ಕನ್ನಡಪ್ರಭ ವಾರ್ತೆ ತಾಳಿಕೋಟೆ
ಕ್ರೀಡೆಗಳು ಮಾನಸಿಕವಾಗಿ, ದೈಹಿಕವಾಗಿ ಸದೃಢಗೊಳಿಸಲು ಪ್ರೇರಣಾದಾಯಕ ಶಕ್ತಿ ಹೊಂದಿವೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಬಿ.ಟಿ.ವಜ್ಜಲ ಹೇಳಿದರು. ತಾಲೂಕಿನ ತುಂಬಗಿ ಗ್ರಾಮದ ಪರಮಾನಂದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ತುಂಬಗಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸೋಲು, ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಬೇಕು. ಗೆದ್ದೆ ಎಂಬ ಅಹಂಭಾವ, ಸೋತೆ ಎಂಬ ಮಾನಸಿಕತೆ ಬೇಡಾ. ಎಲ್ಲವನ್ನು ಸಮಾನವಾಗಿ ತೆಗೆದುಕೊಂಡು ಸೋಲೇ ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಳ್ಳಲು ಮುಂದಾಗಿ. ಮುಂದೊಂದು ದಿನ ಉಜ್ವಲ ಭವಿಷ್ಯ ಕ್ರೀಡೆಯಲ್ಲಿ ಸಿಗಲಿದೆ ಎಂದರು.ತುಂಬಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರಶೇಖರ ಸಜ್ಜನ ಕ್ರೀಡಾ ಜ್ಯೋತಿ ಬೆಳಗಿಸಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಯನ್ನು ಕ್ರೀಡೆಯನ್ನಾಗಿ ಆಡಬೇಕು. ಅದರಲ್ಲಿ ಯಾವುದೇ ರೀತಿ ಭೇದ- ಭಾವವೆಂಬುವುದು ಇರಬಾರದು. ಬೇರೆ ಬೇರೆ ಶಾಲೆಯವರು ಇದ್ದರೂ ಕೂಡಾ ಎಲ್ಲರೂ ಮುಂದೊಂದು ದಿನ ಸ್ನೇಹಿತರಾಗಿ ಬಾಳಲಿದ್ದೀರಿ. ಉತ್ತಮವಾಗಿ ಕ್ರೀಡೆಯನ್ನು ಆಡುವ ಮೂಲಕ ತಮ್ಮ ಆತ್ಮವಿಶ್ವಾಸ ಹಾಗೂ ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರಾವುತ ಪೂಜಾರಿ ಮಾತನಾಡಿ, ಶಿಕ್ಷಣ ಮತ್ತು ಕ್ರೀಡೆ ಒಂದು ನಾಣ್ಯದ ಎರಡು ಮುಖಗಳಿಂದ್ದಂತೆ ಶಿಕ್ಷಣ ಬೌದ್ಧಿಕ ಶಿಕ್ಷಣಕ್ಕೆ ಪೂರಕವಾಗಿದ್ದರೇ ದೈಹಿಕ ಶಿಕ್ಷಣವು ದೈಹಿಕ ಬೆಳವಣಿಗೆಯ ಜೊತೆಗೆ ಮಾನಸಿಕತೆಯನ್ನು ದೂರಿಕರಿಸಲಿದೆ ಎಂದರು.ಕ್ರೀಡಾಕೂಟ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭುನಾಥ ಏವೂರ ವಹಿಸಿ ಮಾತನಾಡಿದರು. ಶಿಕ್ಷಕರ ಸಂಘದ ಖಜಾಂಚಿ ಎ.ಡಿ.ಗೋನಾಳ, ಟಿ.ಡಿ.ಲಮಾಣೆ, ಎಲ್.ಜಿ.ಬಾಗೇವಾಡಿ, ಪ್ರಾ.ಶಾ.ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಜಿ.ಕೆ.ಪತ್ತಾರ, ಬಿ.ಎಸ್.ಕೊಂಡಗೂಳಿ, ಸಿಆರ್‌ಪಿ ರಾಜು ಬಿರಾದಾರ ಹಾಗೂ ಎಲ್ಲ ಶಿಕ್ಷಕ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು. ಕುಮಾರಿ ಕವಿತಾ ಬಡಿಗೇರ ಸ್ವಾಗತಿಸಿದರು. ರವಿ ರಾಠೋಡ ವಂದಿಸಿದರು.