ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನಲ್ಲಿ ಅಂತರ್ಜಲ ಬಳಕೆ ಪ್ರಮಾಣ ನಿಗದಿಗಿಂತ ಹೆಚ್ಚಿರುವ ಕಾರಣ ( ಶೇ.126 ಅಂತರ್ಜಲ ಬಳಸುತ್ತಿದ್ದು) ಅಂತರ್ಜಲ ಮಟ್ಟ 700 ರಿಂದ 800 ಅಡಿಗೆ ಕುಸಿತಗೊಂಡಿರುವ ಹಿನ್ನೆಲೆ ಗುಂಡ್ಲುಪೇಟೆ ತಾಲೂಕನ್ನು ಅತಿಯಾದ ಬಳಕೆ ( ಓವರ್ ಎಕ್ಸ್ ಪ್ಲೋಟೆಡ್ ) ವರ್ಗಕ್ಕೆ ಸೇರ್ಪಡೆಗೊಂಡಿದೆ ಎಂದು ಕೇಂದ್ರೀಯ ಅಂತರ್ಜಲ ಮಂಡಳಿ ( ಸಿಜಿಡಬ್ಲ್ಯೂಡಿ) ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಜಿ.ಕೃಷ್ಣಮೂರ್ತಿ ಹೇಳಿದರು.ಅವರು ಪಟ್ಟಣದ ಜ್ಞಾನ ಭವನದಲ್ಲಿ ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯದಡಿಯಲ್ಲಿ ಅಂತರ್ಜಲದ ಉನ್ನತ ಸಂಸ್ಥೆಯಾದ ಕೇಂದ್ರೀಯ ಅಂತರ್ಜಲ ಮಂಡಳಿ ಜಲಧರೆಗಳ ನಕಾಶಿಕೆ ಮತ್ತು ಅಂತರ್ಜಲ ಸಂರಕ್ಷಣೆ ಎಂಬ ವಿಷಯ ಕುರಿತು ಒಂದು ದಿನದ ಸಾರ್ವಜನಿಕ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗುಂಡ್ಲುಪೇಟೆ ತಾಲೂಕು ಕೂಡ ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಲ ಬಳಕೆ ಮಾಡುವ ತಾಲೂಕು ಕೇಂದ್ರವಾಗಿದ್ದು ಆದ್ದರಿಂದ ಅಂತರ್ಜಲವನ್ನು ಸಂರಕ್ಷಣೆ ಮಾಡುವ ಕೆಲಸ ಇಂದಿನಿಂದಲೇ ಅಗಬೇಕಾಗಿದೆ ಎಂದು ಸಲಹೆ ನೀಡಿದರು.
ದೇಶದ ಶೇ.80ರಷ್ಟು ಕುಡಿಯುವ ನೀರು ಹಾಗೂ ಶೇ.60ರಷ್ಟು ಕೃಷಿ ನೀರಾವರಿ ಅಗತ್ಯತೆಯನ್ನು ಅಂತರ್ಜಲ ಪೂರೈಸುತ್ತದೆ, ಆದರೆ ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಬಳಕೆದಾರರ ಪ್ರಮಾಣ ದ್ವಿಗುಣಗೊಂಡು ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಲ ಬಳಕೆ ಮಾಡುತ್ತಿರುವ ಕಾರಣ ಭೂಮಿ ಒಳಗಿನ ಪದರಗಳಿಂದ ಅಂತರ್ಜಲದ ಮೇಲೆ ಹೆಚ್ಚಿನ ಒತ್ತಡದಿಂದ ದೇಶಾದ್ಯಂತ ದಿನೇ ದಿನೇ ಅಂತರ್ಜಲ ಮಟ್ಟ ಕುಸಿತಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಅಂತರ್ಜಲ ಬಳಕೆ ಮಟ್ಟ ಶೇ. 68.44ರಷ್ಟಿದ್ದು ಒಟ್ಟು 237 ತಾಲೂಕುಗಳಲ್ಲಿ 45 ತಾಲೂಕುಗಳು ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಲ ಬಳಕೆ ಮಾಡುವುದರಿಂದ ಅಂತರ್ಜಲ ಮಟ್ಟ ಕುಸಿತ ಗೊಂಡಿದೆ ಎಂದರು.
ಈಗಾಗಲೇ ಜಲಶಕ್ತಿ ಮಂಡಳಿ ಹಲವಾರು ಅಧ್ಯಯನ ನಡೆಸಿದ್ದು, ಪ್ರತಿ ವರ್ಷಕ್ಕೆ ನಾಲ್ಕು ಬಾರಿ ಸುಮಾರು ೨೫ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಅಳೆಯಲಾಗುತ್ತಿದೆ, ಅಲ್ಲದೇ ಒಂದು ಬಾರಿ ಅಂತರ್ಜಲ ಗುಣಮಟ್ಟ ತಪಾಸಣೆ ನಡೆಸಲಾಗುತ್ತದೆ. ಜಲಧರೆಗಳ ನಕಾಶಿಕೆ ಕಾರ್ಯಕ್ರಮದ ಅಡಿಯಲ್ಲಿ 10 ಕೊಳವೆ ಬಾವಿ ಕೊರೆಸಲಾಗಿದ್ದು, 120 ಅಡಿಯಿಂದ 400ಅಡಿಗಳಷ್ಟು ಕೊರೆದರೂ ನೀರಿನ ಸೆಲೆ ಸಿಗುತ್ತಿಲ್ಲ ಎಂದರು.ಗುಂಡ್ಲುಪೇಟೆ ತಾಲೂಕಿನಲ್ಲಿ ಅತಿ ಹೆಚ್ಚು ಮಂದಿ 600 ರಿಂದ 800 ಅಡಿಗಳವರೆಗೆ ಭೂಮಿ ಕೊರೆದು ಅಂತರ್ಜಲ ಬಳಕೆ ಮಾಡುವ ಮೂಲಕ ಕೃಷಿ ಚಟುವಟಿಕೆ/ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಬಳಕೆ ಮಾಡುತ್ತಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಅಂತರ್ಜಲ ಬಳಕೆ ಹೆಚ್ಚಾದಂತೆ ಜಲಮಟ್ಟ ಸಂಪೂರ್ಣವಾಗಿ ಕುಸಿತಗೊಂಡು ನಾಗರಿಕರು ಕೊಳವೆ ಬಾವಿಗಳ ನೀರು ಕುಡಿಯಲು ಯೋಗ್ಯವಲ್ಲದ ಪರಿಸ್ಥಿತಿಗೆ ಬಂದು ನಿಲ್ಲಲಿದೆ ಎಂದು ಎಚ್ಚರಿಕೆ ನೀಡಿದರು.ವಿಜ್ಞಾನಿ ಎಚ್.ಪಿ.ಜಯಪ್ರಕಾಶ್ ತರಬೇತಿ ಕಾರ್ಯಕ್ರಮದ ಗುರಿ ಮತ್ತು ಉದ್ದೇಶಗಳ ಕುರಿತು ಸವಿವರವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಷಣ್ಮುಗಂ, ಮಹಿಳಾ ವಿಜ್ಞಾನಿ ವೀಣಾ, ಆರ್,ಶ್ವೇತಾ , ತೇಜಸ್, ಡಾ.ಹೆಗಡೆ ಸೇರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.