ಚಿತ್ರದ ನಿರ್ದೇಶಕ ಇಸ್ಲಾಹುದ್ದೀನ್ ಮಾಹಿತಿ । ಚನ್ನಪ್ಪನವರ 80ರ ದಶಕದ ಅನ್ನ ಕಥೆಯನ್ನು ಆಧರಿಸಿದ ಚಿತ್ರಕನ್ನಡಪ್ರಭ ವಾರ್ತೆ ಚಾಮರಾಜನಗರಈ ನೆಲದ ಭಾಷೆ, ಸೊಗಡು ಮತ್ತು ಹನೂರು ಚನ್ನಪ್ಪನವರ 80ರ ದಶಕದ ಅನ್ನ ಕಥೆಯನ್ನು ಆಧರಿಸಿ ನಿರ್ಮಿಸಿರುವ ಅನ್ನ ಚಲನಚಿತ್ರದಲ್ಲಿ ಕಥೆಯೇ ಹಿರೋ ಆಗಿದ್ದು, ಅನ್ನದ ಮಹತ್ವವನ್ನು ಸಾರುವ ಉತ್ತಮ ಚಲನಚಿತ್ರವಾಗಿದೆ. ಈ ಚಿತ್ರ ಸೆ.6 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಎನ್.ಎಸ್.ಇಸ್ಲಾಹುದ್ದೀನ್ ತಿಳಿಸಿದರು.
ನಗರದ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಚಿತ್ರವನ್ನು ಬಸವರಾಜು ನಿರ್ಮಿಸಿದ್ದು, ಹೆಚ್ಚು ಸ್ಥಳೀಯ ಕಲಾವಿದರನ್ನೇ ಹಾಕಿಕೊಂಡು ಸುಮಾರು 24 ದಿನಗಳ ಚಿತ್ರೀಕರಣ ಮಾಡಿ ಪೂರ್ಣಗೊಳಿಸಿದ್ದೇವೆ ಎಂದು ಹೇಳಿದರು.ಜಿಲ್ಲೆಯ ಮಂಗಲ, ಕಣ್ಣೂರು, ಟಗರಪುರ, ಆಲಹಳ್ಳಿ, ಎಡಕುರಿಯಾ, ಮಹದೇಶ್ವರ ಬೆಟ್ಟ ಈ ಸ್ಥಳಗಳಲ್ಲಿ ಕಷ್ಟಪಟ್ಟು ಊರಿನವರ ಸಹಾಯದವರಿಂದ 80ರ ದಶಕದ ಪರಿಸ್ಥಿತಿಯನ್ನು ಅವಲೋಕಿಸಿ ಅಂದು ಉಪಯೋಗಿಸುತ್ತಿದ್ದ ವಸ್ತುಗಳನ್ನು ಸಂಗ್ರಹಿಸಿ ಚಿತ್ರೀಕರಿಸಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದೇವೆ ಎಂದರು.ಅಂದು ಕೆಲವರಿಗೆ ಅನ್ನ ಸಿಕ್ಕುವುದೇ ದುಸ್ತರವಾಗಿತ್ತು. ರಾಗಿ, ಜೋಳ ಹೆಚ್ಚು ಬೆಳೆಯುತ್ತಿದ್ದ ಕಾಲದಲ್ಲಿ ಒಂದು ಬಡ ಕುಟಂಬದಲ್ಲಿ ಹುಟ್ಟಿದ ಹುಡುಗನೊಬ್ಬ ಅನ್ನಕ್ಕಾಗಿ ಪರಿತಪಿಸುವ, ನಂತರ ಮಹದೇಶ್ವರ ಬೆಟ್ಟಕ್ಕೆ ತಂದೆ ತಾಯಿಗಳ ಜೊತೆ ಹೋದಾಗ ಆ ಹುಡುಗ ಕಾಣೆಯಾಗಿ ಆತ ಭತ್ತ ಬೆಳೆಯುವ ಪ್ರದೇಶಕ್ಕೆ ಸೇರಿಕೊಳ್ಳುತ್ತಾನೆ ಇದು ಚಿತ್ರದ ಕಥೆಯ ಸಾರಾಂಶ ಎಂದು ತಿಳಿಸಿದರು.ಈ ಚಿತ್ರವು ಕಲಾತ್ಮಕವಾಗಿ, ಮನರಂಜನಾತ್ಮಕವಾಗಿದ್ದು, ಚಿಕ್ಕವರಿಂದ ದೊಡ್ಡವರವರೆಗೂ ಕುಟುಂಬ ಸಮೇತ ನೋಡಬಹುದಾದ ಚಿತ್ರ ಇದಾಗಿದೆ. ಈಗಾಗಲೇ ಈ ಚಿತ್ರಕ್ಕೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ ಎಂದರು.ಸಂಭಾಷಣೆಕಾರ ಸಿದ್ದು ಪ್ರಸನ್ನ ಮಾತನಾಡಿ, ಚಿತ್ರದಲ್ಲಿ ಜಿಲ್ಲೆಯ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ಜನರು ಚಿತ್ರಮಂದಿರಕ್ಕೆ ಬಂದು ಅನ್ನ ಚಿತ್ರವನ್ನು ನೋಡುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಅನ್ನ ಚಿತ್ರದ ಟ್ರೇಲರ್, ಒಂದು ಹಾಡನ್ನು ಬಿಡುಗಡೆ ಮಾಡಲಾಯಿತು. ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಬಸವರಾಜು, ನಟ ಅಬ್ರಹಾಂ ಡಿ.ಸಿಲ್ವ, ಸಂಗೀತ ನಿರ್ದೇಶಕ ನಾಗೇಶ್ ಕಂದೇಗಾಲ, ಬಾಲ ನಟರಾದ ನಂದನ್, ಕೃಷಿಕ, ನಟಿ ಪದ್ಮಶ್ರೀ, ಕಲಾ ನಿರ್ದೇಶಕ ಮಹೇಶ್ವರ್, ಸಹ ನಿರ್ದೇಶಕ ಸಿದ್ದಿಕ್, ಮೂಕಹಳ್ಳಿ ಬಸವಣ್ಣ ಇದ್ದರು.