ಸರ್ಕಾರಗಳನ್ನು ಬದಲಾಯಿಸುವ ಶಕ್ತಿ ಹಸಿರು ಶಾಲಿಗಿದೆ

KannadaprabhaNewsNetwork |  
Published : Jul 03, 2026, 01:30 AM IST
2 ಟಿವಿಕೆ 3 – ತುರುವೇಕೆರೆ ತಾಲೂಕು ಕಣಕೂರು ಗ್ರಾಮದಲ್ಲಿ ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘ ಉದ್ಘಾಟನೆ ನೆರವೇರಿತು. | Kannada Prabha

ಸಾರಾಂಶ

ರೈತ ವಿರೋಧಿ ನಿಲುವು ತಾಳುವ ಸರ್ಕಾರಗಳನ್ನು ಬದಲಾಯಿಸುವ ಶಕ್ತಿ ಹಸಿರು ಶಾಲಿಗೆ ಇದೆ ಎಂದು ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಮಂಡ್ಯ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಹೇಳಿದರು.

ಕನ್ನಡಪ್ರಭವಾರ್ತೆ, ತುರುವೇಕೆರೆ

ರೈತ ವಿರೋಧಿ ನಿಲುವು ತಾಳುವ ಸರ್ಕಾರಗಳನ್ನು ಬದಲಾಯಿಸುವ ಶಕ್ತಿ ಹಸಿರು ಶಾಲಿಗೆ ಇದೆ ಎಂದು ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಮಂಡ್ಯ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಹೇಳಿದರು.

ತಾಲೂಕಿನ ಕಣಕೂರಿನಲ್ಲಿ ರಾಜ್ಯ ರೈತ ಸಂಘದ ನೂತನ ಗ್ರಾಮ ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬರುವ ಮಂದಿ ಅಧಿಕಾರದ ಮದದಲ್ಲಿ ರೈತರ ಹಿತ ಕಾಯಲು ಮರೆಯುತ್ತಾರೆ. ಅವರಿಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಸಹ ಅವರು ಅಧಿಕಾರದ ಅಮಲಿನಲ್ಲಿ ತೇಲಾಡುತ್ತಿರುತ್ತಾರೆ. ಅಂತಹವರಿಗೆ ತಕ್ಕ ಬುದ್ದಿಯನ್ನು ರೈತಾಪಿಗಳು ಕಲಿಸಲು ಮುಂದಾಗಬೇಕೆಂದರು. ರೈತರು ತಾವು ಬೆಳೆದ ಬೆಳೆಗೆ ಬೆಲೆಯನ್ನು ನಿಗದಿ ಮಾಡದ ಸ್ಥಿತಿಯಲ್ಲಿದ್ದಾರೆ. ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ್ಲದ ಕಾರಣ ಬೆಳೆ ದಲ್ಲಾಳಿಗಳ ಪಾಲಾಗುತ್ತಿದೆ. ಬೆಳೆಗೆ ಹಾಕಿದ್ದ ಗೊಬ್ಬರದ ಕಾಸೂ ಸಿಗದಿರುವ ಉದಾಹರಣೆಗಳು ಇವೆ. ಆದರೆ ಕ್ಷಣ ಮಾತ್ರದಲ್ಲಿ ದಲ್ಲಾಳಿ ರೈತ ಬೆಳೆದ ಬೆಳೆಯಿಂದ ಸಾಕಷ್ಟು ಲಾಭ ಮಾಡಿಕೊಳ್ಳುತ್ತಿರುವುದು ವಿಷಾದದ ಸಂಗತಿ. ಹಾಗಾಗಿ ತಮ್ಮ ರೈತ ಸಂಘ ವರ್ಷ ಪೂರ್ತಿ ಬೆಂಬಲ ನೀಡಿ ಖರೀದಿ ಕೇಂದ್ರ ತೆರೆಯಬೇಕೆಂದು ಆಗ್ರಹಿಸುತ್ತದೆ ಎಂದರು. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ದೊರೆಯುತ್ತಿಲ್ಲ. ಬಡ ರೈತರು ಓದಿಸುತ್ತಿದ್ದ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಅಧಿಕಾರಿಗಳು ಮತ್ತು ರಾಜಕಾರಣಿಗಳ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಪಾರೀಕರಣ ಮನೆ ಮಾಡಿದೆ. ಬಡವರು ಓದಿಸಲು ಸಾಧ್ಯವಾಗದಷ್ಟು ಹಣ ನೀಡಬೇಕಿದೆ. ಇದಕ್ಕೆಲ್ಲಾ ಕಾರಣ ಚುನಾವಣೆ ಬಂದ ವೇಳೆ ರಾಜಕಾರಣಿಗಳು ಕೊಡುವ ಎಂಜಲಿನ ಹಣದ ಆಸೆಗೆ ಬಲಿಯಾಗಿ ನಮ್ಮ ಮತಗಳನ್ನು ಮಾರಿಕೊಳ್ಳುವುದಾಗಿದೆ. ರಾಜಕಾರಣಿಗಳು ನಾವು ಭೂಮಿಗೆ ಬಿತ್ತನೆ ಬೀಜ ಬಿತ್ತಿದಂತೆ ಹಣವನ್ನು ಹಾಕುತ್ತಾರೆ. ಹಣವನ್ನು ಲೂಟಿ ಹೊಡೆಯುತ್ತಾರೆ. ಹಣವಂತರು ಹಣವಂತರಾಗೇ ಇದ್ದಾರೆ. ಬಡವರು ಬಡವರಾಗೇ ಇದ್ದಾರೆಂದು ಹೇಳಿದರು. ಹಸಿರು ಶಾಲು ಹಾಕುವ ನಾವು ರೈತರು ಮತ್ತು ದೇಶ ಕಾಯುವ ಯೋಧರಿಗಷ್ಠೇ ಗೌರವ ನೀಡಬೇಕು. ಮಿಕ್ಕೆಲ್ಲವರೂ ನಮ್ಮ ಸೇವಕರು. ಇಂದು ಪ್ರಮಾಣ ವಚನ ಸ್ವೀಕರಿಸಿರುವ ಎಲ್ಲಾ ಯುವಕರು ಹಸಿರು ಶಾಲನ್ನು ಯಾವಾಗಲೂ ಧರಿಸಬೇಕೆಂದು ಕರೆ ನೀಡಿದರು. ಮೈಸೂರು ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ಹಕ್ಕೊತ್ತಾಯ ಮಂಡಿಸಿ ಸರ್ಕಾರ ರೈತ ವಿರೋಧಿ ಶಾಸನಗಳನ್ನು ಕೈ ಬಿಡಬೇಕು. ಬಿಡದಿ ಟೌನ್ ಶಿಪ್ ಕೈ ಬಿಡಬೇಕು. ರೈತರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಹೂವು ಮತ್ತು ಹಣ್ಣು ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಬೇಕು. ಕುಡಿಯುವ ನೀರಿಗೆ ಹೆಚ್ಚು ಒತ್ತು ನೀಡಬೇಕು. ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡಬೇಕು. ಉಚಿತ ಶಿಕ್ಷಣ, ಉಚಿತ ಆರೋಗ್ಯ ಪ್ರತಿಯೊಬ್ಬರ ಹಕ್ಕಾಗಬೇಕು. ಟೋಲ್ ನಲ್ಲಿ ರೈತರ ಉತ್ಪನ್ನಗಳನ್ನು ಸಾಗಣೆ ಮಾಡಲು ಉಚಿತ ಪ್ರವೇಶ ನೀಡಬೇಕೆಂದು ಆಗ್ರಹಿಸಿದರು. ತಾಲೂಕು ರೈತ ಸಂಘದ ಅಧ್ಯಕ್ಷ ಕಣಕೂರು ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಮಂಡ್ಯ ಜಿಲ್ಲೆಯ ಅಧ್ಯಕ್ಷೀಯ ಮಂಡಲಿ ರಾಜ್ಯ ಸಮಿತಿಯ ವಕ್ತಾರ ಸೋ.ಶಿ.ಪ್ರಕಾಶ್, ತುಮಕೂರು ಜಿಲ್ಲಾಧ್ಯಕ್ಷ ಮಹದೇವಯ್ಯ, ತಾಲೂಕಿನ ಮುಖಂಡರಾದ ಅರುಣ್ ಕುಮಾರ್, ಜವರಪ್ಪ, ಹರ್ಷಿತ್ ಗೌಡ, ಧನಂಜಯ, ಸುಧಾಮಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನೆಗೊಂದು ಗ್ರಂಥಾಲಯ ಅನುಷ್ಠಾನ ಅರ್ಥಪೂರ್ಣವಾದದ್ದು: ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ
ರೈತರ ನೆರವಿಗೆ ಕೇಂದ್ರ, ರಾಜ್ಯ ಸರ್ಕಾರಗಳು ಧಾವಿಸಲಿ: ಶಾಸಕ ಸಿಎನ್ ಬಾಲಕೃಷ್ಣ