ಕಂಪ್ಲಿ: ಬಳ್ಳಾರಿ ಜಿಲ್ಲೆಯ ದರೋಜಿ ಗ್ರಾಮದ ರೈಲ್ವೆ ನಿಲ್ದಾಣದಿಂದ ಗಂಗಾವತಿ ನಗರಕ್ಕೆ ಸಂಪರ್ಕ ಕಲ್ಪಿಸುವ ನೂತನ ಬ್ರಾಡ್‌ಗೇಜ್ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅಗತ್ಯವಿರುವ ಸರ್ವೇ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು, ಮುಂದಿನ ಹಂತವಾಗಿ ಕೂಡಲೇ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಆರಂಭಿಸಬೇಕು ಎಂದು ಕಂಪ್ಲಿ ತಾಲೂಕು ರೈಲ್ವೆ ಮಾರ್ಗಕ್ಕಾಗಿ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ ಒತ್ತಾಯಿಸಿದರು.
ದರೋಜಿ–ಗಂಗಾವತಿ ನಡುವಿನ ನೂತನ ಬ್ರಾಡ್‌ಗೇಜ್ ರೈಲ್ವೆ ಮಾರ್ಗವು ಸುಮಾರು 31.30 ಕಿ.ಮೀ. ಉದ್ದ ಹೊಂದಿದ್ದು, ಅದರ ಅಂದಾಜು ವೆಚ್ಚವನ್ನು ₹919.49 ಕೋಟಿ ಎಂದು ನಿಗದಿಪಡಿಸಲಾಗಿದೆ. ಈ ಮಹತ್ವದ ಯೋಜನೆ ಹಲವು ವರ್ಷಗಳ ಹಿಂದೆ ನಿಗದಿಗೊಂಡಿದ್ದರೂ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಅಗತ್ಯ ಅನುದಾನ ಬಿಡುಗಡೆ ಆಗದ ಹಿನ್ನೆಲೆಯಲ್ಲಿ ಸಮೀಕ್ಷೆ ಪೂರ್ಣಗೊಂಡ ನಂತರದ ಎಲ್ಲ ಪ್ರಕ್ರಿಯೆಗಳು ಸ್ಥಗಿತಗೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದರು. ಗಂಗಾವತಿ, ಕಂಪ್ಲಿ ಹಾಗೂ ಸುತ್ತಮುತ್ತಲ ಗ್ರಾಮಗಳ ಅಭಿವೃದ್ಧಿಗೆ ಈ ರೈಲ್ವೆ ಮಾರ್ಗ ಬಹುಮುಖ್ಯವಾಗಿದ್ದು, ಕೈಗಾರಿಕಾ, ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಗಳ ಬೆಳವಣಿಗೆಗೂ ಸಹಕಾರಿಯಾಗಲಿದೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಸ್ಪಂದಿಸಿ ಅನುದಾನ ಬಿಡುಗಡೆಗೊಳಿಸಿ, ನೂತನ ಬ್ರಾಡ್‌ಗೇಜ್ ರೈಲ್ವೆ ಸಂಪರ್ಕ ಕಾಮಗಾರಿಗೆ ಶೀಘ್ರ ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಕಾರ್ಯದರ್ಶಿ ಹಾದಿಮನಿ ಕಾಳಿಂಗವರ್ಧನ, ನಿರ್ದೇಶಕ ಅಯ್ಯೋದಿ ವೆಂಕಟೇಶ, ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಮಾಜಿ ಸಂಸದ ಸಣ್ಣ ಫಕ್ಕೀರಪ್ಪ, ಬಿಜೆಪಿ ಜಿಲ್ಲಾ ಅಧ್ಯಕ್ಷ ಅನಿಲ್‌ಕುಮಾರ್ ಮೋಕ ಹಾಗೂ ಸಮಿತಿಯ ಪದಾಧಿಕಾರಿಗಳಿದ್ದರು.