ಇಸ್ಕಾನ್‌ನಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ

KannadaprabhaNewsNetwork |  
Published : Sep 05, 2026, 02:00 AM IST
ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ರಾಯಪುರದ ಶ್ರೀ ರಾಧಾ ಗೋವಿಂದ ದೇವಜಿ ಮಂದಿರದಲ್ಲಿ ಶ್ರೀಕೃಷ್ಣ-ರಾಧೆ ಮೂರ್ತಿಗಳನ್ನು ಅಲಂಕರಿಸಿರುವುದು.   | Kannada Prabha

ಸಾರಾಂಶ

ರಾಯಪುರದಲ್ಲಿರುವ ಇಸ್ಕಾನ್‌ನ "ಶ್ರೀ ರಾಧಾ ಗೋವಿಂದ ದೇವಜಿ ಮಂದಿರ "ದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ಎರಡನೇ ದಿನವನ್ನು ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.

ಹುಬ್ಬಳ್ಳಿ:

ಇಲ್ಲಿನ ರಾಯಪುರದಲ್ಲಿರುವ ಇಸ್ಕಾನ್‌ನ "ಶ್ರೀ ರಾಧಾ ಗೋವಿಂದ ದೇವಜಿ ಮಂದಿರ "ದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ಎರಡನೇ ದಿನವನ್ನು ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.

ಬೆಳಗ್ಗೆ 4.30ಕ್ಕೆ ಮಂಗಳಾರತಿ ಹಾಗೂ ಶ್ರೀ ಗುರುಷ್ಟಕಂ ಪಠಣದೊಂದಿಗೆ ದಿನದ ಕಾರ್ಯಕ್ರಮಗಳು ಆರಂಭಗೊಂಡವು. ಶ್ರೀ ರಾಧಾ ಗೋವಿಂದ ದೇವಜಿ ಹಾಗೂ ಶ್ರೀ ಕೃಷ್ಣ ಬಲರಾಮರು ವೃಂದಾವನದಲ್ಲಿ ಕೈಯಿಂದ ತಯಾರಿಸಲಾದ ನೀಲಿ ಮತ್ತು ಚಿನ್ನದ ಬಣ್ಣದ ‘ವೃಂದಾವನ ಚಂದ್ರ ಅಲಂಕಾರ’ದಲ್ಲಿ ಭಕ್ತರ ಗಮನ ಸೆಳೆದರು. ದಿನವಿಡೀ ಭಕ್ತರು ದರ್ಶನ, ಅರ್ಚನೆ ಹಾಗೂ ವಿವಿಧ ಸೇವೆಗಳಲ್ಲಿ ಪಾಲ್ಗೊಂಡರು.

ಭಕ್ತರು ತಯಾರಿಸಿದ 108 ಬಗೆಯ ಭಕ್ಷ್ಯಗಳ ವಿಶೇಷ ಮಹಾನೈವೇದ್ಯವನ್ನು ಶ್ರೀಕೃಷ್ಣನಿಗೆ ಅರ್ಪಿಸಲಾಯಿತು. ತುಪ್ಪದಿಂದ ತಯಾರಿಸಿದ 160 ಕೆಜಿ ತೂಕದ ಬೃಹತ್ ಲಡ್ಡು ಮಹೋತ್ಸವದ ವಿಶೇಷ ಆಕರ್ಷಣೆಯಾಗಿತ್ತು. ಸಂಜೆ ಹುಬ್ಬಳ್ಳಿ-ಧಾರವಾಡದ ಕಲಾವಿದರಿಂದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ನಡೆದವು. ಮಯೂರ ನಾಟ್ಯ ಕೇಂದ್ರದ ವತಿಯಿಂದ ನೃತ್ಯ ರೂಪಕ ಪ್ರದರ್ಶನಗೊಂಡರೆ, ಬಳಿಕ ಮನು ಕುಮಾರ್ ಹಾಗೂ ತಂಡದಿಂದ ತಬಲಾ ಜುಗಲ್‌ಬಂದಿ ನಡೆಯಿತು.

ಬಳಿಕ ಶ್ರೀರಾಧಾ ಗೋವಿಂದ ದೇವಜಿಗೆ ಸಂಕ್ಷಿಪ್ತ ಅಭಿಷೇಕ ನೆರವೇರಿಸಲಾಯಿತು. ರಾತ್ರಿ 9.30ಕ್ಕೆ ಶಂಖನಾದದೊಂದಿಗೆ ಮಹಾಭಿಷೇಕ ಆರಂಭಗೊಂಡಿತು. ಚಂದನದ ಎಣ್ಣೆ, ಪಂಚಗವ್ಯ, ಪಂಚಾಮೃತ, ವಿವಿಧ ಹಣ್ಣಿನ ರಸ ಹಾಗೂ ರತ್ನಜಲದಿಂದ ಶ್ರೀಮೂರ್ತಿಗಳಿಗೆ ವಿಧಿವತ್ತಾಗಿ ಅಭಿಷೇಕ ನೆರವೇರಿಸಲಾಯಿತು. ರಾತ್ರಿ 11.30ಕ್ಕೆ ಅಭಿಷೇಕ ಪೂರ್ಣಗೊಂಡಿತು.

ಇಸ್ಕಾನ್ ಹುಬ್ಬಳ್ಳಿ-ಧಾರವಾಡದ ಅಧ್ಯಕ್ಷ ರಾಜೀವ್ ಲೋಚನ ದಾಸ ಅವರು ಭಗವಾನ್ ಶ್ರೀಕೃಷ್ಣನ ಅವತರಣೆಯ ಮಹತ್ವ ಹಾಗೂ ದಿವ್ಯ ಲೀಲೆಗಳ ಕುರಿತು ಮಾತನಾಡಿದರು. ಮಧ್ಯರಾತ್ರಿ ಬ್ರಹ್ಮಸಂಹಿತೆಯ ಶ್ಲೋಕಗಳ ಪಠಣದ ನಡುವೆ ಶ್ರೀಮೂರ್ತಿಗಳ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಯಿತು. ಬಳಿಕ ಭವ್ಯ ಮಹಾಮಂಗಳಾರತಿ ನೆರವೇರಿತು.

ಧಾರ್ಮಿಕ ವಿಧಿ-ವಿಧಾನಗಳು, ಸಂಗೀತ-ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾವಿರಾರು ಭಕ್ತರ ಭಾಗವಹಿಸುವಿಕೆಯೊಂದಿಗೆ ಇಸ್ಕಾನ್‌ನ ಎರಡು ದಿನಗಳ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಭಕ್ತಿ ಹಾಗೂ ವೈಭವದಿಂದ ಸಂಪನ್ನಗೊಂಡಿತು.

ಇಲ್ಲಿನ ದೇಶಪಾಂಡೆ ನಗರದ ಶ್ರೀಕೃಷ್ಣ ಕಲ್ಯಾಣ ಮಂಟಪ ಕೃಷ್ಣ ದೇವರ ಗುಡಿಯಲ್ಲಿ ಶುಕ್ರವಾರ ಮಧ್ಯರಾತ್ರಿ ಅರ್ಘ್ಯಪ್ರದಾನ ನೆರವೇರಿತು. ಶನಿವಾರ ಸಂಜೆ 5 ಗಂಟೆಗೆ ಶ್ರೀಕೃಷ್ಣ ಲೀಲೋತ್ಸವದ ಮೆರವಣಿಗೆ ನೆರವೇರಲಿದೆ. ಜತೆಗೆ ಗುಜರಾತ ಭವನ ಹತ್ತಿರದ ಶ್ರೀಕೃಷ್ಣ ಮಂದಿರದಲ್ಲಿ ಶುಕ್ರವಾರ ಸಂಜೆ ವಿಶೇಷ ಪೂಜೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳಲ್ಲಿ ಜಾನಪದ ಒಲವು ಹೆಚ್ಚಳ ಆಶಾದಾಯಕ
ಶ್ರದ್ಧಾ-ಭಕ್ತಿಯಿಂದ ಕೃಷ್ಣ ಜನ್ಮಾಷ್ಟಮಿ ಆಚರಣೆ