ಸಂಪರ್ಕ ಭಾಷೆಯಾಗಿ ಇಂಗ್ಲಿಷ್‌ ಕಲಿಯುವುದರಲ್ಲಿ ತಪ್ಪೇನಿಲ್ಲ-ಡಾ. ಪ್ರೇಮಾನಂದ

KannadaprabhaNewsNetwork | Published : Aug 25, 2024 1:49 AM

ಸಾರಾಂಶ

ಪ್ರಪಂಚದಲ್ಲಿಯೇ ಇಂಗ್ಲಿಷ್ ಅತ್ಯಂತ ಪರಿಣಾಮಕಾರಿ ಭಾಷೆಯಾಗಿದ್ದು ಮಾತೃಭಾಷೆ ಜೊತೆಗೆ ಸಂಪರ್ಕ ಭಾಷೆಯಾಗಿ ಇಂಗ್ಲಿಷ್ ಕಲಿಯುವುದರಲ್ಲಿ ತಪ್ಪೇನಿಲ್ಲ ಎಂದು ಡಾ. ಪ್ರೇಮಾನಂದ ಲಕ್ಕಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ: ಪ್ರಪಂಚದಲ್ಲಿಯೇ ಇಂಗ್ಲಿಷ್ ಅತ್ಯಂತ ಪರಿಣಾಮಕಾರಿ ಭಾಷೆಯಾಗಿದ್ದು ಮಾತೃಭಾಷೆ ಜೊತೆಗೆ ಸಂಪರ್ಕ ಭಾಷೆಯಾಗಿ ಇಂಗ್ಲಿಷ್ ಕಲಿಯುವುದರಲ್ಲಿ ತಪ್ಪೇನಿಲ್ಲ ಎಂದು ಡಾ. ಪ್ರೇಮಾನಂದ ಲಕ್ಕಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.

ಮೋಟೆಬೆನ್ನೂರಿನ ನವೋದಯ ವಿದ್ಯಾಸಂಸ್ಥೆಯ ವಿ.ಬಿ. ಕಳಸೂರಮಠ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ 2024-25ನೇ ಸಾಲಿನ ಇಂಗ್ಲಿಷ್ ಭಾಷಾ ಕಾರ್ಯಾಗಾರವನ್ನುದ್ದೇಶಿಸಿ ಅವರು ಮಾತನಾಡಿದರು. ವಿಶ್ವದ ಭೂಪಟದಲ್ಲಿ ಇಂಗ್ಲಿಷ್ ಭಾಷೆಯನ್ನು ಬಳಕೆ ಮಾಡುವವರ ಸಂಖ್ಯೆ ಹೆಚ್ಚಿದ ವಿಶ್ವದ ಅರ್ಧದಷ್ಟು ದೇಶಗಳು ಇಂಗ್ಲಿಷನ್ನು ಪ್ರಮುಖ ಭಾಷೆಯನ್ನಾಗಿ ಬಳಕೆ ಮಾಡುತ್ತಿವೆ ಎಂದರು.

ಬಹುತೇಕ ರಾಷ್ಟ್ರಗಳಲ್ಲಿ 2ನೇ ಭಾಷೆ: ಸಂಪನ್ಮೂಲ ವ್ಯಕ್ತಿ ಭಿಕ್ಷಾವರ್ತಿಮಠ ಮಾತನಾಡಿ, ಪ್ರಪಂಚದಲ್ಲಿ ಇಂಗ್ಲಿಷ್ ಭಾಷೆಯನ್ನು 2ನೇ ಭಾಷೆಯನ್ನಾಗಿ ಇಂಗ್ಲಿಷ್ ಅಧ್ಯಯನಕ್ಕಾಗಿ ಸಮಯವನ್ನು ಮೀಸಲಿಡುತ್ತಿದ್ದಾರೆ. ವಾಸ್ತವವದಲ್ಲಿ ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಇಂಗ್ಲಿಷ್ ಭಾಷೆಯನ್ನು ಕಲಿಸಲು ಅನೇಕ ದೇಶಗಳು ಶಾಲಾ ಪಠ್ಯಕ್ರಮದಲ್ಲಿ ಸೇರಿಸುತ್ತಿದ್ದು ಭಾರತದಲ್ಲಿಯೂ 2ನೇ ಭಾಷೆಯಾಗಿ ಇಂಗ್ಲಿಷ್ ಕಲಿಯುವಂತೆ ಸೂಚನೆ ನೀಡಿರುವುದು ಸ್ವಾಗತಾರ್ಹ ಎಂದರು.

ಇಂಗ್ಲಿಷ್ ಸಂವಹನದ ಪ್ರಮುಖ ಸಾಧನ:ಇಂಗ್ಲಿಷ್ ಭಾಷಾ ವೇದಿಕೆಯ ಅಧ್ಯಕ್ಷ ಶ್ರೀನಿವಾಸ ಕರ್ನೂಲ ಮಾತನಾಡಿ, ನಾವು ನಮ್ಮ ಆಲೋಚನೆಗಳನ್ನು ವಿಶ್ವದೆಲ್ಲೆಡೆ ಹಂಚಿಕೊಳ್ಳಬೇಕು ಎಂದಾದರೇ ಇಂಗ್ಲಿಷ್ ಅತೀ ಅವಶ್ಯಕ, ಹೀಗಾಗಿ ಸದರಿ ಭಾಷೆಯನ್ನು ಜಾಗತಿಕ ಮೊದಲ ಭಾಷಾಶಾಸ್ತ್ರ ಎಂದು ಪರಿಗಣಿಸಲಾಗಿದೆ ವ್ಯಾಪಾರ, ಮನೋರಂಜನೆ, ಉದ್ಯೋಗ ಸೇರಿದಂತೆ ವೃತ್ತಿ ಪರವಾದ ಎಲ್ಲ ಚಟುವಟಿಕೆಗಳಿಗೆ ಅಂತಾರಾಷ್ಟ್ರೀಯ ಭಾಷೆಯಾಗಿ ಬಳಸುತ್ತೇವೆ ಎಂದರು.

ಇಂಗ್ಲಿಷ್ ನೆಚ್ಚಿಕೊಂಡಿರುವ ಬಹುರಾಷ್ಟ್ರೀಯ ಸಂಸ್ಥೆಗಳು: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಬಹುತೇಕ ಬಹುರಾಷ್ಟ್ರೀಯ ಸಂಸ್ಥೆಗಳು (ಎಂ.ಎನ್.ಸಿ) ಇಂಗ್ಲಿಷ್ ಭಾಷಾ ಪ್ರಾವಿಣ್ಯರನ್ನೇ ಉದ್ಯೋಗಿಗಳನ್ನಾಗಿ ನೇಮಕ ಮಾಡಿಕೊಳ್ಳುತ್ತಿದ್ದಾರೆ. ಕೆಲವೊಂದು ಸಂಸ್ಥೆಗಳು ಇಂಗ್ಲಿಷ್ ಮಾತನಾಡುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಿದ ಬಳಿಕವಷ್ಟೇ ನೇಮಕ ಮಾಡಿಕೊಳ್ಳಲು ನಿರ್ಧರಿಸುತ್ತಾರೆ. ಹೀಗಾಗಿ ಇಂಗ್ಲಿಷ್ ಭಾಷೆಯು ಬಹುದೊಡ್ಡ ಸಾಮರ್ಥ್ಯ ಹೊಂದಿದ್ದು ಉತ್ತಮ ಭವಿಷ್ಯಕ್ಕಾಗಿ ಇಂಗ್ಲಿಷ್ ಕಲಿಯಲೇಬೇಕಾಗಿದೆ ಎಂದರು.

ಬಿ.ಸಿ. ಹಾವೇರಿಮಠ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಸಂಸ್ಥೆಯ ಕೋಶಾಧ್ಯಕ್ಷ ಅಶೋಕ ಬಣಕಾರ, ಕಾರ್ಯಕಾರಿ ಮಂಡಳಿ ಸದಸ್ಯರಾದ ವಿ.ಎಫ್. ಕನ್ನಮ್ಮನವರ, ಸಂಸ್ಥೆಯ ನಿರ್ದೇಶಕ ವಿ.ಸಿ. ಹಾವೇರಿಮಠ, ಸುಷ್ಮಾ ಉಪಾಸಿ ತಾಲೂಕಿನ ಎಲ್ಲಾ ಇಂಗ್ಲಿಷ್ ಭಾಷಾ ಶಿಕ್ಷಕ ಶಿಕ್ಷಕಿಯರು ಪಾಲ್ಗೊಂಡಿದ್ದರು.

Share this article