ಕೇಂದ್ರ ಸರ್ಕಾರ ಜಿಎಸ್‌ಟಿ ದರ ಇಳಿಕೆ ನಿರ್ಧಾರ ಜಾರಿಗೊಂಡ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಪಿವಿಎಸ್ ಬಳಿಯ ಬಿಜೆಪಿ ಜಿಲ್ಲಾ ಕಚೇರಿ ಮುಂಭಾಗದಲ್ಲಿ ಸೋಮವಾರ ಸಂಭ್ರಮಾಚರಣೆ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಕೇಂದ್ರ ಸರ್ಕಾರ ಜಿಎಸ್‌ಟಿ ದರ ಇಳಿಕೆ ನಿರ್ಧಾರ ಜಾರಿಗೊಂಡ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಪಿವಿಎಸ್ ಬಳಿಯ ಬಿಜೆಪಿ ಜಿಲ್ಲಾ ಕಚೇರಿ ಮುಂಭಾಗದಲ್ಲಿ ಸೋಮವಾರ ಸಂಭ್ರಮಾಚರಣೆ ನಡೆಯಿತು.ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಜಿಎಸ್‌ಟಿ ಇಳಿಕೆಯ ಸಂಭ್ರಮಾಚರಣೆ ನಡೆಸಿದರು. ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಜೈಕಾರ ಕೂಗಿದರು.ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಿಎಸ್‌ಟಿ ದರ ಇಳಿಕೆ ಮಾಡಿರುವುದು ಬಡ ಹಾಗೂ ಮಧ್ಯಮ ವರ್ಗದ ಜನತೆಗೆ ಅನುಕೂಲವಾಗಲಿದೆ. ಅಗತ್ಯ ವಸ್ತುಗಳ ಬೆಲೆ ಇಳಿಕೆ ಆಗಿದ್ದು, ಜನಸಾಮಾನ್ಯರಿಗೆ ಇದರ ಲಾಭ ದೊರೆಯಲಿದೆ. ದೇಶದ ಗಡಿ ರಕ್ಷಣೆಯ ಜತೆಗೆ ನಾಗರಿಕರ ಬದುಕಿಗೂ ಕೇಂದ್ರ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ. ದಸರಾ ಆರಂಭಕ್ಕೆ ಕೇಂದ್ರ ಸರ್ಕಾರ ಒಳ್ಳೆಯ ಸುದ್ದಿ ನೀಡಿದೆ ಎಂದರು.ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ನವರಾತ್ರಿ ಹಬ್ಬದ ಉಡುಗೊರೆಯಾಗಿ ಕೇಂದ್ರ ಸರ್ಕಾರ ಜಿಎಸ್‌ಟಿ ಕಡಿತ ಮಾಡಿದ್ದು, ದೇಶದ ಶೇ.99ರಷ್ಟು ಜನತೆಗೆ ಉಪಯುಕ್ತವಾಗಲಿದೆ. ಇದರಿಂದಾಗಿ ಕುಟುಂಬವೊಂದಕ್ಕೆ ತಿಂಗಳಿಗೆ ಎರಡು ಸಾವಿರ ರು. ಉಳಿತಾಯವಾಗಲಿದೆ. ಜಿಎಸ್‌ಟಿ ಇಳಿಕೆ ಬಗ್ಗೆ ಮುಂದಿನ ಒಂದು ವಾರಗಳ ಕಾಲ ಅಂಗಡಿ, ಮಾರುಕಟ್ಟೆಗಳಲ್ಲಿ ಉಳಿತಾಯ ಉತ್ಸವ ಆಚರಿಸಲಾಗುವುದು ಎಂದರು.ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಜಿಎಸ್‌ಟಿ ಇಳಿಕೆಯಿಂದ ಜನರು ಸಂತೋಷಗೊಂಡಿದ್ದಾರೆ. ಈ ಬಗ್ಗೆ ಉದ್ದಿಮೆದಾರರು ಒಳಗೊಂಡ ತಂಡದಿಂದ ಜನರಿಗೆ ತಿಳುವಳಿಕೆ ನೀಡಲಾಗುವುದು ಎಂದು ಹೇಳಿದರು.ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಉಪಾಧ್ಯಕ್ಷೆ ಪೂಜಾ ಪೈ, ಕಾರ್ಯದರ್ಶಿ ಪೂರ್ಣಿಮಾ, ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ಜೋಗಿ, ಮುಖಂಡರಾದ ನಿತಿನ್‌ಕುಮಾರ್, ಭಾಸ್ಕರಚಂದ್ರ ಶೆಟ್ಟಿ, ಪ್ರಸನ್ನ ದರ್ಬೆ, ಜಗದೀಶ ಶೇಣವ ಮತ್ತಿತರರು ಇದ್ದರು....................10 ದಿನಗಳ ಕಾಲ ಜಿಎಸ್‌ಟಿ ಉತ್ಸವ ಅಭಿಯಾನ
ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಮುಂದಿನ 10 ದಿನಗಳ ಕಾಲ ಜಿಎಸ್‌ಟಿ ಉತ್ಸವವನ್ನು ಅಭಿಯಾನದ ರೂಪದಲ್ಲಿ ನಡೆಸಲಾಗುವುದು. ಪಕ್ಷದ ಪ್ರಮುಖರಾದ ಜಯಂತ್ ಕೋಟ್ಯಾನ್, ಸಿಎ ಶಾಂತಾರಾಮ ಶೆಟ್ಟಿ, ಪ್ರಸನ್ನ ದರ್ಬೆ, ಅಕ್ಷಯ ಆಳ್ವ ಅವರ ನೇತೃತ್ವದಲ್ಲಿ ಈ ಅಭಿಯಾನ ನಡೆಯಲಿದೆ. ಜಿಎಸ್‌ಟಿ ಇಳಿಕೆಯ ಲಾಭವನ್ನು ಗ್ರಾಹಕರಿಗೆ ಒದಗಿಸುವಂತೆ ಮಾಡುವುದು ಅಭಿಯಾನದ ಉದ್ದೇಶ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.