ವಿಶ್ವಮಾನದ ದಿನಾಚರಣೆ ಕಾರ್ಯಕ್ರಮದಲ್ಲಿ ತಹಸೀಲ್ದಾರ
ರಾಷ್ಟ್ರಕವಿ ಕುವೆಂಪು ವಿಚಾರಧಾರೆಗಳು, ನೋಡುವ ದೃಷ್ಟಿಕೋನಗಳು ಅದ್ಭುತ ಹಾಗೂ ಭಿನ್ನವಾಗಿದ್ದವು ಎಂದು ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ ಹೇಳಿದರು.
ಸೋಮವಾರ ತಾಲೂಕಾಡಳಿತ ಸೌಧದಲ್ಲಿ ವಿಶ್ವಮಾನದ ದಿನಾಚರಣೆಯ ನಿಮಿತ್ತ ಆಯೋಜಿಸಿದ್ದ ಕುವೆಂಪು ಸಾಹಿತ್ಯ, ಗೀತೆಗಳ ಗಾಯನ, ಸಂದೇಶಗಳ ಮಹತ್ವದ ಕುರಿತು ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕುವೆಂಪು ಅವರ ಸಂದೇಶಗಳು ಮಾನವೀಯತೆಯ ಐಕ್ಯತೆ ಸಾರುತ್ತವೆ. ವಿಶ್ವಮಾನವ ಸಂದೇಶವು ಜಾತಿ, ಮತ, ಭಾಷೆ ಹಂತಗಳನ್ನು ಮೀರಿ ಒಗ್ಗೂಡಿಸುವುದನ್ನು ಒತ್ತೀ ಹೇಳುತ್ತದೆ. ಮೌಢ್ಯತೆ ಬಿತ್ತಬಾರದು, ಆದರೆ ಮೌಢ್ಯತೆ ತೊಲಗಿಸಬೇಕೆಂಬ ಅವರ ಕಾಳಜಿ ನಿಜಕ್ಕೂ ಅಭಿನಂದನಾರ್ಹ ಎಂದರು.
ಕುವೆಂಪು ಸಾಹಿತ್ಯ ಹಾಗೂ ವಿಶ್ವಮಾನವ ಕಲ್ಪನೆಯ ಸಂದೇಶಗಳ ಬಗ್ಗೆ ಶಿಕ್ಷಣ ತಜ್ಞ, ಚಿಂತಕ ವಿಠ್ಠಲ ಕೊರ್ವೆಕರ ಉಪನ್ಯಾಸ ನೀಡಿ, ಕುವೆಂಪು ಸಾರಿದ ಆದರ್ಶಗಳು, ಜಾತ್ಯತೀತ ಮನೋಭಾವಗಳು, ಪ್ರೀತಿ-ಸೌಮ್ಯಗಳು ಸರ್ವಕಾಲಿಕ ಮಾರ್ಗದರ್ಶನ ನೀಡುತ್ತವೆ ಎಂದರು.ಸಾಹಿತ್ಯದಲ್ಲಿ ಅವರಿಗೆ ಎಷ್ಟೊಂದು ಹಿಡಿತವಿತ್ತೆಂದರೆ ಅಂದಿನ ರಾಜಕೀಯ ವ್ಯವಸ್ಥೆಗೆ ಚುರುಕುಮುಟ್ಟಿಸುವ ಶಕ್ತಿ, ಸಾಮರ್ಥ್ಯವನ್ನ ಕುವೆಂಪು ಹೊಂದಿದ್ದರು. ಪಂಚಮಂತ್ರಗಳಾದ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿಯ ಮೂಲಕ ಐಕ್ಯ ಬೆಳೆಸಲು ಸಾಧ್ಯ ಎಂದರು.ವಿಚಾರಗೋಷ್ಠಿಯಲ್ಲಿ ಬೊಂಬೆಯಾಟ ತಜ್ಞ, ರಾಜ್ಯ ಬಯಲಾಟ ಅಕಾಡೆಮಿಯ ಸದಸ್ಯ ಸಿದ್ಧಪ್ಪ ಬಿರಾದಾರ ಬಹುವರ್ಷಗಳ ಹಿಂದೆ ಕುವೆಂಪು ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ನೀಡಿದ ಭಾಷಣದ ಅಂಶಗಳನ್ನು ಓದಿ ಹೇಳಿದರು. ಕಂದಾಯ ಇಲಾಖೆಯ ಆತ್ಮಾನಂದ ಕುವೆಂಪು ಬರೆದ ಗೀತೆಯ ಗಾಯನ ಮಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಅಧ್ಯಕ್ಷೆ ಸುಮಂಗಲಾ ಅಂಗಡಿ, ಗ್ರೇಡ್-2 ತಹಸೀಲ್ದಾರ ರವೀಂದ್ರ ನೇಸರಗಿ, ಕನ್ನಡ ಉಪನ್ಯಾಸಕ- ಚಿಂತಕ ಶಾಂತಾರಾಮ ಚಿಬುಲಕರ ದಂಪತಿ, ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಜಿ.ಡಿ. ಗಂಗಾಧರ, ಶಿಕ್ಷಣ ಇಲಾಖೆಯ ಮಠಪತಿ, ಪುರಸಭೆ ಮಾಜಿ ಅಧ್ಯಕ್ಷ ಉಮೇಶ ಬೊಳಶೆಟ್ಟಿ ಹಾಗೂ ಇತರರು ಇದ್ದರು. ಪರಶುರಾಮ ಶಿಂಧೆ ಹಾಗೂ ಆತ್ಮಾನಂದ ಕಾರ್ಯಕ್ರಮ ನಿರ್ವಹಿಸಿದರು.