ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಹೇಮಾವತಿ ಜಲಾಶಯದ ಎಡದಂಡೆ ತಾಲೂಕು ವ್ಯಾಪ್ತಿಯಲ್ಲಿ 45.975 ಕಿ.ಮೀ ಉದ್ದ ಹಾದು ಹೋಗಿದೆ. ಇದರಡಿ17 ವಿತರಣಾ ನಾಲೆಗಳಿವೆ. ಸುಮಾರು 54,088 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಖಾರೀಫ್ ಮತ್ತು ರಬಿ ಬೆಳೆಗೆ ನೀರು ಕೊಡಲು ಉದ್ದೇಶಿತ ಯೋಜನೆಯಲ್ಲಿದ್ದರೂ ರಬಿ ಬೆಳೆ ಪದ್ಧತಿ ಅನುಸರಿಸುತ್ತಿಲ್ಲ.
ನಾಲಾ ವ್ಯಾಪ್ತಿಯಲ್ಲಿ ನೀರಾವರಿ ಇಲಾಖೆಗೆ ಸೇರಿದ 95 ಕೆರೆಗಳಿವೆ. ಈ ಎಲ್ಲಾ ಕೆರೆಗಳು ಹೇಮೆಯ ನೀರನ್ನು ಅವಲಂಭಿಸಿವೆ. ಕೆರೆ ಬಯಲಿನಲ್ಲಿಯೂ 5255 ಎಕರೆ ಕೃಷಿ ಭೂಮಿ ಹೇಮೆ ನೀರನ್ನು ಅವಲಂಭಿಸಿದೆ. ಹೇಮಾವತಿ ಎಡದಂಡೆ ನಾಲೆಯಿಂದ ಕೆ.ಆರ್.ಪೇಟೆ ತಾಲೂಕು ಮಾತ್ರವಲ್ಲದೆ ನೆರೆಯ ಚನ್ನರಾಯಪಟ್ಟಣ, ಪಾಂಡವಪುರ, ನಾಗಮಂಗಲ ಮತ್ತು ಮಂಡ್ಯ ತಾಲೂಕಿನ ಕೆಲವು ಭಾಗಗಳಿಗೂ ಹೇಮೆಯ ನೀರು ಹರಿದು ಆಯಾ ಭಾಗದ ನೂರಾರು ಕೆರೆಗಳಿಗೂ ಇದರಿಂದ ಅನುಕೂಲವಾಗಿದೆ.ಹಾಸನದ ಗೊರೂರಿನ ಹೇಮಾವತಿ ಜಲಾಶಯದಲ್ಲಿ ಡೆಡ್ ಸ್ಟೋರೇಜ್ ಕಳೆದು 13 ಟಿ.ಎಂ.ಸಿ ನೀರು ಬಳಕೆಗೆ ಲಭ್ಯವಿದೆ. ಇದರಲ್ಲಿ ಕೇವಲ 3 ಟಿ.ಎಂ.ಸಿ ನೀರು ಹರಿಸಿದರೆ ಈ ಭಾಗದ ಎಲ್ಲಾ ಕೆರೆ ಕಟ್ಟೆಗಳು ತುಂಬುತ್ತವೆ. ಆದರೆ, ಇದುವರೆಗೂ ಹೇಮೆಯ ನೀರಿನಿಂದ ಜಲಾನಯನ ಪ್ರದೇಶದ ಕೆರೆ ಕಟ್ಟೆಗಳನ್ನು ತುಂಬಿಸಿ ಜನ-ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕೆ ಇಲಾಖೆ ಮುಂದಾಗಿಲ್ಲ.
ರೈತರ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ ನಾಗಮಂಗಲ ತಾಲೂಕಿನ ಶಾಸಕರೂ ಆದ ರಾಜ್ಯ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಮಂಡ್ಯ ಜಿಲ್ಲೆಯ ಹೇಮಾವತಿ ಜಲಾನಯನ ಪ್ರದೇಶಕ್ಕೆ ಸೇರಿದ ಯಾವೊಬ್ಬ ಶಾಸಕರೂ ಹೇಮಾವತಿ ನೀರಿಗಾಗಿ ಕನಿಷ್ಠ ಧ್ವನಿ ಎತ್ತಿ ಮಾತುಡತ್ತಿಲ್ಲ.
ಕಾವೇರಿ ಜಲಾನಯನ ಪ್ರದೇಶಕ್ಕೆ ರಾಜ್ಯ ಸರ್ಕಾರ ಕಾಡಾ ಮೂಲಕ ಕಾಲಕಾಲಕ್ಕೆ ಸಭೆ ನಡೆಸಿ ಕೆ.ಆರ್.ಎಸ್, ಕಬಿನಿ ಮುಂತಾದ ಜಲಾಶಯಗಳ ಮೂಲಕ ಕಾಲುವೆಗಳಿಗೆ ನೀರು ಹರಿಸಿ ರೈತರ ಹೋರಾಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತದೆ. ಆದರೆ, ಹೇಮಾವತಿ ಜಲಾಶಯ ಕಾವೇರಿ ಕಣಿವೆಯಲ್ಲಿದ್ದರೂ ಇದು ಕೂಡಾ ವ್ಯಾಪ್ತಿಗೆ ಬರುವುದಿಲ್ಲ. ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರ ನಿಯಂತ್ರಣಕ್ಕೆ ಹೇಮಾವತಿ ಜಲಾಶಯ ಬರುತ್ತದೆ.
ಹೇಮಾವತಿ ಜಲಾಶಯದ ರೈತರ ಮೇಲಿನ ಸರ್ಕಾರದ ಮಲತಾಯಿ ಧೋರಣೆ ನಿಲ್ಲಬೇಕು. ಜಲಾಶಯದ ಎಡದಂಡೆ ನಾಲೆ ಮೂಲಕ ತಾಲೂಕಿನ ಕೆರೆ ಕಟ್ಟೆಗಳಿಗೆ ಹೇಮೆ ನೀರು ಹರಿಸಬೇಕು. ಇಲ್ಲದಿದ್ದರೆ ಶೀಘ್ರ ಹೋರಾಟ ರೂಪಿಸಲಾಗುವುದು.
- ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಸಂಘದ ಮುಖಂಡರು