ಬೆಂಗಳೂರು : ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚುತ್ತಿದ್ದು, ಈ ಬಾರಿ ಮುಂಗಾರು ಮಳೆ ಪ್ರಮಾಣವೂ ಕಡಿಮೆ ಎಂಬ ವರದಿಯಿದೆ. ಇದರಿಂದಾಗಿ ಈ ಬಾರಿ ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿಗೆ ಅಭಾವ ಉಂಟಾಗುವ ಸಾಧ್ಯತೆಗಳಿವೆ. ಆದರೂ, ರಾಜ್ಯದ 157 ತಾಲೂಕುಗಳಲ್ಲಿ ಅಂತರ್ಜಲ ಪ್ರಮಾಣ ಏರಿಕೆಯಾಗಿದ್ದು, ಸಮಾಧಾನಕರ ವಿಷಯವಾಗಿದೆ.
ಮಳೆ ಕಡಿಮೆಯಾಗಿ ನೀರಿನ ಸಮಸ್ಯೆ ಎದುರಾಗುತ್ತಿದ್ದಂತೆ ಅಂತರ್ಜಲ ಬಳಕೆ ಹೆಚ್ಚಲಿದೆ. ಅದರಿಂದಾಗಿ ಅಂತರ್ಜಲ ಪ್ರಮಾಣವೂ ಕುಸಿತ ಕಾಣಲಿದೆ. ಅಲ್ಲದೆ, ಮಳೆ ಕೊರತೆಯಿಂದ ಜಲಮೂಲಗಳಲ್ಲಿ ನೀರಿನ ಪ್ರಮಾಣ ಕುಸಿತವಾಗಿ ಅಂತರ್ಜಲವೂ ಕಡಿಮೆಯಾಗಲಿದೆ. ಆದರೆ, ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯದಲ್ಲಿ ಅಂತರ್ಜಲ ಪ್ರಮಾಣ ಹೆಚ್ಚಳವಾಗಿದೆ. 236 ತಾಲೂಕುಗಳ ಪೈಕಿ 157 ತಾಲೂಕುಗಳಲ್ಲಿ ಅಂತರ್ಜಲದ ಪ್ರಮಾಣದಲ್ಲಿ ಏರಿಕೆಯಾಗಿದೆ.
ರಾಜ್ಯ ಅಂತರ್ಜಲ ನಿರ್ದೇಶನಾಲಯದ ಮಾಹಿತಿಯಂತೆ 2026ರ ಮಾರ್ಚ್ ಅಂತ್ಯಕ್ಕೆ 236 ತಾಲೂಕುಗಳ ಪೈಕಿ 157 ತಾಲೂಕುಗಳ ಅಂತರ್ಜಲ ಪ್ರಮಾಣ ಏರಿಕೆಯಾಗಿದೆ. ಅದರಲ್ಲಿ ತುಮಕೂರು, ಗದಗ, ವಿಜಯನಗರ, ರಾಯಚೂರು, ಬಾಗಲಕೋಟೆ, ಕಲಬುರಗಿ ಸೇರಿ ಇನ್ನಿತರ ಜಿಲ್ಲೆಗಳ ತಾಲೂಕುಗಳು ಸೇರಿವೆ. ಉಳಿದಂತೆ 79 ತಾಲೂಕುಗಳ ಅಂತರ್ಜಲ ಪ್ರಮಾಣ ಕುಸಿತವಾಗಿದೆ. ಕುಸಿತವಾಗಿರುವ ತಾಲೂಕುಗಳಲ್ಲಿ ಶಿವಮೊಗ್ಗ, ಉತ್ತರ ಕನ್ನಡ, ಮೈಸೂರು, ದಾವಣಗೆರೆ, ಚಿತ್ರದುರ್ಗ, ಹಾಸನ, ಮಂಡ್ಯ, ಉಡುಪಿ ಸೇರಿ ಇನ್ನಿತರ ಕೆಲ ಜಿಲ್ಲೆಗಳ ತಾಲೂಕುಗಳು ಸೇರಿವೆ.
ಅಂತರ್ಜಲ ಪ್ರಮಾಣ ಹೆಚ್ಚಲು ರಾಜ್ಯ ಸರ್ಕಾರ ಹಲವು ಕ್ರಮ ಕೈಗೊಂಡಿದೆ. ಅದರಲ್ಲಿ ಪ್ರಮುಖವಾಗಿ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗಿರುವ ಅಟಲ್ ಭೂ-ಜಲ ಯೋಜನೆಯೂ ಅನುಕೂಲವಾಗಿದೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗೊಂಡಿರುವ ಕಾಮಗಾರಿಗಳು ಆ ಭಾಗದ ಜಿಲ್ಲೆಗಳಲ್ಲಿ ಅಂತರ್ಜಲ ಹೆಚ್ಚುವಂತೆ ಮಾಡಿದೆ.
ಒಟ್ಟು 44 ತಾಲೂಕುಗಳಲ್ಲಿ ಅಟಲ್ ಭೂ-ಜಲ ಯೋಜನೆ ಜಾರಿ ಮಾಡಲಾಗಿದೆ. ಅಟಲ್ ಭೂಜಲ ಅಡಿ 396.19 ಕೋಟಿ ರು. ವೆಚ್ಚದಲ್ಲಿ 807 ಚೆಕ್ ಡ್ಯಾಂ ನಿರ್ಮಾಣಕ್ಕೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. 807 ಚೆಕ್‌ಡ್ಯಾಂ ಅಡಿ ಈಗಾಗಲೇ 804 ಚೆಕ್‌ಡ್ಯಾಂಗಳ ಕಾಮಗಾರಿ ಪೂರ್ಣಗೊಂಡಿದ್ದು, ಇದು ಅಂತರ್ಜಲ ಏರಿಕೆಗೆ ಕಾರಣವಾಗಿದೆ. ಇದರ ಜತೆಗೆ ಕಲ್ಯಾಣ ಕರ್ನಾಟಕದಲ್ಲಿನ ನೀರವಾರಿ ಸಮಸ್ಯೆಗೆ ಪರಿಹಾರ ನೀಡಲು 182.20 ಕೋಟಿ ರು. ವೆಚ್ಚದಲ್ಲಿ ಸರಣಿ ಚೆಕ್‌ಡ್ಯಾಂಗಳ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ.