
ಹಾರೋಹಳ್ಳಿ: ವಿಶ್ವವಿಖ್ಯಾತ ಮೈಸೂರು ದಸರಾ ಮಾದರಿಯಲ್ಲಿ ಹಾರೋಹಳ್ಳಿಯ ಅರುಣಾಚಲೇಶ್ವರ ದೇವಾಲಯದಲ್ಲಿ 10ನೇ ವರ್ಷದ ದಸರಾ ಮಹೋತ್ಸವದ ಪ್ರಯುಕ್ತ ಚಾಮುಂಡೇಶ್ವರಿದೇವಿ ಹಾಗೂ ಅರುಣಾಚಲೇಶ್ವರ ದೇಗುಲದ ಪಾರ್ವತಿ ಅಮ್ಮನವರ ಉತ್ಸವ ಮೂರ್ತಿಗಳ ಹೂವಿನ ಪಲ್ಲಕ್ಕಿ ಮೆರವಣಿಗೆ ಅದ್ಧೂರಿಯಾಗಿ ನೆರವೇರಿಸಲಾಯಿತು.
ಅರುಣಾಚಲೇಶ್ವರ ದೇವಾಲಯದಿಂದ ಆರಂಭವಾದ ಮೆರವಣಿಗೆ ಅಂಗಡಿ ಬೀದಿ, ಬ್ರಾಹ್ಮಣರ ಬೀದಿ, ಆನೇಕಲ್ಲು ರಸ್ತೆ ಮೂಲಕ ಚಾಮುಂಡೇಶ್ವರಿ ದೇವಸ್ಥಾನ ತಲುಪಿ, ಬಳಿಕ ಕುಂಬಾರ ಕಾಲೋನಿ ಹಾಗೂ ಜನತಾ ಕಾಲೋನಿಗಳಲ್ಲಿ ಸಾಗಿತು.
ದಸರಾ ಮಹೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಹೂವಿನ ಪಲ್ಲಕ್ಕಿಯಲ್ಲಿ ದೇವಿಯರ ಉತ್ಸವ ಮೂರ್ತಿಗಳ ಮೆರವಣಿಗೆ ಕಣ್ತುಂಬಿಕೊಳ್ಳಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಶಾಲಿ ಕ್ಷೇತ್ರದ ಡಾ. ಆನಂದ ಗುರೂಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ದಸರಾ ಆಚರಣೆ ಸಮಿತಿ ಅಧ್ಯಕ್ಷ ಎಂ. ಗೌತಮ್ ಗೌಡ, ಉಪಾಧ್ಯಕ್ಷರಾದ ಡಿ.ವಿ.ಕೃಷ್ಣಪ್ಪ, ವಿಜಿಕುಮಾರ್, ಸಂಚಾಲಕ ಎಂ.ಮಲ್ಲಪ್ಪ, ಸಹ ಸಂಚಾಲಕ ಮುರಳೀಧರ್, ಪದಾಧಿಕಾರಿಗಳಾದ ಹೋಟೆಲ್ ಜಗದೀಶ್, ಪೊಲೀಸ್ ಮುನಿಯಪ್ಪ, ಶಂಕರ್ ಸಿಂಗ್, ಕೆ.ಎಂ. ಸುರೇಶ್, ಮೊಹಮ್ಮದ್ ಯಾಕೂಬ್ ಪಾಷಾ, ಪದ್ಮಮ್ಮ, ಕಮಲಮ್ಮ, ರಾಘವೇಂದ್ರ, ಶಿವಲಿಂಗಮೂರ್ತಿ, ಕೇಶವಮೂರ್ತಿ, ಚಕ್ರಪಾಣಿ, ಮಾಲತಿ ಶಿವನಾಗ, ರಮೇಶ್ ಭಾಗವಹಿಸಿದ್ದರು.