ಸಾಂಸ್ಕೃತಿಕ ದಾಸ್ಯದಲ್ಲಿ ‘ತಳ’ ಸಮುದಾಯಗಳು: ಎಸ್‌.ಜಿ.ಸಿದ್ದರಾಮಯ್ಯ

KannadaprabhaNewsNetwork | Published : Dec 29, 2023 1:31 AM

ಸಾರಾಂಶ

ಸಾಂಸ್ಕೃತಿಕ ದಾಸ್ಯದಿಂದ ಮುಕ್ತವಾಗದಿದ್ದಲ್ಲಿ ತಳ ಸಮುದಾಯಗಳು ಅಭಿವೃದ್ಧಿ ಕಾಣಲು ಸಾಧ್ಯವೇ ಇಲ್ಲ. ಶೋಷಿತ ಸಮುದಾಯದ ಜನಪ್ರತಿನಿಧಿಗಳು ಮಾರಾಟವಾಗುತ್ತಿದ್ದಾರೆ, ನಮ್ಮ ಮೂಲ ಸಂಸ್ಕೃತಿಯನ್ನು ಮರೆತಿರುವುದರಿಂದ ನಮ್ಮ ಮಕ್ಕಳು ವಿದ್ಯೆಕಲಿತವರ ಕೈಗೊಂಬೆಯಾಗಿ, ಅವರ ಕಾಲಾಳುಗಳಾಗಿ ಬಳಕೆಯಾಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯನಾವಿಂದು ಸಾಂಸ್ಕೃತಿಕ ಗುಲಾಮಗಿರಿಗೆ ಸಿಲುಕಿದ್ದೇವೆ. ಸಾಂಸ್ಕೃತಿಕ ದಾಸ್ಯದಿಂದ ಮುಕ್ತವಾಗದಿದ್ದಲ್ಲಿ ತಳ ಸಮುದಾಯಗಳು ಅಭಿವೃದ್ಧಿ ಕಾಣಲು ಸಾಧ್ಯವೇ ಇಲ್ಲ ಎಂದು ಸಂಸ್ಕೃತಿ ಚಿಂತಕ ಎಸ್.ಜಿ.ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕುಳುವ ಸಮಾಜ, ಡ್ರೀಮ್ ಫೌಂಡೇಶನ್ ಟ್ರಸ್ಟ್ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ‘ಕೊರವಂಜಿ ಸಂಸ್ಕೃತಿ ಉತ್ಸವ’ ಕಾರ್ಯಕ್ರಮದಲ್ಲಿ ‘ನೆಲಮೂಲ ಸಂಸ್ಕೃತಿ’ ಕುರಿತು ಅವರು ಮಾತನಾಡಿದರು.

ಪ್ರಸ್ತುತ ರಾಜಕಾರಣದಲ್ಲಿ ಶೋಷಿತ ತಳ ಸಮುದಾಯಗಳ ಜನಪ್ರತಿನಿಧಿಗಳು ಮಾರಾಟವಾಗುತ್ತಿದ್ದಾರೆ, ಆ ಮೂಲಕ ತಮ್ಮ ಸಮುದಾಯವನ್ನು ವಂಚಿಸುತ್ತಾ ಕುಲಕಂಟಕರಾಗುತ್ತಿದ್ದಾರೆ. ನಾವಿಂದು ಸಾಂಸ್ಕೃತಿಕ ಗುಲಾಮಗಿರಿಗೆ ಸಿಲುಕಿದ್ದೇವೆ, 3,500 ವರ್ಷಗಳ ಹಿಂದೆ ಕಶ್ಯಪ ಮಹರ್ಷಿಗಳು ಸಪ್ತ ಮಾತೃಕೆಯರನ್ನು ಗುಲಾಮರಾಗಿಸಿಕೊಂಡಂತೆ ಇಂದು ಮೇಲ್ಜಾತಿಯವರು ಕೆಳಜಾತಿಯವರನ್ನು ಗುಲಾಮರಾಗಿಸಿಕೊಂಡು ಅವಕಾಶ ವಂಚಿತರನ್ನಾಗಿ ಮಾಡುತ್ತಿದ್ದಾರೆ. ಸಾಂಸ್ಕೃತಿಕ ದಾಸ್ಯದಿಂದ ಮುಕ್ತವಾಗದಿದ್ದಲ್ಲಿ ತಳ ಸಮುದಾಯಗಳು ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

ನಮ್ಮ ಮೂಲ ಸಂಸ್ಕೃತಿಯನ್ನು ಮರೆತಿರುವುದರಿಂದ ನಮ್ಮ ಮಕ್ಕಳು ವಿದ್ಯೆಕಲಿತವರ ಕೈಗೊಂಬೆಯಾಗಿ, ಅವರ ಕಾಲಾಳುಗಳಾಗಿ ಬಳಕೆಯಾಗುತ್ತಿದ್ದಾರೆ. ಇದಕ್ಕೆ ಕಾರಣವೆಂದರೆ, ನಾವು ನಮ್ಮ ಕೈಗೆ ಲೇಖನಿ ಕೊಡುವ ಬದಲು ಕತ್ತಿ ಗುರಾಣಿ ಕೊಟ್ಟು ನಮ್ಮನ್ನು ಕಿತ್ತಾಡುವಂತೆ ಮಾಡಿದ್ದಾರೆ. ಈ ದೇಶದ ಧರ್ಮ ರಾಜಕಾರಣಕ್ಕೆ ಸಿಲುಕಿದವರು ನಾವು. ವಾಸ್ತವದಲ್ಲಿ ಇಡೀ ದೇಶದ ಡಿಎನ್ಎ ತೆಗೆದರೆ ಎಲ್ಲರೂ ಒಂದೇ ಆಗಿದ್ದೇವೆ. ಆದರೆ, ದ್ವೇಷ ರಾಜಕಾರಣಕ್ಕೆ ಬಲಿಯಾಗಿ ನಮ್ಮ ನಮ್ಮಲ್ಲೇ ಬಡಿದಾಡಿಕೊಳ್ಳುವಂತಾಗಿದೆ ಎಂದು ವಿಷಾದಿಸಿದರು.

ಡ್ರೀಮ್ ಫೌಂಡೇಶನ್ ಟ್ರಸ್ಟ್‌ ಅಧ್ಯಕ್ಷ ಕಿರಣ್‌ ಕುಮಾರ್‌ ಕೊತ್ತಗೆರೆ ಮಾತನಾಡಿ, ಜನಮೂಲ ಸಂಸ್ಕೃತಿಯನ್ನು ಅನಾವರಣಗೊಳಿಸಲು ಕೊರವಂಜಿಯ ಅಧ್ಯಯನಪೀಠ ಸ್ಥಾಪನೆ ಆಗಬೇಕು. ಮಂಡ್ಯದಲ್ಲಿ ನುಲಿಯ ಚಂದಯ್ಯ ಕೊರವಂಜಿ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಬೇಕು. ಎಲ್ಲ ಕ್ಷೇತ್ರಗಳಲ್ಲೂ ನಮ್ಮ ಜನ ಅವಕಾಶ ವಂಚಿತರಾಗಿ ತಳಮಟ್ಟದಲ್ಲಿ ಶ್ರಮಿಸುತ್ತಾ ಬಂದಿದ್ದಾರೆ. ಈ ದೇಶದ ಮೂಲ ನಿವಾಸಿಗಳಾದ ಬುಡಕಟ್ಟು ಜನಾಂಗದ ನಾವು ಇಂದಿಗೂ ತುಂಡು ಭೂಮಿ ಇಲ್ಲದಂತೆ ಬದುಕುತ್ತಿದ್ದೇವೆ, ಸಾಮಾಜಿಕವಾಗಿ ಅವಕಾಶ ವಂಚಿತರಾಗಿದ್ದೇವೆ ಎಂದು ವಿಷಾದಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಲಕ್ಷ್ಮಿಪತಿ ಕೋಲಾರ, ಗಾರ ಶ್ರೀನಿವಾಸ್, ಸಿ.ಎನ್.ಮಂಜೇಶ್, ಸುನಿಲ್ ಮಾನ್ಪಡೆ, ಕುಡಿಯರ ಮುತ್ತಪ್ಪ, ಜುಲಿಯಾನ ಪೆದ್ರು ಫರ್ನಾಂಡಿಸ್‌ ಸಿದ್ದಿ ಅವರರಿಗೆ ರಾಜ್ಯಮಟ್ಟದ ಕೊರವಂಜಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಾಸಕ ಪಿ.ರವಿಕುಮಾರ್‌ಗೌಡ, ಕೆಪಿಸಿಸಿ ಕಾರ್ಯದರ್ಶಿ ಬಿ.ಶಿವಣ್ಣ, ತಹಸಿಲ್ದಾರ್ ಶಿವಕುಮಾರ್ ಬಿರಾದಾರ್, ಚಂದ್ರವನ ಆಶ್ರಮದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಕರ್ನಾಟಕ ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ, ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಕುಮಾರ್ ಗಣಂಗೂರು, ಶಿವಾನಂದ ಎಂ.ಭಜಂತ್ರಿ, ವೆಂಕಟೇಶ್, ಡಾ.ರವಿ ಮಾಕಳಿ, ಡಾ.ವಿ.ಭಾಗ್ಯಲಕ್ಷ್ಮಿ, ಭೀಮಪುತ್ರಿ ನಾಗಮ್ಮ, ವೆಂಕಟರಮಣಯ್ಯ, ಲೋಹಿತಾಶ್ವ, ಸುರೇಶ್‌ನಾಯ್ಡು ಭಾಗವಹಿಸಿದ್ದರು

ಇದಕ್ಕೂ ಮೊದಲು ಕೊರವಂಜಿ ಸಂಸ್ಕೃತಿ ಉತ್ಸವದಲ್ಲಿ ಲಕ್ಷ್ಮಿಪತಿ ಕೋಲಾರ ವಿರಚಿತ ‘ಮರೆತ ದಾರಿ’ ನಾಟಕದ ಕೊರವಿ ದೃಶ್ಯ ಪ್ರದರ್ಶನ ಜನಮನ ಸೆಳೆಯಿತು. ಬೆಂಗಳೂರಿನ ಅಜೀವಕ ತಂಡದ ಡಾ.ಉದಯ್ ಸೋಸಲೇ ನಿರ್ದೇಶನದಲ್ಲಿ ಕೊರವಿ ಮೂಲ ಸಂಸ್ಕೃತಿಯ ಅನಾವರಣಗೊಳಿಸಿದ್ದು ಪ್ರೇಕ್ಷಕರ ಮನ ಗೆದ್ದಿತು.

Share this article