ಕಡೂರು ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಒತ್ತು: ಭಂಡಾರಿ ಶ್ರೀನಿವಾಸ್

KannadaprabhaNewsNetwork |  
Published : Oct 29, 2025, 01:00 AM IST
ಕಡೂರು ಪಟ್ಟಣದ 2ನೇ ವಾರ್ಡ್ ನ  ಪುರಸಭೆ ಜಾಗ (ಮಕ್ಕಳ ಸ್ಮಶಾನ)ದಲ್ಲಿ ಮಂಗಳವಾರ ಬನ್ನಿ ಮಹಾಗಣಪತಿ ಸೇವಾ ಸಮಿತಿಯ ಯುವಕರೊಂದಿಗೆ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಸಸಿ ನೆಟ್ಟರು. | Kannada Prabha

ಸಾರಾಂಶ

ಪಟ್ಟಣದ ಹಿರಿಯರ, ಸಾರ್ವಜನಿಕರ ಮಾರ್ಗದರ್ಶನದಲ್ಲಿ ಸಾರ್ವಜನಿಕರ ಹಣದಲ್ಲಿ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ ಮಾಡಿದ್ದೇನೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕಡೂರು

ಪಟ್ಟಣದ ಹಿರಿಯರ, ಸಾರ್ವಜನಿಕರ ಮಾರ್ಗದರ್ಶನದಲ್ಲಿ ಸಾರ್ವಜನಿಕರ ಹಣದಲ್ಲಿ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ ಮಾಡಿದ್ದೇನೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.

ಪಟ್ಟಣದ 2ನೇ ವಾರ್ಡ್‌ನಲ್ಲಿರುವ (ಮಕ್ಕಳ ಸ್ಮಶಾನ) ಪುರಸಭೆ ಜಾಗದಲ್ಲಿ ಬನ್ನಿ ಮಹಾಗಣಪತಿ ಯುವಕ ಸಂಘದವರು ಹಾಗೂ ಪುರಸಭೆಯಿಂದ ಮಂಗಳವಾರ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆಗಳು ನಿರ್ಮಾಣಗೊಂಡಿದ್ದು, ಇದನ್ನು ಸಾರ್ವಜನಿಕರ ಸದುಪಯೋಗಕ್ಕೆ ಮೀಸಲಿಡಲು ನಮ್ಮ ಹಿರಿಯರಾದ ಹೂವಿನ ಗೋವಿಂದಪ್ಪ ಅವರ ಸೂಚನೆಯಂತೆ ತಾವು ಜಾಗವನ್ನು ಅಳತೆ ಮಾಡಿಸಿ ಪುರಸಭೆ ಭದ್ರ ಮಾಡಿಕೊಂಡು, ಇಲ್ಲಿ ಒಂದು ಉದ್ಯಾನವನ್ನು ಈ ಭಾಗದ ಸಾರ್ವಜನಿಕರಿಗೆ ಮೀಸಲಿಡಲು ಹಾಗೂ ಸ್ಥಳೀಯ ಹಿಂದುಳಿದ ಸಮುದಾಯಗಳು ಇಲ್ಲಿ ಶವ ಸಂಸ್ಕಾರದ ನಂತರ ನಡೆಯುವ ಕಾರ್ಯಗಳಿಗೆ ಬಳಸಿಕೊಳ್ಳಲು ಒಂದು ವ್ಯವಸ್ಥಿತ ಅಡಿಗೆ ಮನೆ ನಿರ್ಮಾಣ ಮಾಡಿದ್ದು, ಜೊತೆಗೆ ಸುತ್ತಲು ಕಾಂಪೌಂಡ್ ನಿರ್ಮಿಸಿದ್ದು, ಈ ಸ್ಥಳದಲ್ಲಿ ಬನ್ನಿ ಯುವಕ ಸಂಘದ ಸಹಕಾರದೊಂದಿಗೆ ಸಸಿ ನೆಡುವ ಕಾರ್ಯ ನಡೆಸಲಾಗುತ್ತಿದೆ ಎಂದರು.

ಮಾಜಿ ಶಾಸಕ ಬೆಳ್ಳಿ ಪ್ರಕಾಶ್ಅವರ ಅವಧಿಯಲ್ಲಿ ನಗರೋತ್ಥಾನ ಯೋಜನೆಯಿಂದ ಬಂದ ಹಣದಲ್ಲಿ, ಜಾಗದಲ್ಲಿ ಅಭಿವೃದ್ಧಿ ಮಾಡಲಾಗಿದ್ದು ಶಾಸಕ ಕೆ.ಎಸ್. ಆನಂದ್‌ ಅವರಲ್ಲಿ ಪುರಸಭೆ ಮನವಿ ಮಾಡಿಕೊಂಡಿದ್ದು ಇಲ್ಲಿಗೆ ಚರಂಡಿ ಮತ್ತು ಇತರ ಕಾಮಗಾರಿಗೆ ಅನುದಾನ ನೀಡಲು ಪಟ್ಟಿ ನೀಡಿದ್ದೇವೆ. ಶಾಸಕರು ಅನುದಾನ ನೀಡುವುದಾಗಿ ಭರವಸೆ ನೀಡಿರುತ್ತಾರೆ, ವಿಶೇಷ ಅನುದಾನ ಬಂದರೆ ಇಲ್ಲಿನ ಉದ್ಯಾನಕ್ಕೆ ಹೆಚ್ಚಿನ ಒತ್ತು ನೀಡುತ್ತೇನೆ ಎಂಬ ಭರವಸೆ ನೀಡಿದರು.

ಈ ಉದ್ಯಾನಕ್ಕೆ ಹೈಮಾಸ್ಕ್ ದೀಪ, ಸುತ್ತಲು ಬೆಳಕಿನ ವ್ಯವಸ್ಥೆ ಕಲ್ಪಿಸಲಾಗುವುದು. ಮುಂದಿನ ದಿನಗಳಲ್ಲಿ ವೇದಾ ಉದ್ಯಾನದಂತೆ ಇದನ್ನು ಮಾರ್ಪಡಿಸುವ ಯೋಜನೆ ಇದೆ ಎಂದರು.

ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಈ ಜಾಗವನ್ನು ಅಭಿವೃದ್ಧಿ ಪಡಿಸಲು ಹೆಜ್ಜೆ ಇಟ್ಟಿರುವುದಕ್ಕೆ ಪುರಸಭೆ ಆಡಳಿತಕ್ಕೆ ಧನ್ಯವಾದಗಳು. ಬನ್ನಿ ಯುವಕ ಸಂಘವು ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಿದ್ದು ಪುರಸಭೆಯೊಂದಿಗೆ ಇಲ್ಲಿ ಸಸಿ ನೆಡುವ ಕಾರ್ಯವನ್ನು ಶ್ಲಾಘಿಸುತ್ತೇನೆ, ಈ ಭಾಗಕ್ಕೆ ಮೂಲಭೂತ ಸೌಲಭ್ಯಗಳನ್ನು ನೀಡಲು ಮುಂದಾಗಲಿ ಎಂದರು.

ಪುರಸಭೆ ಸದಸ್ಯರಾದ ಮರುಗುದ್ದಿ ಮನು, ಯಾಸಿನ್, ತೋಟದ ಮನೆ ಮೋಹನ್, ಭರತ್ ಕೆಂಪರಾಜ್, ಚೇತನ್, ಕೆಂಪರಾಜ್, ನಿವೃತ್ತ ಶಿಕ್ಷಕ ಸಿದ್ದರಾಮಪ್ಪ, ಎಚ್.ಉಮೇಶ್, ತಿಪ್ಪೇಶ್, ಕದಂಬ ವೆಂಕಟೇಶ್ ಮತ್ತಿತರರು ಮಾತನಾಡಿದರು.

ಬನ್ನಿ ಮಹಾಗಣಪತಿ ಸೇವಾ ಸಮಿತಿಯ ಹರ್ಷಿತ್, ಚೇತನ್ ಕಾಡಪ್ಪ, ಪ್ರವೀಣ್, ಹರೀಶ್, ಜಿಮ್ ರಾಜ್, ಕರಿಬಡ್ಡೆ ರಾಜ್, ರೇವಣ್ಣ, ಯುವಕರು ಇದ್ದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು