ಹುಕ್ಕೇರಿ, ರಾಯಬಾಗ ರಿಂಗ್ ರಸ್ತೆಗಳಿಗೆ ಗ್ರೀನ್ ಸಿಗ್ನಲ್

KannadaprabhaNewsNetwork |  
Published : Aug 25, 2024, 01:49 AM IST
ಪ್ರಿಯಾಂಕಾ ಜಾರಕಿಹೊಳಿ | Kannada Prabha

ಸಾರಾಂಶ

ಬಹುನಿರೀಕ್ಷಿತ ಹುಕ್ಕೇರಿ ಮತ್ತು ರಾಯಬಾಗ ಪಟ್ಟಣದಲ್ಲಿ ನಿಯೋಜಿತ ವರ್ತುಲ (ರಿಂಗ್) ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ವಿಸ್ಕೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಕಾರ್ಯಾದೇಶ ನೀಡಿದೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಬಹುನಿರೀಕ್ಷಿತ ಹುಕ್ಕೇರಿ ಮತ್ತು ರಾಯಬಾಗ ಪಟ್ಟಣದಲ್ಲಿ ನಿಯೋಜಿತ ವರ್ತುಲ (ರಿಂಗ್) ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ವಿಸ್ಕೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಕಾರ್ಯಾದೇಶ ನೀಡಿದೆ. ಇದರಿಂದ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಚಟುವಟಿಕೆಗಳು ಗರಿಗೆದರುವ ನಿರೀಕ್ಷೆ ಹೆಚ್ಚಿಸಿದೆ. ಜೊತೆಗೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಸಂಪರ್ಕ ಕೊಂಡಿಗಳು ಮತ್ತಷ್ಟು ಬಲಗೊಳ್ಳುವ ಆಶಾಭಾವ ಮೂಡಿಸಿದೆ.

ತಾಲೂಕು ಕೇಂದ್ರವಾಗಿರುವ ಹುಕ್ಕೇರಿ ಮತ್ತು ರಾಯಬಾಗ ಪಟ್ಟಣಗಳು ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿವೆ. ಹೀಗಾಗಿ ಈ ಪಟ್ಟಣಗಳ ಜನತೆಯ ಬಹುದಿನಗಳ ಬೇಡಿಕೆಯಾಗಿರುವ ಬೈಪಾಸ್ ರಿಂಗ್ ರಸ್ತೆಗಳ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಒಪ್ಪಿಗೆ ಸೂಚಿಸಿದೆ. ಈ ಎರಡು ಪಟ್ಟಣಗಳಲ್ಲಿ ರಿಂಗ್ ರಸ್ತೆ ಮಾಡಬೇಕೆನ್ನುವುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಡಿಪಿಆರ್‌ಗೆ ಸಮ್ಮತಿ ದೊರೆತಿದ್ದರಿಂದ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಮಹತ್ವಾಕಾಂಕ್ಷಿ ಈ ಎರಡು ಬೈಪಾಸ್ ರಸ್ತೆ ಯೋಜನೆಗಳನ್ನು ಅನುಷ್ಠಾನಗೊಳಿಸಿ ಕರ್ನಾಟಕ-ಮಹಾರಾಷ್ಟ್ರದ ನಡುವಿನ ವಾಣಿಜ್ಯ, ವ್ಯವಹಾರ ಮತ್ತು ಕೃಷಿ ಉತ್ಪನ್ನಗಳ ಮಾರಾಟಕ್ಕೆ ನೆರವಾಗಲು ಲೋಕೋಪಯೋಗಿ ಇಲಾಖೆ ಮಹತ್ವದ ಹೆಜ್ಜೆ ಇರಿಸಿದೆ. ಇದರೊಂದಿಗೆ ರಸ್ತೆ ವಿಭಜಕ, ಒಳಚರಂಡಿ, ಪಾದಚಾರಿ ರಸ್ತೆ, ರಸ್ತೆಯ ಬದಿಯಲ್ಲಿ ಹೈಮಾಸ್ಕ್ ಬೀದಿ ದೀಪಗಳ ಅಳವಡಿಕೆಯಾಗಿ ಸದ್ಯದಲ್ಲೇ ನಗರ ಪ್ರದೇಶದಂತೆ ಹುಕ್ಕೇರಿ ಮತ್ತು ರಾಯಬಾಗ ಕಾಣಲಿವೆ.

2024-25ನೇ ಸಾಲಿನ ಆಯವ್ಯಯದಲ್ಲಿ ರಾಜ್ಯ ಹೆದ್ದಾರಿಗಳ ನಿರ್ವಹಣೆ-ನಿರ್ವಹಣಾ ವೆಚ್ಚ-3054ರಡಿ ಈ ಎರಡು ಯೋಜನೆಗಳಿಗೆ ಡಿಪಿಆರ್ ತಯಾರಿಸಲು ತಲಾ ₹ 25 ಲಕ್ಷಗಳಂತೆ ಒಟ್ಟು ₹ 50 ಲಕ್ಷ ಬಿಡುಗಡೆ ಮಾಡಿದೆ. ಅದರನ್ವಯ ಧಾರವಾಡ ಸಂಪರ್ಕ ಮತ್ತು ಕಟ್ಟಡ ಉತ್ತರ ಮುಖ್ಯ ಇಂಜನೀಯರ್‌ಗೆ ಅನುದಾನ ಹಂಚಿಕೆ ಮಾಡಿ ಲೋಕೋಪಯೋಗಿ ಇಲಾಖೆ ಆಂತರಿಕ ಆರ್ಥಿಕ ಸಲಹೆಗಾರ ಡಾ.ಸೋಮನಾಥ ಆದೇಶ ಹೊರಡಿಸಿದ್ದಾರೆ.

ಹುಕ್ಕೇರಿ ಪಟ್ಟಣಕ್ಕೆ ಸಂಕೇಶ್ವರ ಸಂಗಮ ರಾಹೆ44ರ ಎಲಿಮುನ್ನೋಳಿ ಕ್ರಾಸ್‌ನಿಂದ ಶೆಟ್ಟಿಹಳ್ಳಿ ಇಚಲಕರಂಜಿ ರಾಹೆ-78 ಸೀಡ್ ಫಾರ್ಮ ಹತ್ತಿರವರೆಗೆ ಬೈಪಾಸ್ ರಸ್ತೆ ನಿರ್ಮಾಣ ಮಾಡುವ ಕಾಮಗಾರಿಯ ವಿಸ್ಕೃತ ಯೋಜನ ವರದಿ ಸಿದ್ಧಪಡಿಸಲು ಸೂಚಿಸಿದೆ. ಅದರಂತೆ ರಾಯಬಾಗ ಪಟ್ಟಣಕ್ಕೆ ನಿಯೋಜಿತ ವರ್ತುಳ (ರಿಂಗ್) ಬೈಪಾಸ್ ರಸ್ತೆಯೂ ಕೂಡ ನಿರ್ಮಾಣವಾಗಲಿದೆ.

ವಾಹನ ದಟ್ಟಣೆಯಿಂದ ಸಂಚಾರ ದುಸ್ತರವಾಗಿ ಸಾಕಷ್ಟು ಅಪಘಾತಗಳು ಮತ್ತು ಅನಾಹುತಗಳಿಗೆ ಕಾರಣವಾಗಿದೆ. ಇದೀಗ ರಿಂಗ್ ರಸ್ತೆ ನಿರ್ಮಾಣದಿಂದ ವಾಹನ ದಟ್ಟಣೆ ತಪ್ಪಿ ಸುಗಮ ಸಂಚಾರಕ್ಕೆ ಮತ್ತಷ್ಟು ಅನುಕೂಲವಾಗಲಿದೆ.

ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಶಾಸಕ ನಿಖಿಲ ಕತ್ತಿ ಅವರ ಮನವಿ ಮತ್ತು ಹಿಂದಿನ ಹಲವಾರು ಮನವಿಗಳನ್ನು ಪುರಸ್ಕರಿಸಿರುವ ಲೋಕೋಪಯೋಗಿ ಇಲಾಖೆ ಡಿಪಿಆರ್ ತಯಾರಿಸಲು ಒಪ್ಪಿಗೆ ಸೂಚಿ ಸಕಾರಾತ್ಮಕವಾಗಿ ಸ್ಪಂದಿಸಿದೆ. ಒಂದೆರೆಡು ತಿಂಗಳಲ್ಲಿ ಡಿಪಿಆರ್ ಸಿದ್ಧಗೊಳ್ಳುವ ನಿರೀಕ್ಷೆ ಇದೆ. ಎಲ್ಲವೂ ಅಂದುಕೊಂಡತೆ ಆದರೆ, ಮುಂದಿನ ವರ್ಷದೊಳಗೆ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.

ಪಾರದರ್ಶಕ ಅಧಿನಿಯಮದಡಿ ಈ ಯೋಜನೆ ಅನುಷ್ಠಾನಗೊಳಿಸಬೇಕು. ತುಂಡು ಗುತ್ತಿಗೆ ನಿರ್ವಹಿಸಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಆದೇಶದಲ್ಲಿ ಸೂಚಿಸಲಾಗಿದೆ.ಹುಕ್ಕೇರಿ ಮತ್ತು ರಾಯಬಾಗ ಬೈಪಾಸ್ ರಿಂಗ್ ರಸ್ತೆಗಳ ನಿರ್ಮಾಣದ ಡಿಪಿಆರ್‌ಗೆ ಕಾರ‌್ಯಾದೇಶ ದೊರೆತಿದ್ದು ಕರ್ನಾಟಕ, ಮಹಾರಾಷ್ಟ್ರ ನಡುವಿನ ವಾಣಿಜ್ಯ, ವ್ಯವಹಾರ, ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗಲಿದೆ.

- ಪ್ರಿಯಾಂಕಾ ಜಾರಕಿಹೊಳಿ ಸಂಸದರುಅಭಿವೃದ್ಧಿಗೆ ಪೂರಕವಾಗಿರುವ ರಸ್ತೆಗಳ ಸುಧಾರಣೆ ಅತ್ಯಗತ್ಯವಾಗಿದೆ. ಹುಕ್ಕೇರಿಯಲ್ಲಿ ಬೈಪಾಸ್ ರಿಂಗ್ ರಸ್ತೆ ನಿರ್ಮಾಣದಿಂದ ಈ ವ್ಯಾಪ್ತಿಯಲ್ಲಿ ಸಂಚಾರ ಸಮಸ್ಯೆ ಸುಧಾರಿಸುವುದರ ಜತೆಗೆ ಆರ್ಥಿಕ ಅಭಿವೃದ್ಧಿಗೂ ನೆರವಾಗಲಿದೆ.

- ನಿಖಿಲ್ ಕತ್ತಿ, ಶಾಸಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ