ಕನ್ನಡಪ್ರಭ ವಾರ್ತೆ ಮೈಸೂರು
ಯುವ ವೈದ್ಯರು ಮಾನವೀಯ ಅಂಶಗಳ ಜೊತೆಗೆ ವೃತ್ತಿಯನ್ನು ಅವಿರತವಾಗಿ, ನಿರಂತರವಾಗಿ ಪ್ರೀತಿಸುತ್ತಿರಬೇಕು. ಆಗ ರೋಗಿಗಳ ದೃಷ್ಟಿಯಲ್ಲಿ ದೇವರಾಗುತ್ತೀರಿ ಎಂದು ಜೈಪುರದ ಮಹಾತ್ಮಗಾಂಧಿ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಅಚಲ್ ಗುಲಾಟಿ ತಿಳಿಸಿದರು.ನಗರದ ಶಿವರಾತ್ರೀಶ್ವರ ನಗರದಲ್ಲಿ ಇರುವ ಜೆಎಸ್‌ಎಸ್ ಮೆಡಿಕಲ್ ಕಾಲೇಜು ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಪದವೀಧರರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ರೋಗಿಗಳು ಮತ್ತು ಅವರ ಬಂಧುಗಳು ವೈದ್ಯರನ್ನು ದೇವರಿಗೆ ಹೋಲಿಸುತ್ತಾರೆ. ಅಂದ ಮಾತ್ರಕ್ಕೆ ನಾವು ಮೈ ಮರೆಯದೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ವೃತ್ತಿ ಬದ್ಧತೆಯಿಂದ ಕೆಲಸ ನಿರ್ವಹಿಸಬೇಕು ಎಂದರು.ವೈದ್ಯರನ್ನು ವೈದ್ಯೋ ನಾರಾಯಣ ಹರಿ ಎನ್ನುತ್ತಾರೆ. ನಮ್ಮ ಕಷ್ಟ ನಿವಾರಿಸಿದ್ದಕ್ಕೆ ದೇವರು ಎನ್ನುತ್ತಾರೆ. ಅವರು ಹಾಗೇ ಕರೆಯಲು ನಿಮ್ಮಲ್ಲಿ ವೃತ್ತಿ ಪರತೆ, ರೋಗಿಗಳನ್ನು ಮಾನವೀಯತೆಯಿಂದ ನೋಡುವ ದೃಷ್ಟಿಯು ಚನ್ನಾಗಿ ಇರುವುದು ಮುಖ್ಯ. ಆದರೆ ಇದನ್ನು ಬಿಟ್ಟು ತಾವು ಬೇರೆ ರೀತಿಯಾಗಿ ವರ್ತನೆ ಮಾಡಿದರೇ ನಿಮ್ಮ ವೃತ್ತಿಗೆ ನೀವು ಅಗೌರವ ಸಲ್ಲಿಸಿದಂತೆ ಆಗುತ್ತದೆ. ಆದ್ದರಿಂದ. ಆಗ ಮಾತ್ರ ಈ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದಲ್ಲದೇ ಜನ ಮೆಚ್ಚುಗೆಗಳಿಸಿಕೊಳ್ಳಬಹುದು ಎಂದರು.
ಕಾಲೇಜಿನಲ್ಲೇ ನಾವು ಎಲ್ಲವನ್ನೂ ಕಲಿತಿದ್ದೇವೆ. ಅದಕ್ಕಾಗಿ ನಮಗೆ ಪದವಿ ನೀಡಿದ್ದಾರೆ ಎನ್ನುವ ಅಹಂ ಯುವ ವೈದ್ಯರಲ್ಲಿ ಮೂಡಬಾರದು. ಏಕೆಂದರೆ ನೀವು ಕಾಲೇಜಿನಲ್ಲಿ ಕಲಿತಿರುವುದಕ್ಕಿಂತ ವೃತ್ತಿಯಲ್ಲಿ ತೊಡಗಿಕೊಂಡಾಗ ಆಗುವ ನೈಜ ಅನುಭವದಿಂದ ಹೆಚ್ಚಾಗಿ ಕಲಿಯಬೇಕಾಗುತ್ತದೆ. ನೀವು ವೃತ್ತಿ ಜೀವನದಲ್ಲಿ ಇರುವತನಕವೂ ಪ್ರತಿದಿನ ಕಲಿಯಬೇಕು. ಕಲಿಕೆ ನಿರಂತರ, ಅದಕ್ಕೆ ಕೊನೆಯೆಂಬುದು ಇಲ್ಲ. ಈ ಹಿನ್ನೆಲೆಯಲ್ಲಿ ಹೊಸ-ಹೊಸ ವಿಚಾರ, ವೈದ್ಯಕೀಯ ಕ್ಷೇತ್ರದಲ್ಲಿ ಪ್ರಚಲಿತವಾಗಿ ಆಗುತ್ತಿರುವ ಬೆಳವಣಿಗೆಯನ್ನು ಆಸಕ್ತಿಯಿಂದ ಗಮನಿಸುವುದಲ್ಲದೇ ಅದನ್ನು ನೀವೂ ಕೂಡಾ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಅವರು ಸಲಹೆ ನೀಡಿದರು.ಪ್ರಸ್ತುತ ಡಿಜಿಟಿಲ್ ಯುಗದಲ್ಲಿ ನೂತನ ತಂತ್ರಜ್ಞಾನಗಳು ಆವಿಷ್ಕಾರಗೊಳ್ಳುತ್ತಲ್ಲೇ ಇರುತ್ತವೆ. ಮಷಿನ್ ಲರ್ನಿಂಗ್, ಕೃತಕ ಬುದ್ಧಿಮತ್ತೆ, ಡಾಟಾ ಸೈನ್ಸ್‌ಮುಂತಾದ ತಂತ್ರಜ್ಞಾನಗಳನ್ನು ಎಲ್ಲಾ ರಂಗದಲ್ಲೂ ಬಳಸಿಕೊಳ್ಳಲಾಗುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲೂ ಇವುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ಮನುಷ್ಯನ ಬುದ್ಧಿಗೆ ಇವುಗಳ ಸಮವಲ್ಲ. ವೈದ್ಯರಿಗೆ ಸರಿಸಮವಾಗಿ ಕೃತಕ ಬುದ್ಧಿಮತ್ತೆಯನ್ನು ಪರ್ಯಾಯವಾಗಿ ನಿಯೋಜಿಸಲು ಆಗುವುದು ಇಲ್ಲ. ಹಾಗಂತ ಈ ತಂತ್ರಜ್ಞಾನಗಳನ್ನು ನಿರ್ಲಕ್ಷ್ಯ ಕೂಡಾ ಮಾಡಬಾರದು. ಅವುಗಳನ್ನು ವೃತ್ತಿಗೆ ಅನುಕೂಲವಾಗುವಂತೆ ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು ಎಂದರು.
ಯುವ ವೈದ್ಯರು ಯಾವುದೇ ಭಾಷೆಯಲ್ಲಿ ಮಾತನಾಡಿ, ಯಾವುದೇ ಭಾಷೆಯನ್ನು ಕಲಿಯಿರಿ. ಇದರೊಂದಿಗೆ ಡಿಜಿಟಲ್ ಭಾಷೆಯನ್ನು ಕಲಿತುಕೊಳ್ಳುವುದು ಅತ್ಯಾವಶ್ಯಕ. ಇದರಿಂದ ನಿಮ್ಮ ವೃತ್ತಿ ಜೀವನಕ್ಕೆ ಹೊಸತನದ ರೂಪ ಕೊಡಬಹುದು ಎಂದರು.ವೈದ್ಯರಿಗೆ ಸಮಯ ಪಾಲನೆ ಬಹಳ ಮುಖ್ಯ. ಸಮಯ ಯಾರಿಗೂ ಕಾಯುವುದಿಲ್ಲ ಎನ್ನುವುದನ್ನು ಅರಿತುಕೊಂಡು ಅದರೊಂದಿಗೆ ಹೊಂದಾಣಿಕೆ ಮಾಡಿಕೊಂಡು ವೃತ್ತಿ ನಡೆಸಬೇಕು. ಸಮಯದ ಜತೆ ಕರಾರುವಕ್ಕಾಗಿ ನೀವು ಓಡುವುದನ್ನು ಕಲಿತುಕೊಳ್ಳಬೇಕು. ಆಗ ಮಾತ್ರ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿ ನೂರಾರು ಜೀವಗಳ ಬದುಕಿಗೆ ಬೆಳಕಾಗಬಹುದು ಎಂದು ಅವರು ಹೇಳಿದರು.
ಚಿನ್ನದ ಪದಕ ಪ್ರದಾನವೈದ್ಯಕೀಯ ಪದವಿಯಲ್ಲಿ ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆದುಕೊಂಡ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಗೌರವಿಸಲಾಯಿತು. ಡಾ. ನಿಮಿಷ ಸಿನ್ಹಾ 6 ಚಿನ್ನದ ಪದಕ, 3 ನಗದು ಬಹುಮಾನ. ಡಾ. ಇಶಾ ಕಾಮತ್ಕರ್ 2 ಚಿನ್ನದ ಪದಕ, 4 ನಗದು ಬಹುಮಾನ. ಡಾ. ಉದೀಶಾ ಆರ್ಯ 2 ಚಿನ್ನದ ಪದಕ, 2 ನಗದು ಬಹುಮಾನ, ಡಾ.ಆರ್. ಕೀರ್ತನಾ 1 ಚಿನ್ನದ ಪದಕ, 1 ನಗದು ಬಹುಮಾನ, ಡಾ. ವೈಷ್ಣವಿ ಭಾರಧ್ವಜ್ 1 ಚಿನ್ನದ ಪದಕ, ಡಾ. ಸೃಷ್ಟಿ ಕಿಶೋರ್ 1 ನಗದು ಬಹುಮಾನ ಪಡೆದುಕೊಂಡರು.
ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣಪ್ಪ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರೀತಿ ಗುಲಾಟಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರ ಮಠ ಅಧ್ಯಕ್ಷತೆ ವಹಿಸಿದ್ದರು. ಸಮಕುಲಾಧಿಪತಿ ಡಾ.ಬಿ. ಸುರೇಶ್, ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಡಾ.ಎಚ್. ಬಸವನಗೌಡಪ್ಪ, ಕುಲಸಚಿವರಾದ ಡಾ. ಮಂಜುನಾಥ್, ಸುಧೀಂದ್ರ ಭಟ್, ಜೆಎಸ್‌ಎಸ್ ಆಸ್ಪತ್ರೆ ಅಧೀಕ್ಷಕ ಡಾ.ಎಸ್.ಪಿ. ಮಧು, ಡೀನ್ ಗಳಾದ ವಿಶಾಲ್ ಕುಮಾರ್, ಪ್ರಶಾಂತ್ ವಿಶ್ವನಾಥ್, ಉಪ ಪ್ರಾಂಶುಪಾಲೆ ಡಾ. ಸುಮಾ ಇದ್ದರು.