ಕನ್ನಡಪ್ರಭ ವಾರ್ತೆ ಕಾರ್ಕಳ
ಕಂದಾಯ ಇಲಾಖೆಯಿಂದ 9/11 ಸೇರಿದಂತೆ ನಿವೇಶನಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯುವಲ್ಲಿ ಸಾರ್ವಜನಿಕರಿಗೆ ತೀರಾ ಕಷ್ಟಕರವಾದ ಪರಿಸ್ಥಿತಿ ಇದ್ದು, ಸರ್ಕಾರ ಜನರ ಭಾವನೆಗಳ ಜತೆ ಚೆಲ್ಲಾಟವಾಡುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಅವರು ಹೆಬ್ರಿಯ ರಾಮಮಂದಿರದ ಶಕ್ತಿ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಬಡವರಿಗೆ ಗ್ರಾಮ ಪಂಚಾಯಿತಿ ಮೂಲಕ ಹಂಚಿಕೆಯಾಗಬೇಕಾಗಿದ್ದ ಮನೆ, ನಿವೇಶನಗಳು ಮತ್ತು ಅನುದಾನವನ್ನು ತಡೆಹಿಡಿದಿರುವ ಕಾಂಗ್ರೆಸ್ ಸರ್ಕಾರ, ಖಾಸಗಿಯಾಗಿ ಖರೀದಿ ಮಾಡಿದ ನಿವೇಶನಗಳಲ್ಲಿ ಕೂಡ ಮನೆ ನಿರ್ಮಾಣ ಮಾಡದ ಪರಿಸ್ಥಿತಿಯನ್ನು ತಂದೊಡ್ಡಿದೆ. ಗ್ಯಾರೆಂಟಿಗಳ ಪ್ರಚಾರದೊಂದಿಗೆ ಬಡವರಿಗೆ ಮಂಕುಬೂದಿ ಎರಚಿ ಸರ್ಕಾರ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಕಾರ್ಕಳ ತಾಲೂಕಿನ ಸಾರ್ವಜನಿಕರು 9/11 ಕಡತ ಪ್ರಕ್ರಿಯೆಗಾಗಿ ಹತ್ತಾರು ಬಾರಿ ಕಾಪು ತಾಲೂಕಿಗೆ ಅಲೆದಾಡುವ ಪರಿಸ್ಥಿತಿ ಇದೆ. ಜನರ ಈ ಸಮಸ್ಯೆಗಳಿಗೆ, ಆತಂಕಗಳಿಗೆ ಧ್ವನಿಯಾಗಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ನೂತನ ಬೂತ್ ಸಮಿತಿ, ಗ್ರಾಮ ಸಮಿತಿ ಮತ್ತು ಮಹಾಶಕ್ತಿಕೇಂದ್ರಗಳಿಗೆ ಬಹುತೇಕ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಅಂತಿಮಗೊಂಡಿದ್ದು, ಗ್ರಾಮೀಣ ಭಾಗದಲ್ಲಿ ತಳಮಟ್ಟದಿಂದ ಒಗ್ಗಟ್ಟಿನಿಂದ ಪಕ್ಷದ ಸಂಘಟನೆಯನ್ನು ಬಲಪಡಿಸುವುದರಿಂದ ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬಿದಂತಾಗುತ್ತದೆ. ಕಾರ್ಯಕರ್ತರು ಹೊಸ ಉತ್ಸಾಹದಿಂದ ಪಕ್ಷಕ್ಕೆ ದುಡಿದು, ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸರ್ಕಾರದ ನಿರ್ಲಕ್ಷ್ಯದ ಧೋರಣೆಯಿಂದ ಪಡಿತರ ಚೀಟಿ ಗೊಂದಲ, ಕಟ್ಟಡ ಸಾಮಗ್ರಿಗಳ ಕೊರತೆ, ಬೆಲೆಯೇರಿಕೆ, ಅಭಿವೃದ್ಧಿ ಕುಂಠಿತದಂತಹ ಅನೇಕ ಸಮಸ್ಯೆಗಳಿಂದ ಸಂತ್ರಸ್ಥರಾದ ಅನೇಕ ಬಡಜನರು ತೊಂದರೆಯಲ್ಲಿದ್ದಾರೆ. ಅವರ ನೆರವಿಗೆ ನಿಂತು ಹೋರಾಟ ಅನಿವಾರ್ಯ ಎಂದರು.ಹೆಬ್ರಿ ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಲಕ್ಷ್ಮೀನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ ಶಿವಪುರ, ಬೋಳ ಸತೀಶ್ ಪೂಜಾರಿ ಹಾಗೂ ಪ್ರಮುಖರಾದ ರವೀಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಪ್ರಸನ್ನ ಶೆಟ್ಟಿ ಸ್ವಾಗತಿಸಿ, ವಂದಿಸಿದರು.