ಕನ್ನಡಪ್ರಭ ವಾರ್ತೆ ಬೀದರ್
ಗುರುವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಹಾಲಿ ಎಸ್‌ಪಿ ಪ್ರದೀಪ್ ಗುಂಟೆ ಅವರಿಗೆ ಸ್ವಾಗತ ಹಾಗೂ ವರ್ಗಾವಣೆಗೊಂಡ ಎಸ್‌ಪಿ ಚನ್ನಬಸವಣ್ಣ ಎಸ್‌ಎಲ್ ಅವರಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ವರ್ಗಾವಣೆಯಾಗಿ ಹೊರಟಿದ್ದ ಎಸ್‌ಪಿ ಚನ್ನಬಸವಣ್ಣ ಜಿಲ್ಲೆಯೊಂದಿಗೆ ಹೊಂದಿದ ನಂಟನ್ನು ಭಾವುಕರಾಗಿ ನುಡಿದಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಎಂದಾಕ್ಷಣ ಕಣ್ಣೆದುರಿಗೆ ಬರುವುದು ಗಟ್ಟಿತನ, ಗಡಸುತನ, ಬಿರು ಮಾತುಗಳು, ಗದರುವ ಧ್ವನಿ. ಆದರೆ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಈ ಚಿಂತನೆಯನ್ನೇ ಬದಲಿಸುವಂಥ ವಾತಾವರಣ ಜಿಲ್ಲಾ ಪೊಲೀಸ್ ವ್ಯವಸ್ಥೆಯಲ್ಲಿ ಬಂದಿತ್ತು. ಹಾಗಂತ ಅಪರಾಧಿಗಳಿಗೆ ದುಸ್ವಪ್ನವಾಗಿದ್ದರು. ಸಾವಿರಾರು ಕೋಟಿ ರು.ಗಳ ಆಫೀಮು, ಗುಟ್ಕಾ ಸಾಗಾಟಕ್ಕೆ ಬ್ರೇಕ್ ಹಾಕಿದ್ದರು. ಸಂಚಾರ ವ್ಯವಸ್ಥೆಗೆ, ಸಾಮರಸ್ಯ, ಸೌಹಾರ್ದತೆ ಮೂಡಿಸುವ ಕಾರ್ಯಗಳ ಮೂಲಕ ಜನಮನ ಗೆದ್ದಿದ್ದರು.ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಬೆಂಗಳೂರು ಕೇಂದ್ರ ಕಚೇರಿಗೆ ವರ್ಗಾವಣೆಯಾಗಿರುವ ಎಐಜಿಪಿ ಚನ್ನಬಸವಣ್ಣ ಎಸ್‌ಎಲ್ ಮಾತನಾಡಿ, ಬೀದರ್ ಜಿಲ್ಲೆ ಶರಣರ ಸೂಫಿ ಸಂತರು, ಮಹ್ಮದ್ ಗಾವಾನ್ ನಡೆದಾಡಿದ ಭೂಮಿಯಿದೆ. ಇಂತಹ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದು ನನ್ನ ಸೌಭಾಗ್ಯ. ನನ್ನ ಅಧಿಕಾರಾವಧಿಯಲ್ಲಿ ಇಲ್ಲಿಯ ಜನರ ಸಹಕಾರ ನನಗೆ ಭಾವುಕನನ್ನಾಗಿ ಮಾಡಿದೆ ಎಂದು ತಿಳಿಸಿದರು.
ಕಣ್ಣಂಚಲ್ಲಿ ಒಂದು ಕ್ಷಣ ನೀರು ಚಿಮ್ಮಿ, ಗಂಟಲು ಕಟ್ಟಿ, ಭಾವುಕರಾಗಿ ಗದ್ಗದಿತ:
ಮುಂದುವರಿದು ಭಾವುಕರಾಗಿಯೇ ಮಾತನಾಡಿದ ಚನ್ನಬಸವಣ್ಣನವರು. ಈ ನನ್ನ 12 ತಿಂಗಳ ಅವಧಿಯಲ್ಲಿ ನನ್ನಿಂದ ತಿಳಿದೋ ತಿಳಿಯದೆಯೋ ಏನಾದರೂ ತಪ್ಪಾಗಿದ್ದರೆ ನಿಮ್ಮವನೆಂದು ಕ್ಷಮಿಸಿ ಎಂದು ಹೇಳುವಾಗ ಕಣ್ತುಂಬಾ ನೀರು ತಂದಿದ್ರು. ಎನ್ನ ಚಿತ್ತ ಅತ್ತಿಯ ಹಣ್ಣು ನೋಡಯ್ಯ ಎನ್ನುವ ಶರಣರ ವಾಣಿಯಂತೆ ಅತ್ತಿ ಹಣ್ಣು ಹೊರಗಡೆ ನೋಡಲು ಸುಂದರವಾಗಿಯೇ ಕಾಣುತ್ತೆ. ಆದರೆ ಒಳಗಡೆ ಒಂದಿಷ್ಟು ಏನಾದರೂ ಕೊರತೆ ಇದ್ದರೂ ಹೊಟ್ಟೆಗಾಕಿಕೊಳ್ಳಿ ಎಂದ್ರು.
ನೂತನವಾಗಿ ಅಧಿಕಾರ ಸ್ವೀಕರಿಸಿದ ಎಸ್‌ಪಿ ಪ್ರದೀಪ ಗುಂಟಿ ಹಾಗೂ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿದರು. ಇದೇ ವೇಳೆ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ, ಪತ್ರಕರ್ತ ಶಶಿಕಾಂತ ಶೆಂಬೆಳ್ಳಿ, ಪೂರ್ಣಿಮಾ ಜಾರ್ಜ್, ಶಿವಕುಮಾರ ಕಟ್ಟೆ, ಶಾಹೀನ್ ಪಟೇಲ್ ಮಾತನಾಡಿದರು. ಇದೇ ವೇಳೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಹೇಶ ಮೇಘಣ್ಣವರ್, ಚಂದ್ರಕಾಂತ ಪೂಜಾರಿ ಹಾಗೂ ಡಿವೈಎಸ್‌ಪಿ ಶಿವನಗೌಡ ಪಾಟೀಲ್ ಸೇರಿದಂತೆ ಅನೇಕರು ಇರಿದ್ದರು.ತೆರೆದ ಜೀಪಿನಲ್ಲಿ ಹೂಮಳೆಗೈದು ಬೀಳ್ಕೊಡುಗೆ: ಬೀದರ್ ಜಿಲ್ಲಾ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವರ್ಗಾವಣೆಯಾದ ಚನ್ನಬಸವಣ್ಣ ಎಸ್‌ಎಲ್ ಅವರನ್ನು ತೆರೆದ ಜೀಪಿನಲ್ಲಿ ಹೂಮಳೆಗೆರೆಯುವ ಮೂಲಕ ಹಗ್ಗದಲ್ಲಿ ಜೀಪನ್ನು ಎಳೆಯುವ ಮೂಲಕ ಗೌರವಪೂರ್ವಕವಾಗಿ ಬೀಳ್ಕೊಟ್ಟರು.