- ನೂರು ದಿನ ಪೂರೈಸಿದ ಹೋರಾಟ; ಧರಣಿ ನಿರತರಲ್ಲೂ ನಿರಾಸೆ
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯದ ಕಾವೇರಿ ಕಣಿವೆ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದರ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಹೋರಾಟ ನೂರು ದಿನ ಪೂರೈಸಿದೆ. ತಮಿಳುನಾಡಿಗೆ ಹರಿಯುತ್ತಿರುವ ನೀರು ಮಾತ್ರ ನಿರಂತರವಾಗಿ ಹರಿಯುತ್ತಲೇ ಇದೆ. ಹೋರಾಟ ಶತದಿನದವರೆಗೆ ನಡೆದರೂ ಸರ್ಕಾರ ದಿವ್ಯಮೌನ ವಹಿಸಿದೆ. ಆಳುವವರ ನಡೆ ಧರಣಿ ನಿರತರಲ್ಲಿ ತೀವ್ರ ನಿರಾಸೆ ಮೂಡಿಸಿದೆ.ಕಾವೇರಿ ಹೋರಾಟ ೫೬ನೇ ದಿನಕ್ಕೆ ಕಾಲಿಟ್ಟ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡ್ಯಕ್ಕೆ ಆಗಮಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿದ್ದ ಸ್ಥಳಕ್ಕೆ ತೆರಳಿ ರೈತರ ಹಿತ ಕಾಪಾಡುವ ಭರವಸೆ ನೀಡಿದ್ದರು. ಆದರೆ, ಅವರು ಬಂದು ಹೋದ ನಂತರವೂ ನೀರು ನಿರ್ವಹಣಾ ಸಮಿತಿ, ನೀರು ನಿರ್ವಹಣಾ ಪ್ರಾಧಿಕಾರ ಎರಡು ಬಾರಿ ತಮಿಳುನಾಡಿಗೆ ನೀರು ಬಿಡಬೇಕೆಂಬ ಆದೇಶ ಹೊರಹಾಕಿದ್ದವು. ಇದು ಹೋರಾಟಗಾರರ ತಾಳ್ಮೆಯನ್ನು ಕೆಣಕುವಂತೆ ಮಾಡಿತ್ತು. ಜೊತೆಗೆ ಸರ್ಕಾರವೂ ನೀರು ಬಿಡುಗಡೆ ಆದೇಶಕ್ಕೆ ಪೂರಕ ನಡೆಯನ್ನು ಅನುಸರಿಸಿತ್ತು.
ಮಂಕಾದ ಹೋರಾಟ:
ಜಿಲ್ಲೆಯ ಜನರನ್ನು ಸಂಘಟಿಸಿ ಹೋರಾಟಕ್ಕೆ ಉಗ್ರ ಸ್ವರೂಪ ನೀಡುವ, ಹೊಸದೊಂದು ಆಯಾಮದೊಂದಿಗೆ, ಹೊಸ ದಿಕ್ಕಿನಲ್ಲಿ ಪರಿಣಾಮಕಾರಿಯಾಗಿ ಚಳವಳಿಯನ್ನು ಮುನ್ನಡೆಸುವ ಪ್ರಯತ್ನಕ್ಕೂ ಇಳಿಯಲೇ ಇಲ್ಲ. ಕೇವಲ ಉಪವಾಸ, ಧರಣಿಗಷ್ಟೇ ಚಳವಳಿಯನ್ನು ಸೀಮಿತಗೊಳಿಸಿದರು. ಒಂದೊಂದು ಸಂಘಟನೆಯವರು ಒಂದೊಂದು ದಿನ ಧರಣಿ ಸ್ಥಳಕ್ಕೆ ಬಂದು ಕುಳಿತು ಹೊರನಡೆದರು. ಹೋರಾಟ ವ್ಯಾಪಕವಾಗಿ ಎಲ್ಲ ತಾಲೂಕುಗಳಿಗೆ ಹರಡದೆ ಒಂದು ನಿರ್ದಿಷ್ಟ ಸ್ಥಳಕ್ಕೆ ಸೀಮಿತವಾಯಿತು. ಇದು ಹೋರಾಟದ ತೀವ್ರತೆ ಕ್ಷೀಣಿಸುವುದಕ್ಕೂ ಪ್ರಮುಖ ಕಾರಣವಾಯಿತು.
ಮುಖ್ಯಮಂತ್ರಿಯವರು ಭೇಟಿ ನೀಡಿ ಹೋದ ಬಳಿಕ ಕಾವೇರಿ ಹೋರಾಟವನ್ನು ಮುಂದುವರೆಸುವ ವಿಚಾರದಲ್ಲಿ ಹೋರಾಟಗಾರಲ್ಲೇ ಭಿನ್ನಮತ ಮೂಡಿತ್ತು. ಈ ವಿಚಾರವಾಗಿ ವಾಕ್ಸಮರವೂ ನಡೆದಿತ್ತು. ಧರಣಿ ಸ್ಥಳದಲ್ಲೇ ೪೫ ನಿಮಿಷಗಳ ಕಾಲ ಇದ್ದ ಸಿಎಂ ಸಮ್ಮುಖದಲ್ಲೇ ಹೋರಾಟ ನಿಲ್ಲಿಸುವುದಾಗಿ ಘೋಷಿಸಬೇಕಿತ್ತು. ಇದರಿಂದ ಮುಂದೆ ಸಿಎಂ ಭೇಟಿಗೆ ಅವಕಾಶ ಸಿಗುತ್ತಿತ್ತು. ಆಗ ರೈತರ ಕಷ್ಟಗಳನ್ನು ಅವರ ಬಳಿ ನಿವೇದಿಸಿಕೊಂಡು ವಿಶೇಷ ಪ್ಯಾಕೇಜ್ ಘೋಷಿಸಿಕೊಳ್ಳಬಹುದಿತ್ತು ಎನ್ನುವುದು ಕೆಲವರ ವಾದವಾದರೆ, ನೀರು ಬಿಡುಗಡೆ ಆದೇಶ ಸಿಎಂ ಬಂದ ದಿನವೇ ಹೊರಬಿದ್ದಿದ್ದು, ಆ ಸಮಯದಲ್ಲಿ ಹೋರಾಟ ಕೈಬಿಟ್ಟಿದ್ದರೆ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತಿತ್ತು. ಹೋರಾಟ ಮುಂದುವರೆಸುವ ನಿರ್ಧಾರ ಮಾಡಿದ್ದೇ ಸರಿ ಎನ್ನುವುದು ಮತ್ತೆ ಕೆಲವರ ವಾದವೂ ಆಗಿತ್ತು.
ಸಿಎಂ ಬಂದು ಹೋದ ನಂತರದಲ್ಲಿ ೪೪ ದಿನಗಳ ಕಾಲ ಚಳವಳಿ ನಡೆದರೂ ಕಾವೇರಿ ಹೋರಾಟದ ಬಗ್ಗೆ ಸರ್ಕಾರ ಕಿವಿಗೊಡುತ್ತಲೇ ಇಲ್ಲ. ಚಳವಳಿ ಆರಂಭಗೊಂಡ ಒಂದೂವರೆ ತಿಂಗಳು ಬಿಜೆಪಿ-ಜೆಡಿಎಸ್ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದವು. ಇದೀಗ ಆ ಪಕ್ಷದ ನಾಯಕರು, ಮುಖಂಡರು ಯಾರೂ ಧರಣಿ ಸ್ಥಳದತ್ತ ತಿರುಗಿಯೂ ನೋಡುತ್ತಿಲ್ಲ. ಹೀಗಾಗಿ ಕಾವೇರಿ ಚಳವಳಿ ಮಸುಕಾಗಿ ಚಳವಳಿ ನೇತೃತ್ವ ವಹಿಸಿರುವವರೂ ನಿತ್ರಾಣರಾಗಿದ್ದಾರೆ.
-------------------------
- ಸುನಂದಾ ಜಯರಾಂ, ಸಂಘಟನಾ ಕಾರ್ಯದರ್ಶಿ, ಜಿಲ್ಲಾ ರೈತ ಹಿತರಕ್ಷಣಾ ಸಮಿತಿ