ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅಧಿಕಾರ ಶಾರದಾ ಪದಗ್ರಹಣ ಸಮಾರಂಭ
ಗೃಹಲಕ್ಷ್ಮಿ, ಶಕ್ತಿ ಯೋಜನೆ ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಕಾರ್ಯಕ್ರಮಗಳು ಮಹಿಳೆಯರ ಬದುಕನ್ನು ಬಲಪಡಿಸಿವೆ ಎಂದು ರಾಜ್ಯ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಸೌಮ್ಯ ರೆಡ್ಡಿ ಹೇಳಿದರು.
ಪಟ್ಟಣದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನೂತನವಾಗಿ ಉತ್ತರಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಶಾರದಾ ರೋಠೋಡ ಅವರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಕಾಂಗ್ರೆಸ್ ಶ್ರಮಿಸುತ್ತಿದೆ. ಸಮಾಜ ಹಾಗೂ ಮುಂದಿನ ಪೀಳಿಗೆಗೆ ಒಳ್ಳೆಯದಾಗಬೇಕಾದರೆ ಮಹಿಳೆಯರನ್ನು ಬಲಪಡಿಸಬೇಕು. ರಾಜ್ಯ ಸರ್ಕಾರ ಮಹಿಳೆಯರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆ ಜಾರಿ ಮಾಡಿದೆ. ಈ ಬಗ್ಗೆ ಟೀಕೆ ಮಾಡುವ ಬಿಜೆಪಿಯವರಿಗೆ ಜನರ ಕಷ್ಟದ ಬಗ್ಗೆ ಏನು ಗೊತ್ತು ಎಂದು ಪ್ರಶ್ನಿಸಿದ ಅವರು, ಟೀಕೆ ಮಾಡುವ ಬಿಜೆಪಿಯವರೇ ಈಗ ಬೇರೆ ಬೇರೆ ರಾಜ್ಯದಲ್ಲಿ ನಮ್ಮ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇಂದಿನ ಸ್ಪರ್ಧಾ ಯುಗದಲ್ಲಿ ಶಿಕ್ಷಣ ಅತಿ ಮುಖ್ಯವಾಗಿದೆ. ಸರಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು ಸಬಲೀಕರಣ ಹೊಂದಬೇಕಲ್ಲದೇ, ಮಹಿಳೆಯರು ಆರೋಗ್ಯ ಕಾಪಾಡಿಕೊಳ್ಳಬೇಕು. ಸ್ಥಳೀಯ ಸಂಸ್ಥೆ ಚುನಾವಣೆಗಳು ಸಮೀಪಿಸುತ್ತಿದ್ದು, ಮಹಿಳಾ ಕಾಂಗ್ರೆಸ್ ನವರು ಪಕ್ಷದ ಸಂಘಟನೆಗೆ ಹೆಚ್ಚಿನ ಶ್ರಮವಹಿಸಿ ಕಾಂಗ್ರೆಸ್ ಸರ್ಕಾರವನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿ, ಕೇವಲ ಹುದ್ದೆ ಅನುಭವಿಸಿದರೆ ಸಾಲದು, ಬದಲಾಗಿ ಸಿಕ್ಕ ಹುದ್ದೆಯ ಅಧಿಕಾರವನ್ನು ಸದುಪಯೋಗಪಡೆದುಕೊಂಡು ಪಕ್ಷಕ್ಕಾಗಿ ಏನಾದರೂ ಕೊಡುಗೆ ನೀಡಬೇಕು. ಅಧ್ಯಕ್ಷ ಸ್ಥಾನ ಎಂದರೆ ಮುಳ್ಳಿನ ಗಾದೆ ಇದ್ದಂತೆ. ಯಾವುದೇ ಸರ್ಕಾರ ಬರಬೇಕಾದರೆ ಮಹಿಳೆಯರ ಪಾತ್ರ ಪ್ರಮುಖವಾಗಿರುತ್ತದೆ ಎಂದರು
ಕೆ.ಪಿ.ಸಿ.ಸಿ. ಸದಸ್ಯ ವಿವೇಕ ಹೆಬ್ಬಾರ ಮಾತನಾಡಿ, ಹುದ್ದೆಯಿಂದ ಜವಾಬ್ದಾರಿ ಹೆಚ್ಚುತ್ತದೆ. ಎಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಾರೆ ಎಂಬುವುದರ ಮೇಲೆ ಆಧರಿತವಾಗಿರುತ್ತದೆ. ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆಯರಿಗೆ ಬೆಂಬಲವಿದೆ. ಮಹಿಳಾ ಸಂಘಟನೆ ಬಲಪಡಿಸಬೇಕು. ಹೋರಾಟದಿಂದ ಏನು ಬೇಕಾದರೂ ಸಾಧಿಸಬಹುದು ಎಂದು ಹೇಳಿದರು.ಮಾಜಿ ಶಾಸಕಿ ಶಾರದಾ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ, ಜಿಲ್ಲಾ ಕಾಂಗ್ರೆಸ್ ಮಹಿಳಾಧ್ಯಕ್ಷೆ ಶಾರದಾ ರೋಠೋಡ, ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಜಾತಾ ಗಾಂವಕರ, ಜ್ಯೋತಿ ಪಾಟೀಲ, ಲಲಿತಾ ಕಾಳೆಮನೆ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ ಮಾತನಾಡಿದರು.
ಯಲ್ಲಾಪುರ ಬ್ಲಾಕ್ ಅಧ್ಯಕ್ಷ ವಿ.ಎಸ್. ಭಟ್, ಹುಬ್ಬಳ್ಳಿ ಧಾರವಾಡ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೌರಿ, ಅಲ್ಪಸಂಖ್ಯಾತ ಜಿಲ್ಲಾಧ್ಯಕ್ಷ ಮಜೀದ್, ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ರವಿಗೌಡ ಪಾಟೀಲ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎಂ. ನಾಯ್ಕ, ಜ್ಞಾನದೇವ ಗುಡಿಯಾಳ, ದೇವು ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಧರ್ಮರಾಜ ನಾಡಗೇರ ಸ್ವಾಗತಿಸಿದರು. ಸುಜಾತಾ ಹೆಗಡೆ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಹಲವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.