ಸರ್ಕಾರದ ಇನಾಮ ಜಮೀನು ಕಬಳಿಕೆ: ಸಮಗ್ರ ತನಿಖೆಗೆ ಸೂಚನೆ

KannadaprabhaNewsNetwork |  
Published : Mar 19, 2026, 02:00 AM IST
ವರದಿ | Kannada Prabha

ಸಾರಾಂಶ

ನಿವೃತ್ತ ಪೊಲೀಸ್ ಅಧಿಕಾರಿ ಜ್ಯೋತಿ ಪ್ರಕಾಶ ಮಿರ್ಜಿ ಅವರು ಅಳ್ನಾವರದ ದುರ್ಗದಕೇರಿ ಬಳಿ ಇನಾಮ ಜಮೀನಿನ ಹೆಸರಿನಲ್ಲಿ ಸರ್ಕಾರದ 200 ಎಕರೆ ಜಮೀನು ಕಬಳಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಈ ಬಗ್ಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರಿಂದ ಸಮಗ್ರ ತನಿಖೆ ನಡೆಸುವುದಾಗಿ ಹೇಳಿದ್ದಾರೆ.

ಧಾರವಾಡ: ನಿವೃತ್ತ ಪೊಲೀಸ್ ಅಧಿಕಾರಿ ಜ್ಯೋತಿ ಪ್ರಕಾಶ ಮಿರ್ಜಿ ಅವರು ಅಳ್ನಾವರದ ದುರ್ಗದಕೇರಿ ಬಳಿ ಇನಾಮ ಜಮೀನಿನ ಹೆಸರಿನಲ್ಲಿ ಸರ್ಕಾರದ 200 ಎಕರೆ ಜಮೀನು ಕಬಳಿಸಿದ್ದಾರೆ ಎಂಬ ವಿಧಾನಪರಿಷತ್‌ ಸದಸ್ಯ ಎಫ್‌.ಎಚ್. ಜಕ್ಕಪ್ಪನವರ ಅವರ ಆರೋಪದ ಹಿನ್ನೆಲೆಯಲ್ಲಿ ಬುಧವಾರ ಸದನದ ಶೂನ್ಯ ವೇಳೆಯಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಈ ಬಗ್ಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರಿಂದ ಸಮಗ್ರ ತನಿಖೆ ನಡೆಸುವುದಾಗಿ ಹೇಳಿದ್ದಾರೆ.

ಇತ್ತೀಚೆಗೆ ಧಾರವಾಡ ಜಿಲ್ಲಾ ಪಂಚಾಯ್ತಿ ಭವನದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ವಿಧಾನಪರಿಷತ್‌ ಸದಸ್ಯ ಎಫ್.ಎಚ್‌. ಜಕ್ಕಪ್ಪನವರ ಸರ್ಕಾರದ ಇನಾಮ ಜಮೀನನ್ನು ಬಡವರಿಗೆ ನೀಡುವುದನ್ನು ಬಿಟ್ಟು ನಿವೃತ್ತ ಪೊಲೀಸ್ ಅಧಿಕಾರಿ ಜ್ಯೋತಿ ಪ್ರಕಾಶ ಮಿರ್ಜಿ ಅಂತಹವರಿಗೆ ನೀಡುತ್ತಿದೆ ಎಂದು ಆರೋಪಿಸಿದ್ದರು.

ಇದರ ಬೆನ್ನು ಬಿದ್ದ ಕನ್ನಡಪ್ರಭ ಅಳ್ನಾವರ ತಾಲೂಕಿನ ದುರ್ಗದಕೇರಿ ವ್ಯಾಪ್ತಿಯಲ್ಲಿ ಮಿರ್ಜಿ ಅವರ ಹೆಸರು ಇರುವ ಜಮೀನು ಪತ್ತೆ ಮಾಡಿ ಕಳೆದ ಫೆ. 28ರಂದು "ಜ್ಯೋತಿ ಪ್ರಕಾಶ ಮಿರ್ಜಿ 120 ಎಕರೆ ಜಮೀನು ಪತ್ತೆ " ಎಂಬ ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟಿಸಿತ್ತು.

ಈ ಹಿನ್ನೆಲೆಯಲ್ಲಿ ಎಫ್‌.ಎಚ್‌. ಜಕ್ಕಪ್ಪನವರ ಅವರು ಬುಧವಾರ ಸದನದಲ್ಲಿ ಈ ಬಗ್ಗೆ ಕಂದಾಯ ಸಚಿವರನ್ನು ಪ್ರಶ್ನಿಸಿ, ಜಿಲ್ಲೆಯ ಅಳ್ನಾವರ ತಾಲೂಕಿನ ದುರ್ಗದಕೇರಿ ವ್ಯಾಪ್ತಿ ಪ್ರದೇಶದಲ್ಲಿ ಸುಶೀಲಾಬಾಯಿ ದೇಸಾಯಿ ಅವರಿಗೆ ಸಂಬಂಧಿಸಿದ ಸುಮಾರು 200 ಎಕರೆ ಇನಾಮ ಜಮೀನನನ್ನು ನಿವೃತ್ತ ಪೊಲೀಸ್ ಅಧಿಕಾರಿ ಜ್ಯೋತಿ ಪ್ರಕಾಶ ಮಿರ್ಜಿ ಉಳುಮೆ ಮಾಡುತ್ತಿದ್ದು, ಇವತ್ತಿಗೂ ಆ ಜಮೀನಿಗೆ ಪೊಲೀಸ್ ರಕ್ಷಣೆ ಇದೆ. ಇದಲ್ಲದೇ ರಾಜ್ಯದ ವಿವಿಧೆಡೆ ಅವರಿಗೆ ಸಂಬಂಧಿಸಿದ ಸುಮಾರು ಎರಡು ಸಾವಿರ ಎಕರೆ ಜಮೀನು ಇದೆ. ಈ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಸದನದಲ್ಲಿ ಎಫ್‌.ಎಚ್‌. ಜಕ್ಕಪ್ಪನವರ ಸರ್ಕಾರಕ್ಕೆ ಆಗ್ರಹಿಸಿದರು. ಅಲ್ಲದೇ, ಈ ಜಮೀನು ಸ್ಥಳೀಯ ಬಡ ಗೌಳಿಗರಿಗೆ ನೀಡಬೇಕು ಎಂದು ಜಕ್ಕಪ್ಪನವರ ವಾದ ಮಂಡಿಸಿದ್ದರು.

ಈ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವರು ಈ ಪ್ರಕರಣದಲ್ಲಿ ಭೂನ್ಯಾಯ ಮಂಡಳಿಯು ಭೂಮಿ ಇನಾಮು ಪಡೆದ ದೇಸಾಯಿ ಮನೆತನಕ್ಕೆ ನಾಲ್ಕು ಸಾವಿರ ಎಕರೆ ಜಮೀನನ್ನು ಸುಶೀಲಾಬಾಯಿ ದೇಸಾಯಿ ಪರವಾಗಿ ಈ ಹಿಂದೆ ಆದೇಶ ಮಾಡಿತ್ತು. ತದ ನಂತರ ಭೂ ನ್ಯಾಯ ಮಂಡಳಿಯ ತೀರ್ಮಾನ ತಪ್ಪು ಎಂದು ರಾಜ್ಯ ಸರ್ಕಾರ, ಹೈಕೋರ್ಟ್‌ನಲ್ಲಿ ಭೂನ್ಯಾಯ ಮಂಡಳಿಯ ತೀರ್ಮಾನಕ್ಕೆ ತಡೆಯಾಜ್ಞೆ ತಂದಿದೆ. ಸದ್ಯ ಪ್ರಕರಣ ನ್ಯಾಯಾಲಯದಲ್ಲಿದೆ. ಇಷ್ಟಾಗಿಯೂ ಈ ಭೂಮಿ ಬಗ್ಗೆ ಏನೇ ವಹಿವಾಟುಗಳು ನಡೆದಿವೆಯೇ ಎಂಬುದನ್ನು ಸಹ ಸಮಗ್ರ ತನಿಖೆ ಮಾಡಲಾಗುವುದು ಎಂದು ಸಚಿವರು ಉತ್ತರಿಸಿದರು.

ಬರೀ ಧಾರವಾಡದ ಇನಾಮ ಜಮೀನು ಪ್ರಕರಣ ಮಾತ್ರವಲ್ಲದೇ, ಇಂತಹ ಸುಮಾರು 37,000 ಪ್ರಕಣಗಳು ಕಂದಾಯ ಇಲಾಖೆ ಎದುರಿವೆ. ಈ ಪೈಕಿ ಶೇ. 43ರಷ್ಟು ಇತ್ಯರ್ಥಗೊಳಿಸಿದ್ದು, ಇನ್ನೂ 20 ಸಾವಿರ ಪ್ರಕರಣಗಳು ಚಾಲ್ತಿಯಲ್ಲಿವೆ. ಈ ಪೈಕಿ ಧಾರವಾಡದ ಪ್ರಕರಣ ಕಳೆದುಹೋಗದ ರೀತಿ ಮುತುವರ್ಜಿಯಿಂದ ಕಾರ್ಯ ನಿರ್ವಹಿಸಲಾಗುವುದು ಎಂದು ಕಂದಾಯ ಸಚಿವರು ಸದನಕ್ಕೆ ಸ್ಪಷ್ಟ ಉತ್ತರ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದಗ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಶುಭಾರಂಭ
ಎಸ್ಸೆಸ್ಲೆಲ್ಸಿ ಪ್ರಥಮ ಭಾಷೆ ಪರೀಕ್ಷೆ ಸುಸೂತ್ರ