ಮೂರು ದಶಕದ ಸಾರ್ಥಕ ಸೇವೆ ಸಲ್ಲಿಸಿ ಮಣ್ಣಲ್ಲಿ ಲೀನವಾದ ಗೋವಿಂದವಾಡ

KannadaprabhaNewsNetwork |  
Published : Jun 16, 2026, 02:00 AM IST
ಚಿತ್ರಕಲಾವಿದ ಮಂಜುನಾಥ ಗೋವಿಂದವಾಡ ಚಿತ್ರ ಬಿಡಿಸುವುದರಲ್ಲಿ ತಲ್ಲೀನರಾಗಿರುವುದು. | Kannada Prabha

ಸಾರಾಂಶ

ಅಪರೂಪದ ಚಿತ್ರ ಕಲಾವಿದ ಮಂಜುನಾಥ ಗೋವಿಂದವಾಡ ತೆರೆಮರೆಯಲ್ಲಿಯೇ ಮೂರು ದಶಕಗಳಿಂದ ಚಿತ್ರಕಲೆ ಸೇವೆಯಲ್ಲಿ ತೊಡಗಿಸಿಕೊಂಡಿದ್ದವರು.

ಮಂಜುನಾಥ ಕೆ.ಎಂ.

ಬಳ್ಳಾರಿ: ಬದುಕಿನ ವಿಸ್ಮಯಗಳನ್ನು ಕ್ಯಾನ್ವಾಸ್ ಮೇಲೆ ಜೀವಂತಗೊಳಿಸುತ್ತಿದ್ದ ಅಪರೂಪದ ಚಿತ್ರ ಕಲಾವಿದ ಮಂಜುನಾಥ ಗೋವಿಂದವಾಡ ತೆರೆಮರೆಯಲ್ಲಿಯೇ ಮೂರು ದಶಕಗಳಿಂದ ಚಿತ್ರಕಲೆ ಸೇವೆಯಲ್ಲಿ ತೊಡಗಿಸಿಕೊಂಡಿದ್ದವರು. ಗಡಿನಾಡು ಆಂಧ್ರದ ಗೋವಿಂದವಾಡ ಗ್ರಾಮದ ಮಂಜುನಾಥ ಅವರ ಹುಟ್ಟೂರು. ಜನನ ಆಂಧ್ರದಲ್ಲಾದರೂ ಕಲಾ ಲೋಕದ ಕುಂಚ ಹಿಡಿದಿದ್ದು ಗಣಿನಗರಿ ಬಳ್ಳಾರಿಯಲ್ಲಿ. ಎಂಎ ಆರ್ಟ್‌ ಮಾಸ್ಟರ್‌ ಪೂರೈಸಿ, ಚಿತ್ರಕಲೆಯನ್ನೇ ಬದುಕಿನ ಆಸರೆಯಾಗಿಸಿಕೊಂಡರು. ತಾತ ಜಾಲಿಬೆಂಚೆ ದೊಡ್ಡ ಬಸವಾರ್ಯ ಗವಾಯಿಗಳು ಮಂಜುನಾಥನ ಕಲಾ ಲೋಕಕ್ಕೆ ಮುಂದಡಿ ಇಡಲು ಪ್ರೇರಣೆ ಎಂದು ಸದಾ ಸ್ಮರಿಸಿಕೊಳ್ಳುತ್ತಿದ್ದರು.

ಕಲಾಸಕ್ತಿ ಬೆಳೆಸಿದರು:

ಬಳ್ಳಾರಿಯಲ್ಲಿ ಮಂಜುನಾಥ ಲಲಿತಕಲಾ ಬಳಗ ಸಂಸ್ಥೆಯನ್ನು ಹುಟ್ಟು ಹಾಕಿ ಸಂಸ್ಥೆಯ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ ಮಕ್ಕಳಲ್ಲಿ ಕಲಾಸಕ್ತಿ ಬೆಳೆಸುವಲ್ಲಿ ಶ್ರಮಿಸಿದ್ದ ಮಂಜುನಾಥ ಗೋವಿಂದವಾಡ ಮಕ್ಕಳಿಗೆ ಹಾಗೂ ಯುವಕರಿಗೆ ತರಬೇತಿ ಶಿಬಿರ, ಚಿತ್ರ ಕಲಾ ಪ್ರದರ್ಶನಗಳು, ಸ್ಪರ್ಧೆಗಳನ್ನು ನಿರಂತರವಾಗಿ ಆಯೋಜಿಸಿ ಯುವಜನರನ್ನು ಪ್ರೋತ್ಸಾಹಿಸುತ್ತಿದ್ದರು. 10ಕ್ಕೂ ಹೆಚ್ಚು ಪುಸ್ತಕಗಳಿಗೆ ಮುಖಪುಟ ವಿನ್ಯಾಸಗೊಳಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಏರ್ಪಡಿಸುವ ನೂರಾರು ಚಿತ್ರಕಲಾ ಸ್ಪರ್ಧೆಗಳಿಗೆ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದ್ದರು. ಬಳ್ಳಾರಿ ವಿಶ್ವವಿದ್ಯಾಲಯ, 2016ರ ಹಂಪಿ ಉತ್ಸವ, ಸಂಡೂರು ಉತ್ಸವ, ವೀವಿ ಸಂಘದ ಶತಮಾನೋತ್ಸವ ಸಂಭ್ರಮದ ಲಾಂಛನಗಳನ್ನು ರೂಪಿಸಿದ್ದರು.

ಸಿಜಿಕೆ, ಶ್ರೀನಿವಾಸ ಕಪ್ಪಣ್ಣ, ಶಶಿಧರ ಅಡಪ, ರವಿ ಬೆಂಗಳೂರು ಮುಂತಾದವರ ಕೈಯಲ್ಲಿ ಪಳಗಿದ್ದ ಇವರು ಜಿಲ್ಲೆ ಸೇರಿ ರಾಜ್ಯಾದ್ಯಂತ ಬೃಹತ್‌ ಕಾರ್ಯಕ್ರಮಗಳ ವೇದಿಕೆ ವಿನ್ಯಾಸಗೊಳಿಸಿದ್ದರು. ಹಂಪಿ ಉತ್ಸವ, ಪುರಂದರ ಉತ್ಸವ, ಚಾಲುಕ್ಯ ಉತ್ಸವ, ಸುವರ್ಣ ಕರ್ನಾಟಕ ಮಹೋತ್ಸವ ಸೇರಿದಂತೆ ನಾಡಿನ ಅನೇಕ ಭಾಗಗಳಲ್ಲಿ ವೇದಿಕೆ ವಿನ್ಯಾಸಗಳನ್ನು ರೂಪಿಸಿ ಗಮನ ಸೆಳೆದಿದ್ದರು.

ಸಾವಿರಾರು ಕಲಾಕೃತಿ:

ಬೃಹತ್‌ ವೇದಿಕೆಗಳ ವಿನ್ಯಾಸ ರಚನೆ, ಸ್ವಾತಂತ್ರ್ಯ ಹೋರಾಟಗಾರರ ರೇಖಾ ಚಿತ್ರ, ಪರಿಸರ, ಹಂಪಿಯ ಸ್ಮಾರಕಗಳು ಸೇರಿದಂತೆ ನಾಡಿನ ವಿವಿಧ ಪ್ರಮುಖ ತಾಣಗಳಿಗೆ ಕುಂಚದ ಮೂಲಕ ರೂಪ ನೀಡುತ್ತಿದ್ದ ಮಂಜುನಾಥ ಗೋವಿಂದವಾಡ ಅವರು, ವಿವಿಧ ರೀತಿಯ ಕಲಾ ಕೈಂಕರ್ಯದಲ್ಲಿ ತೊಡಗಿಸಿಕೊಂಡು ರಾಜ್ಯದ ಪ್ರಮುಖ ಚಿತ್ರ ಕಲಾವಿದರ ಸಾಲಿನಲ್ಲಿ ಗುರುತಿಸಿಕೊಂಡಿದ್ದರು. ಇವರ ಕುಂಚದಲ್ಲಿ ಅರಳಿದ ಸಾವಿರಕ್ಕೂ ಅಧಿಕ ಚಿತ್ರಗಳು ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ ಹಾಗೂ ಪ್ರದರ್ಶನದಲ್ಲಿ ಪಾಲ್ಗೊಂಡು ಕಲಾಸಕ್ತರ ಮೆಚ್ಚುಗೆ ಗಳಿಸಿದ್ದವು. ಇತ್ತೀಚೆಗೆ ತಮ್ಮದೇ ಕಲಾಶೋಧನೆಯ ಮೂಲಕ "ಸ್ಯಾಂಡ್ ಆರ್ಟ್‌ "ವಿಶಿಷ್ಟ ಚಿತ್ರಕಲೆಯನ್ನು ರೂಪಿಸಿದ್ದರು. ಸ್ಯಾಂಡ್ ಆರ್ಟ್ ಕಲಾಕೃತಿಗಳಿಂದ ನಾಡಿನ ಅನೇಕ ಕಡೆಗಳಿಂದ ಬೇಡಿಕೆ ಬಂದಿತ್ತು. ನೂರಕ್ಕೂ ಅಧಿಕ ಸ್ಯಾಂಡ್ ಆರ್ಟ್‌ನ ಕಲಾಕೃತಿಗಳು ಬಳ್ಳಾರಿಯ ಕನ್ನಡಭವನದಲ್ಲಿನ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಣ್ಯ ನಾಶ ನಾಗರಿಕತೆಯ ವಿನಾಶವೂ ಹೌದು: ಸೈಯದ್ ಫಯಾಜ್‌ ಅಹ್ಮದ್‌
ಪ್ರತ್ಯೇಕ ಮಹಾನಗರ ಪಾಲಿಕೆಗೆ ಸಿಎಂ ಡಿಕೆಶಿ ಸ್ಪಂದನೆ