ಕಂಪ್ಲಿ: ಇಲ್ಲಿನ ಕಂಪ್ಲಿ ಉತ್ಸವದ ಮೊದಲ ದಿನವೇ ಪಟ್ಟಣವು ಭಕ್ತಿಭಾವ, ಸಂಭ್ರಮ, ಸಾಂಸ್ಕೃತಿಕ ವೈಭವದ ರಂಗಿನ ಹಬ್ಬದ ವಾತಾವರಣದಲ್ಲಿ ತೇಲಿಬಿಟ್ಟಿತು. ಬುಧವಾರ ಸೋಮೇಶ್ವರಸ್ವಾಮಿ ಹಾಗೂ ಪಾರ್ವತಿ ದೇವಿಯವರ ಪವಿತ್ರ ಮೂರ್ತಿಯ ಅಂಬಾರಿ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಕಂಪ್ಲಿಯ ಬೀದಿಗಳು ಭಕ್ತಿ, ಪರಂಪರೆ, ಜನಸಾಗರದ ಉತ್ಸಾಹದಿಂದ ಕಂಗೊಳಿಸಿತು.
ಅಂಬಾರಿಯಲ್ಲಿ ಅಲಂಕೃತವಾಗಿ ಪ್ರತಿಷ್ಠಾಪಿಸಲಾದ ಸೋಮೇಶ್ವರ ಹಾಗೂ ಪಾರ್ವತಿ ದೇವಿಯ ಮೂರ್ತಿ ಭಕ್ತರ ಮನಸೂರೆಗೈದಿತು.
ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಜನಪದ ಹಾಗೂ ಸಾಂಸ್ಕೃತಿಕ ಕಲಾತಂಡಗಳು ಕಣ್ಮನ ಸೆಳೆದವು. ಹೊಸಪೇಟೆಯ ಮರಗಾಲು ಕಲಾವಿದರು ತಮ್ಮ ಸಮತೋಲನದ ಕಲೆಯಿಂದ ಮೆಚ್ಚುಗೆ ಪಡೆದರೆ, ಕಂಪ್ಲಿಯ ಆದಿವಾಸಿ ತಾಷಾರಾಂಡೋಲ್ ತಂಡ ಸ್ಥಳೀಯ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಅನಾವರಣಗೊಳಿಸಿತು. ಸೋಮಲಾಪುರದ ಹಗಲುವೇಷ, ಹುಬ್ಬಳ್ಳಿಯ ಕಥಕ್ಕಳಿ ಗೊಂಬೆ, ಹಳೆ ದರೋಜಿಯ ಹುಲಿವೇಷ ಲಿಂಗಪ್ಪ ತಂಡ ಪ್ರೇಕ್ಷಕರನ್ನು ರಂಜಿಸಿತು.ಮಂಡ್ಯದ ಪೂಜಾ ಕುಣಿತ, ಶಿವಮೊಗ್ಗದ ಸಮೇಳ, ಧಾರವಾಡದ ಕೀಲು ಕುದುರೆ ಹಾಗೂ ಗೊಂಬೆ ಕುಣಿತ, ಬಳ್ಳಾರಿಯ ಹಕ್ಕಿಪಿಕ್ಕಿ ಸಮುದಾಯದ ಸಾಂಪ್ರದಾಯಿಕ ಕುಣಿತ, ತುರುವೇಕೆರೆಯ ಗೋರೆ ಕುಣಿತ, ಮಜ್ಜಿ ಕಂಸಾಳೆ, ಕಹಳೆ, ಹೊನ್ನಾವರದ ಅಣ್ಣ ಹಾಲಕ್ಕಿ, ಸಾಗರದ ಸುಗ್ಗಿ ಕುಣಿತ, ಮಹಿಳಾ ಡೊಳ್ಳು ಕುಣಿತ, ವಿಜಯಪುರದ ಸತ್ತಿಗೆ ಕುಣಿತ ಹಾಗೂ ಕಂಪ್ಲಿ ತಾಷಾರಾಂ ಡೋಲ್ ಮುಬಾರಕ್ ತಂಡಗಳ ಪ್ರದರ್ಶನಗಳು ಮೆರವಣಿಗೆಯ ವೈಭವವನ್ನು ಮತ್ತಷ್ಟು ಹೆಚ್ಚಿಸಿತು. ವಿವಿಧ ಕಡೆಗಳಿಂದ ಆಗಮಿಸಿದ್ದ ನಂದಿ ಕೋಲು, ಕಂಚಿ ಮೇಳ ಸೇರಿದಂತೆ ಅನೇಕ ಕಲಾ ತಂಡಗಳು ಮೆರವಣಿಗೆಗೆ ಸಾಂಸ್ಕೃತಿಕ ಶ್ರೀಮಂತಿಕೆ ತುಂಬಿದವು.