ಕನ್ನಡಪ್ರಭ ವಾರ್ತೆ ಔರಾದ್
ರಥಯಾತ್ರೆ ಪಟ್ಟಣಕ್ಕೆ ಪ್ರವೇಶಿಸುತ್ತಿದ್ದಂತೆ ಕನ್ನಡಾಂಬೆ ವೃತ್ತದ ಬಳಿ ಶಾಸಕರು ರಥದಲ್ಲಿ ಅಲಂಕೃತಗೊಂಡಿರುವ ಕನ್ನಡಾಂಬೆ ಭಾವಚಿತ್ರಕ್ಕೆ ಮಾಲಾರ್ಪಣೆ ನೆರವೇರಿಸಿ, ಪುಷ್ಪಮನ ನಮನ ಸಲ್ಲಿಸಿದರು.
ರಾಜ್ಯಾದ್ಯಂತ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಯುವ ಜನತೆಯಲ್ಲಿ ಅರಿವು ಮೂಡಿಸುವ ಭಾಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿಶೇಷವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಮೆರವಣಿಗೆಯಲ್ಲಿ ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ತಾಪಂ ಇಒ ಬೀರೇಂದ್ರಸಿಂಗ್ ಠಾಕೂರ್, ಸಿಪಿಐ ರಘುವೀರಸಿಂಗ್ ಠಾಕೂರ್, ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ, ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಲಕ್ಷ್ಮಿ, ಕಸಾಪ ಅಧ್ಯಕ್ಷ ಶಾಲಿವಾನ ಉದಗಿರೆ, ದಾಸ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಎಂ.ಅಮರವಾಡಿ, ಎಪಿಎಂಸಿ ಅಧ್ಯಕ್ಷ ಧೋಂಡಿಬಾ ನರೋಟೆ ಸೇರಿದಂತೆ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಸಂಘ-ಸಂಸ್ಥೆ ಪ್ರತಿನಿಧಿಗಳು, ಸಾಹಿತಿಗಳು, ಮುಖಂಡರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು.
ಕರ್ನಾಟಕ ಸಂಭ್ರಮ-50 ಜ್ಯೋತಿ ರಥಯಾತ್ರೆ ಹಿನ್ನೆಲೆ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಸಾವಿರ ಮೀಟರ್ ಕನ್ನಡ ಬಾವುಟದ ಮೆರವಣಿಗೆ ಆಕರ್ಷಕವಾಗಿತ್ತು. ವಿವಿಧ ಶಾಲಾ-ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಕೈಯಲ್ಲಿ ಬಾವುಟ ಹಿಡಿದು ಕನ್ನಡದ ಜಯಘೋಷಗಳನ್ನು ಹಾಕುತ್ತಾ ಸಾಗುತ್ತಿರುವಾಗ ಶಾಸಕ ಪ್ರಭು ಚವ್ಹಾಣ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಿದರು. ತಾಲೂಕಿನ ಕೌಠಾ ಗ್ರಾಮದಿಂದ ಆರಂಭವಾದ ರಥಯಾತ್ರೆ ಕೌಡಗಾಂವ, ಮುಸ್ತಾಪೂರ್, ಸಂತಪೂರ್, ಬೋರಾಳ ಮಾರ್ಗವಾಗಿ ಔರಾದ್‌ಗೆ ತಲುಪಿತು.
ಮೆರವಣಿಗೆಯು ಕನ್ನಡಾಂಬೆ ವೃತ್ತದಿಂದ ಆರಂಭಗೊಂಡು ತಾ.ಪಂ, ಬಸವೇಶ್ವರ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳ ಮುಖಾಂತರ ಅಮರೇಶ್ವರ ಕಲ್ಯಾಣ ಮಂಟಪದ ಬಳಿ ಕೊನೆಗೊಂಡಿತು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಶಿಕ್ಷಕ, ಸಾಹಿತಿ ಶಿವಲಿಂಗ ಹೇಡೆ ಕನ್ನಡ ನಾಡುನುಡಿ ಬಗ್ಗೆ ಉಪನ್ಯಾಸ ನೀಡಿದರು.