- ವರದಿಗಾರರ ಕೂಟ ವೆಬ್‌ಸೈಟ್ ಅನಾವರಣ, ಹಿರಿಯರಿಗೆ ಗೌರವಾರ್ಪಣೆ, ಮಾಧ್ಯಮ ಪ್ರಶಸ್ತಿ ಪ್ರದಾನ
ಕನ್ನಡಿಯು ಬಾಹ್ಯ ಸೌಂದರ್ಯವನ್ನಷ್ಟೇ ತೋರಿಸುತ್ತದೆ. ಆದರೆ, ಸುದ್ದಿ ಮಾಧ್ಯಮವು ಸಮಾಜದ ಕನ್ನಡಿಯಾಗಿದ್ದು, ಸಮಾಜದ ಒಳಗು, ಹೊರಗನ್ನು ತೋರಿಸುವ ಸಾಮರ್ಥ್ಯ ಇದಕ್ಕಿದೆ ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ, ಮಾಧ್ಯಮ ದಿನಾಚರಣೆ-2024, ಮಾಧ್ಯಮ ಪ್ರಶಸ್ತಿ ಪ್ರದಾನ, ಹಿರಿಯ ಪತ್ರಕರ್ತರಿಗೆ ಗೌರವ ಸಮರ್ಪಣೆ ಹಾಗೂ ಕೂಟದ ವೆಬ್‌ಸೈಟ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಮಾಜದ ಕನ್ನಡಿಯಾದ ಸುದ್ದಿ ಮಾಧ್ಯಮದ ಮೇಲೆ ಸಾಕಷ್ಟು ಜವಾಬ್ದಾರಿ, ಹೊಣೆಗಾರಿಕೆ ಇದೆ ಎಂದರು.ಸಮಾಜವನ್ನು ಕಟ್ಟುವ ಜವಾಬ್ದಾರಿ ಮಾಧ್ಯಮಗಳು, ಪತ್ರಕರ್ತರ ಮೇಲಿದೆ. ಬ್ರೇಕಿಂಗ್ ನ್ಯೂಸ್, ಫೇಕ್ ನ್ಯೂಸ್ ವಿರುದ್ಧ ಹೋರಾಟ ಮಾಡಬೇಕಾಗಿದೆ. ದೃಶ್ಯ ಮಾಧ್ಯಮಗಳು ಸುದ್ದಿಗಳನ್ನು ಬಿತ್ತರ ಮಾಡಬೇಕೆ ಹೊರತು, ನ್ಯಾಯಾಲಯದಂತೆ ತೀರ್ಪು ನೀಡುವಂತಹ ಹಂತಕ್ಕೆ ಹೋಗಬಾರದು. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮ ರಂಗ ಎಂಬ ಅರಿವು ಇರಲಿ ಎಂದು ಡಾ.ಪ್ರಭಾ ಹೇಳಿದರು.
ಚಿಕ್ಕವಳಿದ್ದಾಗ ಸಾಮಾಜಿಕ ಜಾಲತಾಣಗಳು ಇರಲಿಲ್ಲ. ಆಗೆಲ್ಲಾ ಮುದ್ರಣ ಮಾಧ್ಯಮಗಳಿಂದಲೇ ಜಗತ್ತಿನ ಆಗುಹೋಗುಗಳನ್ನು ಅರಿಯಬೇಕಾಗಿತ್ತು. ದಿನಪತ್ರಿಕೆಗಳು, ಪತ್ರಿಕೆಯ ಸಂಪಾದಕೀಯ, ವಾರ ಪತ್ರಿಕೆಗಳನ್ನು ಓದಿ, ಬೆಳೆದಿದ್ದೇನೆ. ಶಿಕ್ಷಣ, ಅಧ್ಯಾತ್ಮ, ಆರೋಗ್ಯ, ಜ್ಞಾನ, ವಿಜ್ಞಾನದ ಮಾಹಿತಿಗಳು ಪತ್ರಿಕೆ, ವಾರಪತ್ರಿಕೆಗಳಲ್ಲಿ ಇರುತ್ತಿತ್ತು. ಇಂದಿಗೂ ಪತ್ರಿಕೆಗಳ ಜೊತೆಗೆ ಸಂಪಾದಕೀಯ ಪುಟವನ್ನು ತಪ್ಪದೇ ಓದುತ್ತೇನೆ ಎಂದು ತಮ್ಮ ಓದುವ ಹವ್ಯಾಸದ ಬಗ್ಗೆ ಸಂಸದರು ವಿವರಿಸಿದರು.
ಪತ್ರಕರ್ತರಿಗೆ ನಿವೇಶನ, ವರದಿಗಾರರ ಕೂಟಕ್ಕೆ ಸ್ವಂತ ಜಾಗ, ಕಟ್ಟಡ, ಪತ್ರಕರ್ತರ ಮಕ್ಕಳ ಓದಿಗೆ ತಮ್ಮ ಸಂಸ್ಥೆಯಲ್ಲಿ ಶೈಕ್ಷಣಿಕ ನೆರವು, ಆಸ್ಪತ್ರೆ ವೆಚ್ಚದಲ್ಲಿ ರಿಯಾಯಿತಿ ಹೀಗೆ ಸಾಕಷ್ಟು ವಿಚಾರ ನಮ್ಮ ಗಮನದಲ್ಲೂ ಇದೆ. 17 ವರ್ಷದಿಂದ ಕೂಟ ನಡೆದು ಬಂದ ಹಾದಿ ಮೇಲೆ ಬೆಳಕು ಚೆಲ್ಲುವ ಪ್ರಯತ್ನವಾಗಿ ದಾವಣಗೆರೆ ಡಿಸ್ಟ್ರಿಕ್ ರಿಪೋರ್ಟರ್ಸ್ ಗಿಲ್ಡ್ (ದಾವಣಗೆರೆ ಜಿಲ್ಲಾ ವರದಿಗಾರರ ಕೂಟ)ನ ವೆಬ್ ಸೈಟ್ ಅಂದಿನಿಂದ ಈವರೆಗೆ ಕೂಟ ನಡೆದು ಬಂದ ಹಾದಿ ಕಟ್ಟಿಕೊಡುವ ಕೆಲಸ ಹೊಸ ಪದಾಧಿಕಾರಿಗಳು ಮಾಡಿದ್ದು ಶ್ಲಾಘನೀಯವಾಗಿದೆ ಎಂದು ಡಾ.ಪ್ರಭಾ ಮಲ್ಲಿಕಾರ್ಜುನ ಕೊಂಡಾಡಿದರು.
ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಿದ ಹರಿಹರ ಶಾಸಕ ಬಿ.ಪಿ.ಹರೀಶ ಮಾತನಾಡಿ, ವರದಿಗಾರರ ಕೂಟವು ಪತ್ರಕರ್ತರ ಸಂಘಟಿದ ಪ್ರಯತ್ನದ ಫಲವಾಗಿ ಸ್ಥಾಪನೆಯಾದ ಸಂಸ್ಥೆಯಾಗಿದೆ. 17 ವರ್ಷಗಳಲ್ಲಿ ಕೂಟದ ಆಗುಹೋಗುಗಳನ್ನು ಹತ್ತಿರದಿಂದ ಬಲ್ಲೆ. ಪತ್ರಕರ್ತರ ನಿವೇಶನದ ಬೇಡಿಕೆ ಬಗ್ಗೆ ನಮ್ಮ ಗಮನದಲ್ಲೂ ಇದೆ. ಸದಾ ನಾವು ನಿಮ್ಮೊಂದಿಗೆ ಇರುತ್ತೇವೆ. ವರದಿಗಾರರ ಕೂಟವು ಹಿರಿಯ ಪತ್ರಕರ್ತರು, ನಿವೃತ್ತ ಪತ್ರಕರ್ತರು, ಅನಾರೋಗ್ಯ ಪೀಡಿತರಿಗೆ ಗೌರವಿಸುವ ಮೂಲಕ ಮಾದರಿ ಕೆಲಸ ಮಾಡಿದೆ. ಪತ್ರಕರ್ತರಿಗೆ ಭಾಷೆ ಮುಖ್ಯ. ಕನ್ನಡದಲ್ಲಿ ಪರಿಣತಿ ಪಡೆದು ಪ್ರಾಮಾಣಿಕವಾಗಿ ಕೆಲಸ ಮಾಡುವ ಪತ್ರಕರ್ತರಿಗೆ ದೂಡಾ ವ್ಯಾಪ್ತಿಯಲ್ಲಿ ಸೂರು ಕಲ್ಪಿಸಲು ನಾನು ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.
ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಬಿ.ಎಚ್. ವಿನಾಯಕ ಪೈಲ್ವಾನ್, ಕೂಟದ ಗೌರವಾಧ್ಯಕ್ಷ ಬಿ.ಎನ್. ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಎಂ.ವೈ.ಸತೀಶ, ಖಜಾಂಚಿ ಪವನ್ ಐರಣಿ, ಪಿಆರ್‌ಒ ಪಿ.ಎಸ್. ಲೋಕೇಶ, ಉಪಾಧ್ಯಕ್ಷರಾದ ಕೆ.ಚಂದ್ರಣ್ಣ, ಮಂಜುನಾಥ ಗೌರಕ್ಕಳವರ, ಎಂ.ಬಿ.ನವೀನ, ಸದಾನಂದ ಹೆಗ್ಡೆ, ರಾಮಪ್ರಸಾದ, ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಕಬ್ಬೂರು, ಕಾರ್ಯದರ್ಶಿಗಳಾದ ತೇಜಸ್ವಿನಿ ಪ್ರಕಾಶ, ಬಿ.ಸಿಕಂದರ್, ಕೆ.ಎಸ್.ಚನ್ನಬಸಪ್ಪ ಶಂಭು, ಉಮೇಶ ಕಾಡಪ್ಪ, ಮಹೇಶ ಕಾಶೀಪುರ, ಎಚ್.ಟಿ.ರಮೇಶ, ಸುರೇಶ ಕಕ್ಕರಗೊಳ್ಳ, ಶಿವರಾಜ ಬೀದಿಮನಿ, ಡಾ. ಕೆ.ಜೈಮುನಿ, ಬಿ.ಕೆ.ಕಾವ್ಯ, ಎಚ್.ಅನಿತಾ, ರವಿ ಭುವನೇಶ್ವರಿ, ಓ.ಎನ್.ಸಿದ್ದಯ್ಯ ಒಡೆಯರ್, ಸುರೇಶ ಕುಣಿಬೆಳಕೆರೆ, ವಿಜಯಕುಮಾರ ಜೈನ್, ಎನ್.ನಿಂಗರಾಜ, ಕರಿಬಸವರಾಜ ಇತರರು ಇದ್ದರು.
- - -
- - - ಕೋಟ್ ವರದಿಗಾರರ ಕೂಟಕ್ಕೆ ಜಾಗ, ಸ್ವಂತ ಕಟ್ಟಡ ಕಲ್ಪಿಸಲು ಹಾಗೂ ಪತ್ರಕರ್ತರಿಗೆ ದೂಡಾ, ಸರ್ಕಾರದಿಂದ ನಿವೇಶನ ಒದಗಿಸುವ ಬಗ್ಗೆ ಮಾವನವರಾದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನರ ಬಳಿ ನಿಮ್ಮ ಪರವಾಗಿ ಮಾತನಾಡಿ, ಆದಷ್ಟು ಬೇಗನೆ ಇವುಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡುತ್ತೇನೆ
- ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ- - - (ಫೋಟೋ ಇದೆ)