ಹಾವೇರಿ: ಗ್ರಾಮ ಪಂಚಾಯಿತಿಗಳು ಗ್ರಾಮೀಣಾಭಿವೃದ್ಧಿಯ ಪ್ರಮುಖ ಕೇಂದ್ರಗಳಾಗಿದ್ದು, ಗ್ರಾಮಸ್ಥರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡುವುದು ಆಡಳಿತಾಧಿಕಾರಿಗಳ ಮುಖ್ಯ ಕರ್ತವ್ಯವಾಗಿದೆ. ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು ಎಂದು ಅಧಿಕಾರಿಗಳಿಗೆ ಜಿಪಂ ಸಿಇಒ ದಲ್ಮೀತ್ ಕುಮಾರ ಸೂಚಿಸಿದರು.ಇಲ್ಲಿನ ಜಿಪಂ ವಿಡಿಯೋ ಕಾನ್ಫರೆನ್ಸ್ ಹಾಲ್‌ನಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿಗಳ ಆಡಳಿತಾಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.ಗ್ರಾಮ ಪಂಚಾಯಿತಿಗಳ ಆಡಳಿತಾತ್ಮಕ ಕಾರ್ಯಗಳು, ಸಾರ್ವಜನಿಕ ಸೇವೆಗಳ ಅನುಷ್ಠಾನ, ಸರ್ಕಾರದ ಯೋಜನೆಗಳ ಪ್ರಗತಿ ಹಾಗೂ ಗ್ರಾಮ ಮಟ್ಟದಲ್ಲಿ ಜನರಿಗೆ ಸೌಲಭ್ಯ ಒದಗಿಸುವ ಕುರಿತು ಪರಿಶೀಲಿಸಿದರು.ಗೈರಾದ ಅಧಿಕಾರಿಗಳಿಗೆ ನೋಟಿಸ್: ಸಭೆಯ ಆರಂಭದಲ್ಲೇ ಹಲವು ಆಡಳಿತಾಧಿಕಾರಿಗಳು ಗೈರಾಗಿರುವುದನ್ನು ಗಮನಿಸಿದ ಅವರು, ಗೈರುಹಾಜರಾದ ಅಧಿಕಾರಿಗಳಿಗೆ ತಕ್ಷಣ ನೋಟಿಸ್ ಜಾರಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸರ್ಕಾರಿ ಕರ್ತವ್ಯಗಳ ನಿರ್ವಹಣೆಯಲ್ಲಿ ಶಿಸ್ತು ಮತ್ತು ಹೊಣೆಗಾರಿಕೆ ಅತ್ಯಂತ ಮುಖ್ಯವಾಗಿದ್ದು, ಸಭೆಗಳಿಗೆ ಗೈರುಹಾಜರಾಗುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಗ್ರಾಪಂ ಆಡಳಿತಾಧಿಕಾರಿಗಳ ಜವಾಬ್ದಾರಿ-ಕರ್ತವ್ಯಗಳು: ಪಂಚಾಯಿತಿ ಕಚೇರಿಯ ಆಡಳಿತ ನಿರ್ವಹಣೆ, ಕಡತ, ದಾಖಲೆ ಮತ್ತು ನೋಂದಣಿ ಪುಸ್ತಕಗಳ ಸಂರಕ್ಷಣೆ, ಸಭಾ ಕಾರ್ಯಸೂಚಿ ಸಿದ್ಧತೆ ಮತ್ತು ನಿರ್ಣಯ ಜಾರಿ, ಸರ್ಕಾರದ ಆದೇಶ ಮತ್ತು ಸುತ್ತೋಲೆಗಳ ಅನುಷ್ಠಾನ, ಪಂಚಾಯಿತಿ ಅಸ್ತಿ ದಾಖಲೆಗಳ ನಿರ್ವಹಣೆ, ಗ್ರಾಮಸಭೆ ಸಭೆಗಳ ಆಯೋಜನೆ, ಸಾರ್ವಜನಿಕ ಅಹವಾಲು ಮತ್ತು ಸಲಹೆಗಳ ಸ್ವೀಕಾರ, ಗ್ರಾಮಸಭೆ ನಿರ್ಣಯಗಳ ಜಾರಿ, ಸಮಿತಿಗಳ ಕಾರ್ಯಗಳಿಗೆ ಸಹಕಾರ ನೀಡಬೇಕು ಎಂದರು.ಡಿಜಿಟಲ್ ಮತ್ತು ಇ-ಆಡಳಿತ: ಇ-ಸ್ವತ್ತು, ಪಂಚತಂತ್ರ, ಸೇವಾಸಿಂಧು ಬಳಕೆ, ಆನ್‌ಲೈನ್ ದಾಖಲೆ ನಿರ್ವಹಣೆ, ಡಿಬಿಟಿ ಮತ್ತು ಎಫ್‌ಎಫ್‌ಎಂಎಸ್ ಅನುಸರಣೆ ಜೊತೆಗೆ ಗ್ರಾಮ ಪಂಚಾಯಿತಿಯನ್ನು ಪಾರದರ್ಶಕ, ಜನಪರ ಆಡಳಿತ ಮತ್ತು ಅಭಿವೃದ್ಧಿಪಡಿಸುವುದು ಮುಖ್ಯ ಉದ್ದೇಶವಾಗಬೇಕು ಎಂದರು. ನಿಯಮಿತ ಭೇಟಿ ನೀಡಿ: ಪ್ರತಿ ಆಡಳಿತಾಧಿಕಾರಿಯು ತಮಗೆ ವಹಿಸಲಾದ ಗ್ರಾಮ ಪಂಚಾಯಿತಿಗಳಿಗೆ ನಿಯಮಿತವಾಗಿ ಭೇಟಿ ನೀಡಬೇಕು. ವಿಶೇಷವಾಗಿ ಪ್ರತಿ ಮಂಗಳವಾರ ಹಾಗೂ ಗುರುವಾರ ಕಡ್ಡಾಯವಾಗಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ಕುಂದು ಕೊರತೆ ಸಭೆ ನಡೆಸಬೇಕು ಹಾಗೂ ಸಭೆಯ ಕುರಿತು ಗ್ರಾಮಸ್ಥರಿಗೆ ಮುಂಚಿತವಾಗಿ ಡಂಗೂರ ಮತ್ತು ಇತರೆ ಜಾಗೃತಿ ವಿಧಾನಗಳ ಮೂಲಕ ಮಾಹಿತಿ ನೀಡಬೇಕು ಎಂದರು.ಆಡಳಿತಾತ್ಮಕ ಕಾರ್ಯಗಳು, ಸಾರ್ವಜನಿಕ ಸೇವೆಗಳು ಮತ್ತು ಮೂಲಭೂತ ಸೌಲಭ್ಯಗಳ ಸ್ಥಿತಿಗತಿಗಳನ್ನು ಪರಿಶೀಲಿಸಬೇಕು. ಭೇಟಿ ನೀಡದೇ ಇರುವ ಅಧಿಕಾರಿಗಳ ವಿರುದ್ಧ ಕಾರ್ಯನಿರ್ವಾಹಕ ಅಧಿಕಾರಿಗಳು ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಿ: ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ, ಗ್ರಾಮ ಸ್ವಚ್ಛತೆ, ಬೀದಿ ದೀಪಗಳ ನಿರ್ವಹಣೆ, ತೆರಿಗೆ ವಸೂಲಾತಿ, ಸಾರ್ವಜನಿಕ ಆರೋಗ್ಯ ಮತ್ತು ಮೂಲಭೂತ ಸೌಲಭ್ಯಗಳ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಗ್ರಾಮಸ್ಥರಿಗೆ ಗರಿಷ್ಠ ಪ್ರಮಾಣದಲ್ಲಿ ಉದ್ಯೋಗ ಒದಗಿಸಿ, ಗ್ರಾಮೀಣ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು ಎಂದು ತಿಳಿಸಿದರು.ಉತ್ತಮ ಸೇವೆ ಸಲ್ಲಿಸಿ: ಜಿಲ್ಲಾ ಕೇಂದ್ರದಿಂದ ಗ್ರಾಮ ಪಂಚಾಯತಿಗಳ ಕಾರ್ಯವೈಖರಿ ಕುರಿತು ನಿಯಮಿತವಾಗಿ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಲಾಗುವುದು. ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ಗ್ರಾಮೀಣ ಜನರಿಗೆ ಉತ್ತಮ ಸೇವೆ ಒದಗಿಸುವುದು ಪ್ರತಿಯೊಬ್ಬ ಅಧಿಕಾರಿಯ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಡಾ.ಪುನಿತ್ ಇದ್ದರು.