ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಸದ್ಬಳಕೆಯಾಗಲಿ: ಶಾಸಕ ಆರ‍್ವಿಎನ್

KannadaprabhaNewsNetwork | Published : Oct 31, 2024 12:57 AM

ಸಾರಾಂಶ

Grants should be put to good use for local organizations: MLA RVN

- ಸುರಪುರ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ

ಕನ್ನಡಪ್ರಭ ವಾರ್ತೆ ಸುರಪುರ

ಸ್ಥಳೀಯ ಸಂಸ್ಥೆಗಳಿಗೆ ನೀಡುವ ಅನುದಾನ ಸದ್ಬಳಕೆ ಮಾಡಿಕೊಂಡರೆ ಶಾಸಕರ ಅನುದಾನ ಅವಶ್ಯಕತೆಯಿರುವುದಿಲ್ಲ. ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಒತ್ತು ನೀಡಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.

ನಗರದ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸುರಪುರ-ಹುಣಸಗಿ ತಾಲೂಕು ಗ್ರಾಮೀಣ ಮತ್ತು ಪಂಚಾಯತ ರಾಜ್ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗಳ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಗ್ರಾ.ಪಂ.ನಲ್ಲಿ 15ನೇ ಹಣಕಾಸಿನಿಂದ ನಡೆಯುವ ಕಾಮಗಾರಿಗಳು ನಡೆಯಬೇಕು. ಬೋಗಸ್ ಆಗದಂತೆ ನೋಡಿಕೊಳ್ಳಬೇಕು. ದಿನದ 24ಗಂಟೆಯೂ ಮೊಬೈಲ್ ಆನ್‌ನಲ್ಲಿ ಇರಬೇಕು. ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಕ್ರಮ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಪಿಡಿಒ ಗಳಿಂದ ಕಾಮಗಾರಿಗಳ ಅಭಿವೃದ್ಧಿಯ ಮಾಹಿತಿ ಪಡೆದಿರುವೆ. ಇದನ್ನು ಪರಿಶೀಲಿಸಲು ಯಾವ ಸಮಯದಲ್ಲಾದರೂ ಭೇಟಿ ನೀಡಬಹುದು. ಆಗ ಅಸಲಿಯತ್ತು ತಿಳಿಯಲಿದೆ. ಕಾಮಗಾರಿ ಗುಣಮಟ್ಟ ಪರಿಶೀಲಿಸಿಯೇ ಬಿಲ್ ಮಾಡಿಸಬೇಕು. ಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣಿಸದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು. ಎಲ್ಲಿ ಹೊಸ್ ಬೋರ್ ಅವಶ್ಯಕತೆ ಇದೆಯೋ ಅಲ್ಲಿ ಕೊರೆಯಿಸಿ. ಇದಕ್ಕಾಗಿ ಕ್ರಿಯಾ ಯೋಜನೆ ತಯಾರಿಸಿ ವರದಿ ನೀಡಬೇಕು ಎಂದು ಸೂಚಿಸಿದರು.

ಶಾಲಾ ಮೈದಾನ, ಶಾಲಾ ಕಂಪೌಂಡ್ ಮತ್ತು ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಬೇಕು. ನರೇಗಾ ಕಾಮಗಾರಿ ಸರಿಯಾಗಿ ನಿರ್ವಹಿಸಬೇಕು. ಆಯಾ ಪಂಚಾಯತ್‌ಗಳಲ್ಲಿ ಅಭಿವೃದ್ಧಿ ಕಾರ್ಯಗಳ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ಏನೇ ಸಮಸ್ಯೆ ಇದ್ದರೆ ನನಗೆ ತಿಳಿಸಬೇಕು. ಒಟ್ಟಿನಲ್ಲಿ ಗ್ರಾಮ ಪಂಚಾಯತಿಗಳಲ್ಲಿ ಬರುವ ಅನುದಾನ ಸಮರ್ಪಕವಾಗಿ ಸದ್ಭಳಿಕೆಯಾಗಬೇಕು. ಆ ನಿಟ್ಟಿನಲ್ಲಿ ಪಿಡಿಒ ಮತ್ತು ಸಂಬಂಧಪಟ್ಟ ಇಲಾಖೆಯವರು ಸರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ತಾಲೂಕು ಪಂಚಾಯತ್‌ ಅಧಿಕಾರಿ ಬಸವರಾಜ್ ಸಜ್ಜನ್ ಮಾತನಾಡಿ, ಶಾಸಕರ ಸೂಚನೆಯಂತೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು. ಮೊಬೈಲ್ ಯಾವಾಗಲೂ ಆನ್ ಇರಬೇಕು, ಸ್ವಿಚ್ಚ್ ಆಫ್ ಮಾಡಕೂಡದು. ಶಾಸಕರು ನೀಡಿದ ಸೂಚನೆಗಳನ್ನು ಅನ್ವಯಿಸಿಕೊಂಡು ಕ್ರಿಯಾಯೋಜನೆ ಸಿದ್ಧಪಡಿಸಬೇಕು. ನರೇಗಾ ಯೋಜನೆಗೆ ಸಂಬಂಧಪಟ್ಟಂತೆ ಎಲ್ಲ ಎಂಜಿನೀಯರ್ಸ್‌ ಕ್ಷೇತ್ರಕ್ಕೆ ಭೇಟಿ ನೀಡಿ, ಕಾಮಗಾರಿ ಪರಿಶೀಲಿಸಿ ಅಳತೆ ತಗೊಂಡು ಎಂಬಿ ರಿಕಾರ್ಡ್ ಮಾಡಬೇಕು. ಕಾಮಗಾರಿ ಪೂರ್ಣಗೊಳ್ಳದೆ ಬಿಲ್ ಪಾವತಿಸಕೂಡದು. ನಿರ್ಲಕ್ಷ್ಯ ವಹಿಸಿದರೆ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದರು.

ಸುರಪುರ ಮತ್ತು ಹುಣಸಗಿ ತಾಲೂಕುಗಳ ಗ್ರಾಪಂ ಪಿಡಿಒಗಳು ಸಭೆಯಲ್ಲಿ ಹಾಜರಿದ್ದು, ತಮ್ಮ ಪಂಚಾಯತ್‌ಗಳ ಪ್ರಗತಿ ಮಂಡಿಸಿದರು. ಎಡಿ ಬಸಣ್ಣ ನಾಯಕ ಮತ್ತು ಆರ್‌ಡಿಪಿಐ ಎಇಇ ಹಣಮಂತ್ರಾಯ ಪಾಟೀಲ್ ಇದ್ದರು.

------

30ವೈಡಿಆರ್‌4 : ಸುರಪುರ ತಾಲೂಕು ಪಂಚಾಯತಿಯಲ್ಲಿ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ಮಾತನಾಡಿದರು. ತಾಲೂಕು ಪಂಚಾಯತ್‌ ಬಸವರಾಜ್ ಸಜ್ಜನ್ ಇದ್ದರು.

Share this article