ಕೃಷಿ ಮತ್ತು ತೋಟಗಾರಿಕಾ ಮೇಳ ಉದ್ಘಾಟನೆ
ಹೆಚ್ಚಿನ ಉತ್ಪಾದನೆ ಹಾಗೂ ರೈತರಿಗೆ ಹೆಚ್ಚು ಆದಾಯ ತರುವ ಸಂಶೋಧನೆಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಕೆವಿಕೆ ಆವರಣದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಸೊಧನಾ ಕೇಂದ್ರ, ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಂಯಕ್ತಾಶ್ರಯದಲ್ಲಿ 2 ದಿನಗಳ ಕಾಲ ಏರ್ಪಡಿಸಲಾಗಿರುವ ಕೃಷಿ ಮತ್ತು ತೋಟಗಾರಿಕಾ ಮೇಳವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.ರೈತರಿಗೆ ಅಧಿಕವಾಗಿ ಬೆಳೆ ಉತ್ಪನ್ನಮಾಡುವುದು ಹಾಗೂ ಆದಾಯ ತರುವ ಬಗ್ಗೆ ಕೃಷಿಗೆ ಸಂಬಂಧಪಟ್ಟ ಎಲ್ಲಾ ವಿಶ್ವ ವಿದ್ಯಾಲಯಗಳು, ಇಲಾಖೆ ಅಧಿಕಾರಿಗಳು ಗಮನಹರಿಸಿದರೆ ಕೃಷಿಯಿಂದ ಯಾರೂ ಹಿಂದೆ ಸರಿಯಲು ಸಾಧ್ಯವಿಲ್ಲ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಆದಾಯ ಕಡಿಮೆಯಾದಾಗ ಸಾಮಾನ್ಯವಾಗಿ ರೈತರು ಕೃಷಿಯಿಂದ ಹೊರ ಹೋಗುತ್ತಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಅಪಾಯ ತಪ್ಪಿದ್ದಲ್ಲ. ಹಾಗಾಗಿ ಆಯಾ ಪ್ರದೇಶದಲ್ಲಿ ಬೆಳೆಯುವ ಎಲ್ಲಾ ಬೆಳೆಗಳ ಉತ್ಪತ್ತಿಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.ರೈತರು ಒಂದೇ ಬೆಳೆ ಬೆಳೆಯುವತ್ತ ಗಮನ ಹರಿಸಬಾರದು. ಆಂತರಿಕ ಉಪ ಬೆಳೆಗೂ ಒತ್ತು ನೀಡಬೇಕು. ಇದರಿಂದಾಗಿ ಆರ್ಥಿಕವಾಗಿ ಸುಧಾರಿಸಿಕೊಳ್ಳಬಹುದು. ಭವಿಷ್ಯದಲ್ಲಿ ಒಳ್ಳೆಯದಾಗುತ್ತದೆ. ಕೃಷಿ ಮತ್ತು ತೋಟಗಾರಿಕೆ ಮೇಳಗಳಿಂದ ಸ್ಥಳೀಯ ರೈತರಿಗೆ ಹೆಚ್ಚಿನ ಅನುಕೂಲವಾಗಬೇಕು ಎಂದರು.
ನಮ್ಮಲ್ಲಿ ನೂರಾರು ವರ್ಷಗಳಿಂದ ಬೆಳೆಯುವ ಕಾಫಿಗೆ ಬ್ರಾಂಡ್ ವ್ಯವಸ್ಥೆ ಇಲ್ಲ. ವಿದೇಶಗಳಲ್ಲಿ ಇಂಡಿಯನ್ ಕಾಫಿ ಎಂದು ಹೇಳಿಕೊಳ್ಳಲು ಆಗುತ್ತಿಲ್ಲ. ಅಮೇರಿಕಾ, ಇಟಲಿ ಕಾಫಿಗೆ ವಿದೇಶಗಳಲ್ಲಿ ಬ್ರಾಂಡ್ ವ್ಯವಸ್ಥೆ ಇದೆ ಎಂದ ಅವರು, ಕೃಷಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯಬೇಕು ಎಂದು ಹೇಳಿದರು.ತೋಟ ಕಾರ್ಮಿಕರ ಆದಾಯ ಹೆಚ್ಚಳ ಹಾಗೂ ಅವರ ಆರೋಗ್ಯ ಮತ್ತು ವಿಮೆಗಳ ಸವಲತ್ತುಗಳನ್ನು ಮಾಲೀಕರು ಮತ್ತು ಅಧಿಕಾರಿಗಳು ಒದಗಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೃಷಿ ಉದ್ಯಮಿ ಡಾ.ಬಿ.ಕೆ. ಕುಮಾರಸ್ವಾಮಿ ಮಾತನಾಡಿ, ದೇಶದಲ್ಲಿ ಶೇ. 35 ರಿಂದ 37 ಸಂಖ್ಯೆಯಲ್ಲಿ ಯುವಕರು ಇದ್ದಾರೆ. ಕೃಷಿ ಲಾಭದಾಯಕ ಅಲ್ಲ ಎಂಬುದು ತಿಳಿದರೆ ಅವರು ನಗರ ಪ್ರದೇಶಕ್ಕೆ ವಲಸೆ ಹೋಗುತ್ತಾರೆ. ಸಂಶೋಧಕರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಯುವಕರು ಕೃಷಿಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಕೃಷಿದಿಂದ ಹೆಚ್ಚು ಆದಾಯ ಬರುತ್ತದೆ ಎಂಬ ನಿಟ್ಟಿನಲ್ಲಿ ಸಂಶೋಧನೆಗಳು ನಡೆಸಬೇಕು ಎಂದು ಹೇಳಿದರು.ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಕೃಷಿ ಮೇಳ ಎಂಬುವುದು ರೈತರ ಹಬ್ಬ. ಮೇಳದಲ್ಲಿ ಕೃಷಿ ಬಗ್ಗೆ ಹೊಸ ಸಂಶೊಧನೆ, ಆವಿಷ್ಕಾರ ಬಗ್ಗೆ ರೈತರು ತಿಳಿದುಕೊಳ್ಳಲು ಇದೊಂದು ಸುವರ್ಣಾವಕಾಶ. ಅಲ್ಲದೇ ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಂದ ರೈತರು ಮಾಹಿತಿ ಪಡೆಯುವ ಅವಕಾಶ ಸಿಗುತ್ತದೆ. ವಿಜ್ಞಾನಿಗಳು ರೈತರಿಗೆ ಅನುಕೂಲವಾಗುವ ಸಂಶೊಧನೆ ನಡೆಸಿ ಯಶಸ್ಸು ಕಾಣುವ ಮೂಲಕ ರೈತರಿಗೆ ವರದಾನವಾಗಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಳದಿ ಶಿವಪ್ಪನಾಯಕ ಕೃಷಿ ತೋಟಗಾರಿಕೆ ವಿವಿ ಕುಲಪತಿ ಡಾ. ಆರ್.ಸಿ. ಜಗದೀಶ್ ಮಾತನಾಡಿ ರೈತರು ಪ್ರತಿ ವರ್ಷ ಮಣ್ಣು ಮತ್ತು ನೀರಿನ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಸಾಲೆ ಉತ್ಪನ್ನಕ್ಕೆ ತುಂಬಾ ಬೇಡಿಕೆಯಿದೆ. ಜತೆಗೆ ಬೇಡಿಕೆಯಿರುವ ಬೆಳೆಗಳನ್ನು ಬ್ರಾಂಡ್ ಮಾಡಿ ಮಾರಾಟ ಮಾಡಲು ಮುಂದಾಗಬೇಕು. ಜಾಗತಿಕ ಮಟ್ಟದಲ್ಲಿ ಕಾಫಿ ಬೆಳೆ ಇದೀಗ 3.5 ಲಕ್ಷ ಟನ್ ಉತ್ಪಾದನೆಯಾಗುತ್ತಿದೆ. 2067 ರಲ್ಲಿ 7 ಲಕ್ಷ ಟನ್‌ಗೆ ಸಾಗುವ ನಿರೀಕ್ಷೆ ಇದೆ. ಹೊಸ ಹೊಸ ಉತ್ಪನ್ನ ತಯಾರಿಸಲು ಉತ್ತಮ ಅವಕಾಶವಿದ್ದು, ಯುವ ಜನತೆಯನ್ನು ಕೃಷಿಯತ್ತ ಕರೆತರುವ ಪ್ರಯತ್ನ ನಡೆಯಬೇಕಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಹ್ಯಾದ್ರಿ ಜಲಮುಕ್ತಿ ಎಂಬ ಹೊಸ ಭತ್ತದ ತಳಿ ಯನ್ನು ಲೋಕಾರ್ಪಣೆ ಮಾಡಲಾಯಿತು. ಕಿರು ಆಹಾರ ಸಂಸ್ಕರಣೆ ಘಟಕ ಸ್ಥಾಪನೆ ಬಗ್ಗೆ, ಕಾಳು ಮೆಣಸು, ಏಲಕಿ ಉತ್ಪಾದನೆ ಮತ್ತು ಸಸ್ಯ ಸಂರಕ್ಷಣೆ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು.ಕೆಳದಿ ಶಿವಪ್ಪನಾಯಕ ಕೃಷಿ ತೋಟಗಾರಿಕೆ ವಿವಿ ಶೈಕ್ಷಣಿಕ ನಿರ್ದೇಶಕ ಡಾ. ಹೇಮ್ಲಾ ನಾಯ್ಕ, ಕೆಜಿಎಫ್ ಅಧ್ಯಕ್ಷ ಹಳಸೆ ಶಿವಣ್ಣ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಡಿ.ಎಲ್.ಅಶೋಕ್‌ಕುಮಾರ್, ಬೆಳೆಗಾರ ಸಂಘದ ಅಧ್ಯಕ್ಷ ಬಾಲಕೃಷ್ಣ, ಎಫ್‌ಯು ಅಧ್ಯಕ್ಷ ಎಚ್.ಕೆ.ಪೂರ್ಣೇಶ್, ಟಿಎಪಿಸಿಎಂಸ್ ಅಧ್ಯಕ್ಷ ಕಲ್ಲೇಶ್, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಸಾದ್, ತೋಟಗಾರಿಕೆ ಮಹಾವಿದ್ಯಾಲಯ ಡೀನ್ ಶ್ರೀನಿವಾಸ್, ಕೆವಿಕೆ ಮುಖ್ಯಸ್ಥ ಡಾ. ಎ.ಟಿ.ಕೃಷ್ಣಮೂರ್ತಿ, ಆಡಳಿತ ಮಂಡಳಿ ಸದಸ್ಯರಾದ ಎಚ್.ಡಿ. ದೇವಿಕುಮಾರ್, ಕಾವೇರಿಯಪ್ಪ, ಶಶಾಂಕ್, ಶಿಕ್ಷಣ ನಿರ್ದೇಶಕ ಎಂ.ಡಿ.ಶಿವಪ್ರಕಾಶ್, ದುಶ್ಯಂತ್, ಗಿರಿರಾಜ್, ಡಾ.ಎಸ್.ಮಾವರ್ಕರ್, ಡಾ.ಸುಚಿತ್ರ, ಮಂಗಳ, ಸದಾನಂದ ಬಂಗೇರ ಉಪಸ್ಥಿತರಿದ್ದರು.19 ಕೆಸಿಕೆಎಂ 1ಮೂಡಿಗೆರೆಯ ಕೆವಿಕೆ ಆವರಣದಲ್ಲಿ ಶುಕ್ರವಾರ ನಡೆದ ಕೃಷಿ ಮತ್ತು ತೋಟಗಾರಿಕಾ ಮೇಳವನ್ನು ಶಾಸಕಿ ನಯನಾ ಮೋಟಮ್ಮ ಉದ್ಘಾಟಿಸಿದರು. ಕುಲಪತಿ ಡಾ. ಆರ್.ಸಿ. ಜಗದೀಶ್, ಡಾ. ಹೇಮ್ಲಾ ನಾಯ್ಕ, ದೇವಿಕುಮಾರ್, ಸಿ.ಎನ್. ಶಿವಪ್ರಸಾದ್, ಬಿ.ಬಿ. ನಿಂಗಯ್ಯ ಇದ್ದರು.