ಶಿವಾನಂದ ಗೊಂಬಿ
ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ)ದ ಅಧ್ಯಕ್ಷಗಿರಿಯ ಅವಧಿ ಫೆ. 28ಕ್ಕೆ ಮುಕ್ತಾಯವಾಗಲಿದ್ದು ಮುಂದಿನ ಅವಧಿಗೆ ಅಧ್ಯಕ್ಷರಾಗಲು ಡಜನ್ ಕೈ ಮುಖಂಡರು ಭರ್ಜರಿ ಲಾಬಿ ನಡೆಸಿದ್ದಾರೆ. ಇದರ ನಡುವೆ ಶಾಕೀರ್ ಸನದಿ ಅವರನ್ನೇ ಮುಂದುವರಿಸಿ ಎಂಬ ಕೂಗು ಸಹ ಕೇಳಿ ಬರುತ್ತಿದೆ.
2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲ ದಿನಗಳಲ್ಲೇ ಶಾಕೀರ್ ಸನದಿ ಅವರನ್ನು ಹುಡಾ ಅಧ್ಯಕ್ಷರನ್ನಾಗಿ ನೇಮಿಸಿತು. ಇದೀಗ ಅವರ ಅವಧಿ ಫೆ. 28ಕ್ಕೆ ಮುಕ್ತಾಯವಾಗಲಿದೆ ಎಂಬುದನ್ನರಿತ ಮುಖಂಡರು ಅಧ್ಯಕ್ಷ ಗಾದಿಗೇರಲು ಲಾಬಿ ನಡೆಸಿದ್ದಾರೆ. ಸಚಿವರು, ಶಾಸಕರು, ಮುಖಂಡರ ಮೂಲಕ ಪ್ರಭಾವ ಬಳಸಿ ಹುಡಾ ಅಧ್ಯಕ್ಷ ಹುದ್ದೆ ಅಲಂಕರಿಸಬೇಕೆಂದು ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ. ಕೆಲವರಂತೂ ರಾಜಧಾನಿಯಲ್ಲಿ ಬೀಡುಬಿಟ್ಟಿದ್ದು ತಮ್ಮ ನಾಯಕರ ದುಂಬಾಲು ಬಿದ್ದಿದ್ದಾರೆ.ರೇಸ್‌ನಲ್ಲಿ ಇರುವವರು?
ಎಂಎಲ್‌ಸಿ ಸ್ಥಾನಕ್ಕೆ ಪ್ರಯತ್ನಿಸುತ್ತಿರುವ ಜಿಲ್ಲಾಧ್ಯಕ್ಷರಾದ ಅಲ್ತಾಫ್ ಹಳ್ಳೂರ, ಅನೀಲಕುಮಾರ ಪಾಟೀಲ ಮತ್ತು ಸತೀಶ ಮೆಹರವಾಡೆ, ಮಜರ್‌ಖಾನ್, ರಾಜು ಎಚ್.ಎಂ., ರಾಬರ್ಟ್ ದದ್ದಾಪುರಿ, ರಾಜಶೇಖರ ಮೆಣಸಿನಕಾಯಿ, ಮಹಿಳಾ ಕೋಟಾದಡಿ ದೇವಕಿ ಯೋಗಾನಂದ ಸೇರಿದಂತೆ ಹಲವರು ರೇಸ್‌ನಲ್ಲಿದ್ದಾರೆ. ತಮ್ಮ ತಮ್ಮ ಬೆಂಬಲಿಗರ ಮೂಲಕ ಮುಖಂಡರ ಮೇಲೆ ಒತ್ತಡವನ್ನೂ ಹಾಕುತ್ತಿದ್ದಾರೆ.ಶಾಕೀರ್ ಮುಂದುವರಿಯಲಿ:
ಇನ್ನು ಸಿಕ್ಕ ಅವಕಾಶವನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡು ಹುಡಾಕ್ಕೆ ಹೊಸ ಇಮೇಜ್ ನೀಡಿರುವುದು ಶಾಕೀರ ಸನದಿ. 38 ವರ್ಷದ ಬಳಿಕ ಎಲ್‌ಪಿಎ (ಲೋಕಲ್ ಪ್ಯಾನಿಂಗ್ ಏರಿಯಾ)ಯನ್ನು ವಿಸ್ತರಿಸಿ 46 ಹಳ್ಳಿಗಳನ್ನು ಹುಡಾ ವ್ಯಾಪ್ತಿಗೆ ಹೊಸದಾಗಿ ಸೇರಿಸಿದ್ದಾರೆ. ಹಳೆ ಅಕ್ರಮ ಲೇಔಟ್‌ಗಳ ಸಮೀಕ್ಷೆ, ಹೊಸ ಅಕ್ರಮ ಲೇಔಟ್ ಆಗದಂತೆ ಕಡಿವಾಣ ಹಾಕಿ ಹುಡಾ ಖದರ್ ಏನೆಂಬುದನ್ನು ತೋರಿಸಿದ್ದಾರೆ. ನಗರ ಈಗಲಾದರೂ ವ್ಯವಸ್ಥಿತವಾಗಿ ಬೆಳೆಯಲು ಈ ರೀತಿ ದೂರದೃಷ್ಟಿಯ ಅಧ್ಯಕ್ಷರೇ ಆಗಬೇಕು. ಆದಕಾರಣ ಶಾಕೀರ ಅವರನ್ನೇ ಈ ಸರ್ಕಾರ ಇರುವ ವರೆಗೂ ಮುಂದುವರಿಸಬೇಕು ಎಂಬ ಬೇಡಿಕೆ ಶಾಕೀರ ಬೆಂಬಲಿಗರದು.ಜಿಲ್ಲಾ ಮುಖಂಡರ ಪ್ರಭಾವ:
ಶಾಕೀರ ಅವರನ್ನೇ ಮುಂದುವರಿಸಬೇಕೋ? ಅಥವಾ ಬೇರೆಯವರನ್ನು ಆ ಸ್ಥಾನದಲ್ಲಿ ಕೂರಿಸಬೇಕು ಎಂಬುದನ್ನು ನಿರ್ಧರಿಸುವುದು ಜಿಲ್ಲೆಯ ಪ್ರಭಾವಿ ಮುಖಂಡರಾದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕರಾದ ಪ್ರಸಾದ ಅಬ್ಬಯ್ಯ, ವಿನಯ ಕುಲಕರ್ಣಿ ಅವರು. ಜಾತಿ, ಸಂಘಟನೆ ಎಲ್ಲವನ್ನು ಅಳೆದು ತೂಗಿ, ಲೆಕ್ಕಾಚಾರ ಹಾಕಿ ಹುಡಾ ಅಧ್ಯಕ್ಷಗಿರಿ ಯಾರಿಗೆ ಕೊಡಬೇಕು ಎಂಬುದನ್ನು ಸರ್ಕಾರ ನಿರ್ಧರಿಸಲಿದೆ. ಹಿಂದಿನ ಆದೇಶದಂತೆ ಫೆ. 28ಕ್ಕೆ ತಮ್ಮ ಅಧಿಕಾರವಧಿ ಮುಕ್ತಾಯವಾಗಲಿದೆ. ಸರ್ಕಾರ ಮುಂದುವರಿಸುತ್ತದೆಯೋ ಇಲ್ಲವೋ ಗೊತ್ತಿಲ್ಲ. ಮುಂದುವರಿಸಿದರೆ ಮತ್ತಷ್ಟು ಕೆಲಸ ಮಾಡುತ್ತೇನೆ. ಇಷ್ಟು ದಿನ ಹುಡಾ ಅಧ್ಯಕ್ಷನಾಗಿ ಕೆಲಸ ಮಾಡಿದ ತೃಪ್ತಿಯಿಂದ ಹೊರನಡೆಯುತ್ತೇನೆ. ಏನೇ ಆದರೂ ಖುಷಿನೇ.ಶಾಕೀರ ಸನದಿ, ಹುಡಾ ಅಧ್ಯಕ್ಷ