ಭೂಮಾಪಕರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭ

KannadaprabhaNewsNetwork |  
Published : Jul 01, 2025, 12:47 AM IST
30ಎಚ್ಎಸ್ಎನ್6  :ಅರಕಲಗೂಡಿನಲ್ಲಿ ಸೋಮವಾರ ತಾಲೂಕು ಪರವಾನಗಿ ಭೂ ಮಾಪಕರು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದರು. | Kannada Prabha

ಸಾರಾಂಶ

ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ತಮ್ಮ ಸೇವೆ ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ತಾಲೂಕು ಪರವಾನಗಿ ಭೂಮಾಪಕರು ಲಾಗಿನ್ ನಿಷ್ಕ್ರಿಯಗೊಳಿಸಿ ಕೆಲಸ ಸ್ಥಗಿತಗೊಳಿಸಿ ಸೋಮವಾರ ಪಟ್ಟಣದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು. ತಮಗೆ ಇದುವರೆಗೂ ಸಮಯಕ್ಕೆ ಸರಿಯಾಗಿ ಸರಿಯಾದ ವೇತನ ಆಗಿಲ್ಲ. ತಂತ್ರಾಂಶದಲ್ಲಿ ವಿಲೇ ಪ್ರಕರಣಗಳಿಗೆ ಸಂಭಾವನೆಯಲ್ಲಿ ತಾರತಮ್ಯ ಮಾಡಲಾಗಿದೆ. ಲಾಗಿನ್ ಅಲ್ಲದೆ ಇತರೆ ಕೆಲಸಗಳನ್ನು ವಹಿಸಲಾಗಿದೆ. ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ತಮ್ಮ ಸೇವೆ ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ತಾಲೂಕು ಪರವಾನಗಿ ಭೂಮಾಪಕರು ಲಾಗಿನ್ ನಿಷ್ಕ್ರಿಯಗೊಳಿಸಿ ಕೆಲಸ ಸ್ಥಗಿತಗೊಳಿಸಿ ಸೋಮವಾರ ಪಟ್ಟಣದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.ಪಟ್ಟಣದ ಮಿನಿ ವಿಧಾನಸೌಧದ ಸರ್ಕಾರಿ ಭೂ ಮಾಪಕರ ಕಚೇರಿ ಆವರಣದಲ್ಲಿ ಧರಣಿ ಕುಳಿತ ಭೂಮಾಪಕರು ಸರ್ಕಾರ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಘೋಷಣೆ ಕೂಗಿದರು.ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದ ರಾಜ್ಯ ಸಮಿತಿ ಸದಸ್ಯ ವಿ. ಹೇಮಂತ್ ಕುಮಾರ್‌ ಮಾತನಾಡಿ, ಎಲ್ಲ ಪರವಾನಗಿ ಭೂ ಮಾಪಕರು ಕಳೆದ ಇಪ್ಪತ್ತೈದು ವರ್ಷಗಳಿಂದ ಕಡಿಮೆ ವೇತನಕ್ಕೆ ದುಡಿಯುತ್ತಿದ್ದರೂ ಸಮಾನ ವೇತನ ಒದಗಿಸಿ ಸೇವೆ ಕಾಯಂಗೊಳಿಸದೆ ಸರ್ಕಾರ ತಮ್ಮ ಬೇಡಿಕೆಗಳನ್ನು ಕಡೆಗಣಿಸಿದೆ. ತಕರಾರು, ಕೋರ್ಟ್ ಆದೇಶ ಪ್ರಕರಣ, ಪೋಡಿಮುಕ್ತ, ಆಕಾರಬಂದ್, ಡಿಜಿಟೈಜೇಶನ್, ದರ್ಖಾಸ್ತು ಪೋಡಿ, ಸ್ವಮಿತ್ತ ಮತ್ತಿತರ ಪ್ರಕರಣಗಳನ್ನು ಒಳಗೊಂಡಂತೆ ತಮಗೆ ಇದುವರೆಗೂ ಸಮಯಕ್ಕೆ ಸರಿಯಾಗಿ ಸರಿಯಾದ ವೇತನ ಆಗಿಲ್ಲ. ತಂತ್ರಾಂಶದಲ್ಲಿ ವಿಲೇ ಪ್ರಕರಣಗಳಿಗೆ ಸಂಭಾವನೆಯಲ್ಲಿ ತಾರತಮ್ಯ ಮಾಡಲಾಗಿದೆ. ಲಾಗಿನ್ ಅಲ್ಲದೆ ಇತರೆ ಕೆಲಸಗಳನ್ನು ವಹಿಸಲಾಗಿದೆ. ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದರು.ಭೂ ಮಾಪಕರು ಅಳತೆಗೆ ಹೋದಾಗ ಆಗುವ ಅನಾಹುತ ಗಲಾಟೆ, ಕೋರ್ಟ್ ಪ್ರಕರಣ ಯಾವುದಕ್ಕೂ ನಮಗೆ ಭದ್ರತೆ ಇಲ್ಲ. ಪರವಾನಗಿ ಭೂಮಾಪಕರನ್ನು ವಿಶೇಷ ನೇಮಕಾತಿಯಡಿ ಸರ್ಕಾರಿ ಭೂ ಮಾಪಕರಾಗಿ ಕಾಯಂಗೊಳಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ತನಕ ಮುಷ್ಕರ ಮುಂದುವರಿಯಲಿದೆ ಎಂದು ಹೇಳಿದರು.ಸರ್ಕಾರಿ ಭೂ ಮಾಪನ ಇಲಾಖೆ ಸಹಾಯಕ ನಿರ್ದೇಶಕ ಸುಂದರ್ ಅವರಿಗೆ ಮನವಿ ಸಲ್ಲಿಸಲಾಯಿತು. ಪರವಾನಗಿ ಭೂ ಮಾಪಕರ ಸಂಘದ ತಾಲೂಕು ಅಧ್ಯಕ್ಷ ತುಳಸಿರಾಮ್, ಉಪಾಧ್ಯಕ್ಷ ಕೆ.ಜೆ. ಕುಮಾರ್, ಸದಸ್ಯರಾದ ಬಿ.ಜೆ. ಶಿವರಾಜ್, ವಿನೋದ್, ಅಭಿಜಿತ್, ಮೋನಿಕ, ಗೌತಮ್, ಆದರ್ಶ, ಚೇತನ್, ಲೋಹಿತ್, ಯೋಗೇಶ್, ಶ್ರೀನಿವಾಸ್, ಎಲ್.ಬಿ. ಕುಮಾರ್, ಸತೀಶ್, ದೇವರಾಜು, ರವೀಂದ್ರ, ಶ್ರೀಧರ್ ಇತರರು ಪಾಲ್ಗೊಂಡಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌