕ ಎಚ್.ಟಿ.ಮಂಜು ಮತ್ತು ಕ್ಷೇತ್ರದ ಮಾಜಿ ಶಾಸಕ ಎಂ.ಪುಟ್ಟಸ್ವಾಮೀಗೌಡ ಅವರ ಧರ್ಮಪತ್ನಿ ಎಸ್.ಎನ್.ವಿಜಯಲಕ್ಷ್ಮಿ ಅವರಿಗೆ ಕೆಂಪೇಗೌಡ ಪ್ರಶಸ್ತಿ ಪುರಸ್ಕಾರ ನೀಡಲಾಯಿತು.ಕಾರ್ಯಕ್ರಮದಲ್ಲಿ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿ ನೆಲ್ಲಿಗೆರೆ ಬಾಲು, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್, ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಇದ್ದರು.