ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಅವರು ಒಳ್ಳೆಯ ಸಂಘಟಕ, ಉತ್ತಮ ಕೆಲಸಗಾರ, ವಿಧಾನಪರಿಷತ್ತಿನಲ್ಲಿ ಪದವಿಧರರ ಸಮಸ್ಯೆಗಳಿಗೆ ಧ್ವನಿಯಾಗುತ್ತಾರೆ. ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ, ತುಮಕೂರು
ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದರೂ ಪರಿಹಾರ ಕಾರ್ಯ ಕೈಗೊಂಡು ಜನರಿಗೆ ನೆರವಾಗಬೇಕಾಗಿದ್ದ ರಾಜ್ಯ ಸರ್ಕಾರ ಹಗರಣಗಳಲ್ಲಿ ಮುಳುಗಿದೆ. ಪದವಿಧರರ ಕ್ಷೇತ್ರದ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲುವಿನ ಫಲಿತಾಂಶ ಸರ್ಕಾರದ ಜನವಿರೋಧಿ ಆಡಳಿತಕ್ಕೆ ಸ್ಪಷ್ಟ ಸಂದೇಶವಾಗಲಿದೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ಈ ತಿಂಗಳ 23 ರಂದು ನಡೆಯುವ ಆಗ್ನೇಯ ಪದವಿಧರರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಪರವಾಗಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರೊಂದಿಗೆ ಶುಕ್ರವಾರ ಸಚಿವ ಸೋಮಣ್ಣ ನಗರದ ವಿವಿಧೆಡೆ ಮತಯಾಚನೆ ಮಾಡಿದರು. ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ, ವಿದ್ಯಾನಿಧಿ, ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳು, ಚೇಂಬರ್ ಆಫ್ ಕಾಮರ್ಸ್, ನ್ಯಾಯಾಲಯ ಆವರಣ, ಬ್ಯಾಂಕ್‌ಗಳಿಗೆ ತೆರಳಿ ಪದವಿಧರ ಮತದಾರರನ್ನು ಭೇಟಿ ಮಾಡಿ ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಅವರಿಗೆ ಪ್ರಥಮ ಪ್ರಾಶಸ್ತ್ಯ್ಯದ ಮತ ನೀಡಿ ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ, ರಾಜ್ಯ ಕಾಂಗ್ರೆಸ್ ಸರ್ಕಾರ ಜನವಿರೋಧಿ ಆಡಳಿತಕ್ಕೆ ಜನ ಬೇಸತ್ತಿದ್ದಾರೆ. ಬದಲಾವಣೆ ಬಯಸುತ್ತಿದ್ದಾರೆ. ಅದರ ಮೊದಲ ಹಂತದಲ್ಲಿ ಪದವಿಧರ ಕ್ಷೇತ್ರದ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಸಂದೇಶ ನೀಡಲಿದ್ದಾರೆ ಎಂದು ಹೇಳಿದರು.
ಅರ್ಹ ಎಲ್ಲರೂ ಮತದಾರರ ಪಟ್ಟಿಯಲ್ಲಿ ಸೇರಲು ಅವಕಾಶವಿದೆ. ಅರ್ಹರನ್ನು ಪಟ್ಟಿಯಿಂದ ತೆಗೆದುಹಾಕಲು ಸಂವಿಧಾನದಲ್ಲಿ ಅವಕಾಶವಿಲ್ಲ. ಹೆಸರು ಬಿಟ್ಟುಹೋಗಿರುವವರು ಸೂಕ್ತ ದಾಖಲಾತಿ ನೀಡಿ ಹೆಸರು ಸೇರಿಸಿಕೊಳ್ಳಲು ಅವಕಾಶವಿದೆ. ಆದರೂ ಕಾಂಗ್ರೆಸ್‌ನವರು ಎಸ್‌ಐಆರ್ ಬಗ್ಗೆ ಗೊಂದಲ ಸೃಷ್ಟಿಸುತ್ತಿದ್ದಾರೆ. ತಮ್ಮ ಆಡಳಿತ ಲೋಪವನ್ನು ಮುಚ್ಚಿಕೊಳ್ಳಲು ಜನರ ಗಮನವನ್ನು ಬೇರೆಡೆ ಸೆಳೆಯಲು ಎಸ್‌ಐಆರ್ ಗೊಂದಲ ಸೃಷ್ಟಿ ಮಾಡಿದ್ದಾರೆ. ಮುಖ್ಯಮಂತ್ರಿಯೇ ಮುಖ್ಯ ಚುನಾವಣಾ ಆಯೋಗ ಕಚೇರಿಗೆ ಹೋಗಿ ಪ್ರತಿಭಟನೆ ಮಾಡುವ ದುಸ್ಥಿತಿ ಕಾಂಗ್ರೆಸ್‌ಗೆ ಬರಬಾರದಿತ್ತು. ಜನರನ್ನು ದಿಕ್ಕು ತಪ್ಪಿಸುವುದನ್ನು ಬಿಟ್ಟು ಜನರ ಸಮಸ್ಯೆಗಳನ್ನು ನಿವಾರಣೆ ಮಾಡುವತ್ತ ಮುಖ್ಯಮಂತ್ರಿಗಳು ಗಮನ ಹರಿಸಿದರೆ ಅವರ ಗೌರವ ಹೆಚ್ಚಾಗುತ್ತದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ವರ್ಗದವರ ಅಭ್ಯುದಯಕ್ಕೆ ಅನೇಕ ಪರಿಣಾಮಕಾರಿ ಯೋಜನೆಗಳನ್ನು ಜಾರಿಗೆ ತಂದು ಶ್ರೇಷ್ಠ ಆಡಳಿತಗಾರ, ಜನಮೆಚ್ಚಿದ ನಾಯಕರಾಗಿದ್ದಾರೆ. ಕೇಂದ್ರ ಸರ್ಕಾರ ತುಮಕೂರು ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಾಗುತ್ತಿವೆ. ಡಿಸೆಂಬರ್ ಅಂತ್ಯದ ವೇಳೆಗೆ ತುಮಕೂರು-ರಾಯದುರ್ಗ ನಡುವೆ ರೈಲು ಸಂಚಾರ ಆರಂಭವಾಗಲಿದೆ. ಈಗ ಪ್ರಗತಿಯಲ್ಲಿರುವ ರೈಲ್ವೆ ಸೇತುವೆಗಳ ಕಾಮಗಾರಿ ಪೂರ್ಣಗೊಂಡು ಎಲ್ಲವೂ ಜನವರಿ ವೇಳೆಗೆ ಲೋಕಾರ್ಪಣೆಯಾಗಲಿವೆ ಎಂದು ಸಚಿವ ವಿ. ಸೋಮಣ್ಣ ಹೇಳಿದರು.
ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಅವರು ಒಳ್ಳೆಯ ಸಂಘಟಕ, ಉತ್ತಮ ಕೆಲಸಗಾರ, ವಿಧಾನಪರಿಷತ್ತಿನಲ್ಲಿ ಪದವಿಧರರ ಸಮಸ್ಯೆಗಳಿಗೆ ಧ್ವನಿಯಾಗುತ್ತಾರೆ. ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್, ಶಾಸಕ ಜಿ.ಬಿ. ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ಬಿಜೆಪಿ ಮುಖಂಡ ವೈ.ಎಚ್. ಹುಚ್ಚಯ್ಯ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸತ್ಯಮಂಗಲ ಜಗದೀಶ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಚೈತ್ರ ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ರುದ್ರೇಶ್, ಜಿಲ್ಲಾ ಕಾರ್ಯದರ್ಶಿ ಲತಾ ಬಾಬು, ಮುಖಂಡರಾದ ಜಿ. ಭೈರಣ್ಣ, ಸಾಗರನಹಳ್ಳಿ ವಿಜಯಕುಮಾರ್, ಗಣೇಶ್‌ಪ್ರಸಾದ್, ಹೆಚ್.ಎಸ್. ವಿರೂಪಾಕ್ಷಪ್ಪ, ವಸಂತ, ಗಾಯತ್ರಿ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್. ನಾಗರಾಜ್, ನಗರ ಅಧ್ಯಕ್ಷ ಟಿ.ಹೆಚ್. ಜಯರಾಮ್, ಮುಖಂಡರಾದ ಭೈರೇಶ್, ಕೆಂಪರಾಜು ಮೊದಲಾದವರು ಮತಯಾಚನೆ ವೇಳೆ ಭಾಗವಹಿಸಿದ್ದರು. ಪ್ರಚಾರ ಸಂದರ್ಭದಲ್ಲಿ ಆಯಾ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದು ಅಭ್ಯರ್ಥಿ ಕೆ.ಎಂ. ಸುರೇಶ್ ಅವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.