ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸರ್ಕಾರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ ಮಾತು ಕೊಟ್ಟಂತೆ ಸರ್ಕಾರಿ ಉದ್ಯೋಗವನ್ನು ಮತ್ತು ₹25 ಲಕ್ಷ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿ ಜಿಲ್ಲೆಯ ಪ್ರಗತಿಪರ, ಕನ್ನಡಪರ, ರೈತಪರ ಹಾಗೂ ದಲಿತಪರ ಸಂಘಟನೆಗಳು ಒಗ್ಗೂಡಿ ಜು. 15ರಂದು ಚಾಮರಾಜನಗರ ಬಂದ್ ನಡೆಸಲು ತೀರ್ಮಾನಿಸಲಾಯಿತು.ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಜಿಲ್ಲೆಯ ಎಲ್ಲಾ ಪ್ರಗತಿಪರ, ರೈತಪರ, ಕನ್ನಡಪರ, ದಲಿತಪರ ಹೋರಾಟಗಾರರು ಹಾಗೂ ಸಂತ್ರಸ್ತ ಕುಟುಂಬಗಳ ಸದಸ್ಯರ ಸಭೆಯಲ್ಲಿ ಮಾತನಾಡಿದ ಮುಖಂಡರು, ಬಂದ್ ನಡೆಸುವ ತೀರ್ಮಾನ ಕೈಗೊಂಡರು. ಜು. 2 ರಂದು ಸಚಿವ ಸಂಪುಟ ಸಭೆ ನಿಗಧಿಯಾಗಿದೆ. ಆಕ್ಷಿಜನ್ ದುರಂತದ ಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗುವಂತೆ ಮಾಡಲು ಈ ಬಂದ್ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕೂ ಸ್ಪಂದಿಸದಿದ್ದರೆ ಹಂತ ಹಂತವಾಗಿ ನಿರಂತರವಾಗಿ ಹೋರಾಟ ಮಾಡುತ್ತಾ ಚಳಿಗಾಲದ ಅಧಿವೇಶನ ನಡೆಯುವ ವೇಳೆ ಸಂತ್ರಸ್ತರೊಡಗೂಡಿ ಬೆಂಗಳೂರಿಗೆ ಪಾದಯಾತ್ರೆ ನಡೆಸಿ, ಪ್ರೀಡ್ಂ ಪಾರ್ಕಿನಲ್ಲಿ ಧರಣಿಗೆ ಮುಂದಾಗೋಣ ಎಂದು ತಿಳಿಸಿದರು.ಜು.3 ರಂದು ಜಿಲ್ಲಾ ಉಸ್ತುವಾರಿ ಸಚಿವರು ನಗರಕ್ಕೆ ಬರುತ್ತಿದ್ದಾರೆ, ಜಿಲ್ಲಾಧಿಕಾರಿಗಳು ತಿಳಿಸಿದಂತೆ ಉಸ್ತುವಾರಿ ಸಚಿವರ ಜೊತೆ ಮಾತುಕತೆಗೆ ಕರೆದರೆ ಹೋಗೋಣ ಅಲ್ಲಿ ಎಲ್ಲಾ ವಿವರವನ್ನು ತಿಳಿಸೋಣ. ನಮ್ಮ ಈ ಬಂದ್ ಯಶಸ್ವಿಯಾಗಬೇಕಾದರೆ ಅಕ್ಸಿಜನ್ ದುರಂತಕ್ಕೆ ಸಂಬಂಧಪಟ್ಟ 36 ಕುಟುಂಬಗಳು ಅತಿಮುಖ್ಯ, ಆದ್ದರಿಂದ ಎಲ್ಲಾ ಸಂತ್ರಸ್ತರ ಕುಟುಂಬದವರು ಪಾಲ್ಗೊಳ್ಳಬೇಕು ಎಂದರು.ದುರಂತದಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ಮತ್ತು ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ,36 ಮಂದಿ ಕುಟುಂಬಗಳ ಪೈಕಿ ಸರ್ಕಾರ 13 ಕುಟುಂಬಗಳಿಗೆ ತಲಾ 5 ಲಕ್ಷ ರು. ಪರಿಹಾರ ಹಾಗೂ 11 ಕುಟುಂಬಗಳಿಗೆ ತಲಾ 2 ಲಕ್ಷ ರು. ಪರಿಹಾರ ನೀಡಿದೆ. ಉಳಿದ 12 ಕುಟುಂಬಗಳಿಗೆ ಪರಿಹಾರ ನೀಡುವುದಿರಲಿ ಅವರನ್ನು ಪರಿಹಾರದ ಪಟ್ಟಿಗೆ ಸೇರಿಸಿಲ್ಲದಿರುವುದು ಅತ್ಯಂತ ಖಂಡನೀಯ ಎಂದರು.ಬೆಂಗಳೂರಿನಲ್ಲಿ ಆರ್.ಸಿ.ಬಿ. ವಿಜಯೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಕಾಲ್ತುಳಿತದಿಂದ ಮೃತಪಟ್ಟ ಸಂತ್ರಸ್ತರ ಕುಟುಂಬಗಳಿಗೆ ತಲಾ 25 ಲಕ್ಷ ರು. ಪರಿಹಾರವನ್ನು ನೀಡಿದೆ. ಸರ್ಕಾರದ ಇಂತಹ ತಾರತಮ್ಯ ನೀತಿ ಅನ್ಯಾಯದ ಪರಮಾವಧಿಯಾಗಿದೆ ಎಂದರು.ದುರಂತಕ್ಕೆ ಸಂಬಂಧಪಟ್ಟಂತೆ ಕಳೆದ 4 ವರ್ಷಗಳಿಂದ ಜಿಲ್ಲೆಯ ಹಲವಾರು ಸಂಘ ಸಂಸ್ಥೆಗಳು ಎಲ್ಲಾ ಹಂತದ ಹೋರಾಟಗಳನ್ನು ಮಾಡುತ್ತಾ ಬಂದಿವೆ. ರಾಹುಲ್ ಗಾಂದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ದುರಂತ ನಡೆದ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದಾಗ ಭರವಸ ನೀಡಿ ಈಗ ನಿರ್ಲಕ್ಷ್ಯ ವಹಿಸಿರುವುದು ಬಡವರ ಸಾವಿಗೆ ಬೆಲೆ ಇಲ್ಲದಂತಾಗಿದೆ ಎಂದರು.ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳದೇ ಸಂತ್ರಸ್ತರಿಗೆ ಘೋರ ಅನ್ಯಾಯ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕಾಲ್ತುಳಿತದಿಂದ ಮೃತಪಟ್ಟ ಕುಟುಂಬದವರಿಗೆ ಒಂದು ರೀತಿಯ ಪರಿಹಾರ ಮತ್ತು ಚಾಮರಾಜನಗರದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ ಮತ್ತೊಂದು ರೀತಿಯ ಪರಿಹಾರ ನೀಡುವುದು ಸರ್ಕಾರದ ಮಲತಾಯಿ ಧೋರಣೆಯಾಗಿದೆ, ಇದು ನಮ್ಮ ಕೊನೆಯ ಹಂತದ ಹೋರಾಟಗಳಾಗಿವೆ. ಬಂದ್ ಯಶಸ್ಸಿಗೆ ಎಲ್ಲರ ಸಹಕಾರವನ್ನು ಕೋರಿ, ಎಲ್ಲರಿಗೂ ಮನವರಿಕೆ ಮಾಡಿಕೊಟ್ಟು ಬಂದ್ ಯಶಸ್ವಿ ಮಾಡೋಣ ಎಂದರು. ಪರಿಸರವಾದಿ ಪುಣಜನೂರು ದೊರೆಸ್ವಾಮಿ ಮಾತನಾಡಿ, ಕಾನೂನು ಪ್ರಕಾರವಾಗಿ ಹೋರಾಟ ಮಾಡಿ ಸಂತ್ರಸ್ತರಿಗೆ ನ್ಯಾಯ ಕೊಡಿಸೋಣ ಏಕೆ ವಿಳಂವಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳೋಣ ಎಂದರು.ಸಭೆಯಲ್ಲಿ ಸಿ.ಎಂ. ಕೃಷ್ಣಮೂರ್ತಿ, ಅಬ್ರಾರ್ ಅಹಮ್ಮದ್, ಸಿ.ಎಂ.ಕೃಷ್ಣ ಮೂರ್ತಿ, ನಿಜಧ್ವನಿ ಗೋವಿಂದರಾಜು ಹಾಲಿನ ನಾಗರಾಜ್, ಬೆಳ್ಳಿಯಪ್ಪ, ನಮ್ಮನೆ ಪ್ರಶಾಂತ್, ದೊಡ್ಡಿಂದವಾಡಿ ಸಿದ್ದರಾಜು, ಎ.ಡಿ.ಸಿಲ್ವ ಸುರೇಶ್ ವಾಜಪೇಯಿ ತಮ್ಮ ತಮ್ಮ ಅಭಿಪ್ರಾಯ ತಿಳಿಸಿ ಬಂದ್ ಯಶಸ್ಸಿಗೆ ಎಲ್ಲರ ಸಹಕಾರ ಕೋರಿದರು. ಮಹಮ್ಮದ್ ಅಮಿತ್, ಸಂತ್ರಸ್ತರಾದ ನಾಗರತ್ನ, ಸುಶೀಲ, ಸೌಮ್ಯ, ರಘು, ಶಿವಣ್ಣ, ಲಕ್ಷ್ಮಿ, ಪುಷ್ಪ, ಸುನೀತಾ ಇತರರು ಭಾಗವಹಿಸಿದ್ದರು.