ಸೌಲಭ್ಯ ನೀಡದ ಲೇಔಟ್ ಮಾಲೀಕರಿಗೆ ನೋಟಿಸ್ ನೀಡಿ: ಡಾ. ಚಂದ್ರು ಲಮಾಣಿ

KannadaprabhaNewsNetwork |  
Published : Feb 12, 2026, 02:45 AM IST
ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಶಾಸಕ ಡಾ. ಚಂದ್ರು ಕೆ. ಲಮಾಣಿ ಮಾತನಾಡಿದರು. | Kannada Prabha

ಸಾರಾಂಶ

ಬಡಾವಣೆಗಳಲ್ಲಿ ಯಾವುದೇ ಅಭಿವೃದ್ದಿ ಹಾಗೂ ಮೂಲ ಸೌಲಭ್ಯಗಳಿಲ್ಲದೇಯೇ ಮನಸೋ ಇಚ್ಛೆ ಉತಾರ ನೀಡಿದ್ದರಿಂದ ಪಟ್ಟಣದ ಜನತೆ ಸೌಲಭ್ಯಗಳ ಕೊರತೆಯಿಂದ ನರಳುತ್ತಿದ್ದಾರೆ.

ಶಿರಹಟ್ಟಿ: ಮೂಲ ಸೌಲಭ್ಯ ಕಲ್ಪಿಸದೇ ಬಡಾವಣೆ ನಿರ್ಮಾಣ ಮಾಡಿದ ಮಾಲೀಕರಿಗೆ ನೋಟಿಸ್ ನೀಡಿ ಸೌಲಭ್ಯ ಕಲ್ಪಿಸಿಕೊಡುವಂತೆ ಕ್ರಮ ವಹಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಪಪಂ ಮುಖ್ಯಾಧಿಕಾರಿಗೆ ತಾಕೀತು ಮಾಡಿದರು.ಬುಧವಾರ ಪಟ್ಟಣದ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರ ಅಹವಾಲು ಸ್ವೀಕಾರ ಹಾಗೂ ಪಪಂ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಕ್ರಮ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನೂತನ ಬಡಾವಣೆಗಳ ಮಾಲೀಕರಿಗೆ ಸರ್ಕಾರದ ಎಲ್ಲ ಮಾನದಂಡಗಳನ್ನು ಗಾಳಿಗೆ ತೂರಿ ರಾತ್ರೋರಾತ್ರಿ ಉತಾರ ನೀಡುವ ಅಧಿಕಾರಿಗಳ ನಡೆ ಬಗ್ಗೆ ಕಿಡಿಕಾರಿದ ಅವರು, ಬಡಾವಣೆಗಳಲ್ಲಿ ಯಾವುದೇ ಅಭಿವೃದ್ದಿ ಹಾಗೂ ಮೂಲ ಸೌಲಭ್ಯಗಳಿಲ್ಲದೇಯೇ ಮನಸೋ ಇಚ್ಛೆ ಉತಾರ ನೀಡಿದ್ದರಿಂದ ಪಟ್ಟಣದ ಜನತೆ ಸೌಲಭ್ಯಗಳ ಕೊರತೆಯಿಂದ ನರಳುತ್ತಿದ್ದಾರೆ. ಕಾನೂನುಬಾಹಿರ ಉತಾರ ನೀಡಿರುವ ಹಿಂದೆ ದೊಡ್ಡ ಷಡ್ಯಂತ್ರವೇ ಅಡಗಿದೆ ಎಂದು ಆರೋಪಿಸಿದರು.

ಬಡವರು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಬಿಟ್ಟು ಮನೆಯ ಉತಾರ, ತೆರಿಗೆ ಪಾವತಿ ಸೇರಿದಂತೆ ಇತರೆ ಸಣ್ಣಪುಟ್ಟ ಕೆಲಸಕ್ಕೆ ಅಲೆದಾಡಿದರೂ ಸಮಯಕ್ಕೆ ಸರಿಯಾಗಿ ಅವರ ಕೆಲಸ ಮಾಡಿಕೊಡದ ಅಧಿಕಾರಿಗಳು ಮತ್ತು ಪಪಂ ಸಿಬ್ಬಂದ ವರ್ತನೆಗೆ ಬೇಸರ ಹೊರಹಾಕಿದರು.ಸಾಮಾನ್ಯ ಜನರು ದೂರು: ಸಾಮಾನ್ಯ ಜನರು ಎಲ್ಲೋ ಒಂದು ಪ್ಲಾಟ್ ಖರೀದಿಸಿ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಮನೆ ಕಟ್ಟಿಕೊಳ್ಳಬೇಕು ಎಂದರೆ ಆರು ತಿಂಗಳಿಂದ ಖಾತೆ ಬದಲಾವಣೆ ಮಾಡಿ ಹೊಸ ಉತಾರ ನೀಡುತ್ತಿಲ್ಲ. ಬರೀ ಸರ್ವರ್ ಇಲ್ಲ, ನಾವೇನು ಮಾಡಬೇಕು ಎಂದು ಸಬೂಬು ಹೇಳುವ ಮುಖ್ಯಾಧಿಕಾರಿಗಳು ನೂತನ ಬಡಾವಣೆ ಮಾಲೀಕರು ಬರೀ ಫೋನ್ ಮಾಡಿ ಹೇಳಿದರೆ ಉತಾರ ನೀಡುತ್ತಿರಿ. ಇನ್ನು ಮುಂದೆ ಇದೇ ವ್ಯವಸ್ಥೆ ಮುಂದುವರಿದರೆ ಸಹಿಸಲ್ಲ ಎಂದು ಎಚ್ಚರಿಸಿದರು.ಸರ್ಕಾರದ ನಿಯಮ ಮಾನದಂಡಗಳು ಏನಿದೆ? ಅದರಂತೆ ಕೆಲಸ ಮಾಡಬೇಕು. ಪಟ್ಟಣದಲ್ಲಿರುವ ಸಾಕಷ್ಟು ನೂತನ ಬಡಾವಣೆಗಳು ಅಭಿವೃದ್ಧಿ ಹೊಂದದೇ ಇದ್ದರೂ ಈಗಾಗಲೇ ಎಲ್ಲ ನಿಯಮ ಗಾಳಿಗೆ ತೂರಿ ಪೂರ್ಣಪ್ರಮಾಣದ ಉತಾರ ನೀಡಿದ್ದಿರಿ. ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಡಾವಣೆ ಮಾಲೀಕರಿಗೆ ಸಂಪೂರ್ಣ ಅಭಿವೃದ್ಧಿ ಹಾಗೂ ಎಲ್ಲ ಸೌಲಭ್ಯ ಕಲ್ಪಸಿಕೊಡುವಂತೆ ತುರ್ತು ನೋಟಿಸ್ ನೀಡುವಂತೆ ಸೂಚನೆ ನೀಡಿದರು. ಇದಕ್ಕೂ ಸ್ಪಂದಿಸದೇ ಹೋದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದರು.ಫಲಾನುಭವಿಗಳ ಪರಶೀಲನೆಯಾಗಲಿ: ಪಿಎಂ ಸ್ವ- ನಿಧಿಯಿಂದ ಶಿರಹಟ್ಟಿಯಲ್ಲಿ ೩೬೨ ಬೀದಿಬದಿ ವ್ಯಾಪಾರಸ್ಥರಿಗೆ ಸಾಲವನ್ನು ನೀಡಲಾಗಿದೆ. ಆದರೆ ವಾಸ್ತವ ಸ್ಥಿತಿ ಗಮನಿಸಿದರೆ ಇಲ್ಲಿ ಅಷ್ಟು ಪ್ರಮಾಣದಲ್ಲಿ ಬೀದಿಬದಿ ವ್ಯಾಪಾರಸ್ಥರೆ ಇಲ್ಲ ಎಂದು ಶಾಸಕರು ಆರೋಪಿಸಿದರು. ಅಷ್ಟೆಯಲ್ಲದೆ ಶಾಲೆಗಳ ಮುಂಭಾಗದಲ್ಲಿ ಮತ್ತು ಜನನಿಬಿಡ ಪ್ರದೇಶಗಳಲ್ಲಿ ದೂಡುವ ಗಾಡಿಗಳಲ್ಲಿ ವ್ಯಾಪಾರ ವಹಿವಾಟು ನಡೆಸುವುದನ್ನು ನಿಷೇಧಿಸಿ. ಇದರಿಂದ ಮಹಿಳೆಯರಿಗೆ ಮತ್ತು ಆ್ಯಂಬುಲೆನ್ಸ್‌ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದರು.ಇದಕ್ಕೆ ಉತ್ತರಿಸಿದ ಪಪಂ ಸಿಬ್ಬಂದಿ ಸರ್ಕಾರದ ನೂತನ ಸೂತ್ತೋಲೆಯಂತೆ ಬೀದಿಬದಿ ವ್ಯಾಪಾರಸ್ಥರ ಜತೆಗೆ, ಟೇಲರಿಂಗ್, ಹಾಲು ವ್ಯಾಪಾರ ಮತ್ತು ಮನೆ ಉದ್ಯೋಗ ಮಾಡುವವರಿಗೂ ಕೂಡಾ ಪಿಎಂ ಸ್ವ- ನಿಧಿಯಿಂದ ಸಾಲ ಕೊಡಲು ಅನುಮತಿ ನೀಡಲಾಗಿದೆ. ಅದರಂತೆ ಸಾಲವನ್ನು ನೀಡಲಾಗಿದೆ ಎಂದರು.

ಹಾಗಿದ್ದಲ್ಲಿ ಮುಖ್ಯಾಧಿಕಾರಿಗಳು ಇನ್ನೊಮ್ಮೆ ಫಲಾನುಭವಿಗಳ ದಾಖಲೆಯನ್ನು ಪರಿಶೀಲಿಸಿ, ಅನರ್ಹರಿದ್ದರೆ ಅಂಥವರನ್ನು ಯೋಜನೆಯಿಂದ ಕೈಬಿಡುವಂತೆ ಶಾಸಕರು ಸೂಚಿಸಿದರು.ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಸವಿತಾ ತಾಂಬ್ರೆ, ನಾಗರಾಜ ಲಕ್ಕುಂಡಿ, ಜಾನು ಲಮಾಣಿ, ಸಂದೀಪ ಕಪ್ಪತ್ತನವರ, ಫಕ್ಕೀರೇಶ ರಟ್ಟಿಹಳ್ಳಿ, ನಂದಕ್ಕ ಪಲ್ಲೇದ, ಬಸವರಾಜ ತುಳಿ, ಗೂಳಪ್ಪ ಕರಿಗಾರ, ಪರಶುರಾಮ ಡೊಂಕಬಳ್ಳಿ, ರಾಜು ಶಿರಹಟ್ಟಿ, ಅಕ್ಬರ ಯಾದಗಿರಿ, ವೀರಣ್ಣ ಅಂಗಡಿ, ವಿಠ್ಠಲ ಬಿಡವೆ, ಸಂತೋಷ ತೋಡೆಕಾರ ಹಾಗೂ ಪಪಂ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಬಲೀಕರಣ ಆಸೆ ಬಿಜೆಪಿಯಿಂದ ಸಾಕಾರ
ಶೈಕ್ಷಣಿಕ ಹಿತದೃಷ್ಟಿಯಿಂದ ೧೨ ವಸತಿ ನಿಲಯಗಳು ಮಂಜೂರು