ಕಾಳಮ್ಮ-ದುರ್ಗಮ್ಮ ದೇವಿಯರ ಅದ್ಧೂರಿ ಜಾತ್ರಾ ಮೆರವಣಿಗೆ

KannadaprabhaNewsNetwork |  
Published : Feb 12, 2026, 02:45 AM IST
ಫೋಟೋ ಫೆ.೧೧ ವೈ.ಎಲ್.ಪಿ. ೦೫ | Kannada Prabha

ಸಾರಾಂಶ

ಪಟ್ಟಣದಲ್ಲಿ ಕಾಳಮ್ಮ-ದುರ್ಗಮ್ಮ ದೇವಿಯರ ಜಾತ್ರಾ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ದೇವಿಯರು ಮುಖಾಮುಖಿಯಾಗಿದ್ದನ್ನು ಕಣ್ತುಂಬಿಸಿಕೊಂಡ ಭಕ್ತರುಶಂಕರ ಭಟ್ಟ ತಾರೀಮಕ್ಕಿಕನ್ನಡಪ್ರಭ ವಾರ್ತೆ ಯಲ್ಲಾಪುರ

ಪಟ್ಟಣದಲ್ಲಿ ಕಾಳಮ್ಮ-ದುರ್ಗಮ್ಮ ದೇವಿಯರ ಜಾತ್ರಾ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಮೂಲ ಗುಡಿಯಿಂದ ಕಾಳಮ್ಮ ಮತ್ತು ದುರ್ಗಮ್ಮ ದೇವಿಯರನ್ನು ಪೀಠದೊಂದಿಗೆ ಹೊರಗಡೆ ತಂದು ಮುಂಬಾಗಿಲಿನ ಅಕ್ಕಪಕ್ಕದ ಪೀಠಗಳಲ್ಲಿ ಕುಳ್ಳಿರಿಸಲಾಯಿತು. ಅಲ್ಲಿ ಪೂಜೆ, ವಿಧಿ-ವಿಧಾನಗಳು ನಡೆದವು.ನಂತರ ಭುಜ ಮತ್ತು ತಲೆಯ ಮೇಲೆ ದೇವಿಯರ ಬೃಹತ್ ಪೀಠವನ್ನು ಹೊತ್ತು ಗುಡಿಯಿಂದ ಮೆರವಣಿಗೆಯಲ್ಲಿ ಸಾಗಿ ಪಟ್ಟಣದ ಪೊಲೀಸ್ ಠಾಣೆಯ ಸರ್ಕಲ್ ಬಳಿಯಿಂದ ಬಸವೇಶ್ವರ ಸರ್ಕಲ್‌ವರೆಗೆ ಬಂದು ಕಾಳಮ್ಮ ದೇವಿ ರಾಷ್ಟ್ರೀಯ ಹೆದ್ದಾರಿ ಸಂಭ್ರಮ ಹೊಟೆಲ್‌ವರೆಗೂ ಹೋಗುತ್ತ ಮುಂದೆ ಹೋಗಿ ಹಿಂದೆ ಬರುವುದು, ಗೋಲಾಕಾರವಾಗಿ ತಿರುಗುತ್ತ ಸಾಗಿ, ಮರಳಿ ಜಾತ್ರಾ ಗದ್ದುಗೆಗೆ ತೆರಳುವಾಗ ವಿಕಾಸ್ ಬ್ಯಾಂಕ್ ಎದುರಿಗೆ ಹೆದ್ದಾರಿಯ ಬಳಿ ಎರಡೂ ದೇವಿಯರು ಮುಖಾಮುಖಿಯಾಗಿದ್ದನ್ನು ಭಕ್ತರು ಕಣ್ತುಂಬಿಸಿಕೊಂಡರು. ಅಂತೆಯೇ ದುರ್ಗಮ್ಮ ದೇವಿ ಬಸವೇಶ್ವರ ಸರ್ಕಲ್‌ವರೆಗೂ ಬಂದು ವಿಕಾಸ್ ಬ್ಯಾಂಕ್‌ವರೆಗೂ ಹೋಗಿ ೫.೩೦ರ ಸುಮಾರಿಗೆ ಮರಳಿ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲ್ಪಟ್ಟಿವೆ. ಮೆರವಣಿಗೆಯಲ್ಲಿ ದೇವಿಯರು ಸಾಗುವಾಗ ಭಕ್ತರ ತಲ್ಲೀನತೆ ವಿಶೇಷವಾಗಿ ಕಂಡುಬಂದಿತ್ತು. ದೇವಿಯರನ್ನು ಪ್ರತಿಷ್ಠಾಪಿಸಿದ ನಂತರ ಗದ್ದುಗೆಯ ಎದುರು ಒಂದು ಕ್ವಿಂಟಲ್ ಅಕ್ಕಿ ರಾಶಿಯ ಮೇಲೆ ಐದು ದೀಪಗಳನ್ನು ಬೆಳಗಿಸಲಾಯಿತು. ದಿವ್ಯ ಜ್ಯೋತಿ ನಿರಂತರ ೯ ದಿನ ಉರಿಯುವಂತೆ ಬೆಳಗಿಸಲಾಯಿತು. ಈ ಅಕ್ಕಿರಾಶಿಗೆ ಹುಲುಸು ಎಂದು ಕರೆಯುತ್ತಾರೆ. ಹಿಂದೆ ಕೋಣನನ್ನು ಬಲಿ ಕೊಡಲಾಗುತ್ತಿತ್ತು. ಆದರೆ ಈಗ ಅಹಿಂಸಾ ಕೋಣ ಬಲಿ ರೂಢಿಯಲ್ಲಿರುವುದರಿಂದ ಹಿಟ್ಟಿನಿಂದ ಕೋಣನ ತಲೆಯ ಆಕೃತಿ ಮಾಡಿ, ದೇವಿಯರ ಹೆಸರಿನಲ್ಲಿ ಗದ್ದುಗೆಯ ಸಮೀಪ ಹುಲ್ಲಿನ ಸಣ್ಣ ಗುಡಿಸಲಿನಲ್ಲಿ ಇಡುತ್ತಾರೆ. ದೇವಿಯರ ಮುಂದೆ ಸುತ್ತಲೂ ಕುಂಕುಮ ಮಿಶ್ರಿತ ಅನ್ನದ ಬಲಿ ಹಾಕಲಾಗುತ್ತದೆ. ಊರಿನ ನಾಲ್ಕೂ ದಿಕ್ಕುಗಳಲ್ಲಿ ವಿಘ್ನೇಶ್ವರನ ಹೆಸರಿನಲ್ಲಿ ಇಡುತ್ತಾರೆ. ಜಾತ್ರೆಯಲ್ಲಿ ಯಾವುದೇ ಅನಾಹುತ ಆಗದಂತೆ ಪ್ರಾರ್ಥಿಸಿ ಈ ಅನ್ನದ ಬಲಿ ಇಡುತ್ತಾರೆ. ಇಲ್ಲಿಗೆ ವಿಶ್ವಕರ್ಮ ಬ್ರಾಹ್ಮಣರು ಪೂಜೆ ಸಲ್ಲಿಸಿ, ಬ್ರಾಹ್ಮಣರು ಮತ್ತು ಆಯಗಾರರು ಪೂಜೆ ಸಲ್ಲಿಸಿ ಉಡಿ ತುಂಬುತ್ತಾರೆ. ಇಂದಿನ ವಿಧಿ ವಿಧಾನಗಳನ್ನು ಪೂರೈಸಲಾಗುತ್ತದೆ. ಭಕ್ತರಿಗೆ ಇಂದಿನಿಂದ (ಗುರುವಾರ) ಬೆಳಗ್ಗೆ ೭ ಗಂಟೆಗೆ ಪೂಜೆ ಸೇವೆ ಮಾಡುವುದಕ್ಕೆ ಕಲ್ಪಿಸಲಾಗುತ್ತದೆ. ಈ ಭವ್ಯ ಮೆರವಣಿಗೆಯಲ್ಲಿ ೫೦ ಸಾವಿರಕ್ಕೂ ಹೆಚ್ಚು ಭಕ್ತರು ಸೇರಿರುವುದು ವಿಶೇಷ ಎನ್ನಬಹುದಾಗಿದೆ. ಮೆರವಣಿಗೆಯಲ್ಲಿ ಮಾರಿಯಮ್ಮನ ಭಕ್ತರು ಡೋಲು ಬಾರಿಸುತ್ತ, ಬಾರುಕೋಲಿನಲ್ಲಿ ಹೊಡೆದುಕೊಳ್ಳುತ್ತ ಸಾಗುವವರು, ಚಂಡೆ ತಂಡದವರು, ಯಕ್ಷಗಾನ, ವಿವಿಧ ದೇವತೆಗಳ ಮುಖವಾಡ ಮತ್ತು ಬೊಂಬೆ ವೇಷ ಇವು ಮೆರವಣಿಗೆಗೆ ವಿಶೇಷ ಆಕರ್ಷಣೆ ತಂದಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಬಲೀಕರಣ ಆಸೆ ಬಿಜೆಪಿಯಿಂದ ಸಾಕಾರ
ಶೈಕ್ಷಣಿಕ ಹಿತದೃಷ್ಟಿಯಿಂದ ೧೨ ವಸತಿ ನಿಲಯಗಳು ಮಂಜೂರು