ಗ್ಯಾರಂಟಿ ಯೋಜನೆಗಳು ಸರ್ವರ ಪ್ರಗತಿಗೆ ಸಹಕಾರಿ

KannadaprabhaNewsNetwork | Published : Apr 6, 2025 1:47 AM

ಸಾರಾಂಶ

ಶಿವಮೊಗ್ಗ: ಶತಶತಮಾನಗಳಿಂದ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರನ್ನು, ಶೋಷಿತರನ್ನು ಮಾತ್ರವಲ್ಲದೇ ಸಮಾಜದ ಎಲ್ಲಾ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾದ ಗ್ಯಾರಂಟಿ ಯೋಜನೆಗಳು ಸರ್ವರ ಸರ್ವೋದಯಕ್ಕೆ ಸಹಕಾರಿಯಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

ಶಿವಮೊಗ್ಗ: ಶತಶತಮಾನಗಳಿಂದ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರನ್ನು, ಶೋಷಿತರನ್ನು ಮಾತ್ರವಲ್ಲದೇ ಸಮಾಜದ ಎಲ್ಲಾ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾದ ಗ್ಯಾರಂಟಿ ಯೋಜನೆಗಳು ಸರ್ವರ ಸರ್ವೋದಯಕ್ಕೆ ಸಹಕಾರಿಯಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಡಾ.ಬಾಬು ಜಗಜೀವನರಾಮ್‌ ಜಯಂತಿಯಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಫಲಾನುಭವಿಗಳ ಯಶೋಗಾಥೆಗಳನ್ನಾಧರಿಸಿದ ಕಿರುಹೊತ್ತಿಗೆ ಗ್ಯಾರಂಟಿ ಸರ್ಕಾರದ ವಿಕಾಸಪಥವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಜನಿಸಿ, ಜನಸಾಮಾನ್ಯರ ನೋವು-ನಲಿವುಗಳನ್ನು ಸಮೀಪದಿಂದ ಬಲ್ಲವನಾಗಿದ್ದೇನೆ. ಅವರ ಸಂಕಷ್ಟಗಳಿಗೆ ಸ್ಪಂದಿಸಬೇಕೆಂಬ ಅದಮ್ಯ ಆಕಾಂಕ್ಷೆ ಹೊಂದಿದ್ದೇನೆ. ಜನಸಾಮಾನ್ಯರಿಗೆ ಸಹಕಾರಿಯಾಗುವಂತೆ ನನ್ನೆಲ್ಲಾ ಆಸೆ-ಕನಸುಗಳಿಗೆ ಗ್ಯಾರಂಟಿ ಯೋಜನೆಗಳ ರೂಪದಲ್ಲಿ ಮೂರ್ತರೂಪ ನೀಡಿ ಪ್ರಣಾಳಿಕೆಯ ಅನುಷ್ಠಾನ ಸಮಿತಿಯ ಉಪಾಧ್ಯಕ್ಷನಾಗಿ ಅವುಗಳನ್ನು ಜಾರಿಗೆ ತರುವಲ್ಲಿ ಶ್ರಮಿಸಿದ್ದೇನೆ. ಅದು ಇಂದು ಫಲಪ್ರದವಾಗಿರುವುದು ಅತ್ಯಂತ ಸಂತೋಷವೆನಿಸಿದೆ ಎಂದರು.

ಪ್ರಸಕ್ತ ಸರ್ಕಾರವು ಜಾರಿಗೊಳಿಸಿರುವ ಮಹಿಳೆಯರು ರಾಜ್ಯದಾದ್ಯಂತ ಉಚಿತವಾಗಿ ಪ್ರಯಾಣಿಸಬಹುದಾದ ಶಕ್ತಿ ಯೋಜನೆ, ರಾಜ್ಯವನ್ನು ಹಸಿವು ಮುಕ್ತಗೊಳಿಸುವಲ್ಲಿ ಜಾರಿಗೊಳಿಸಲಾಗಿರುವ ಅನ್ನಭಾಗ್ಯ, ರಾಜ್ಯದ ಪ್ರತಿ ಮನೆಯನ್ನು ಕತ್ತಲಿಂದ ಬೆಳಕಿನೆಡೆಗೆ ಕರೆತರುವ ಗೃಹಜ್ಯೋತಿ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಮಾಸಿಕವಾಗಿ 2000 ರು.ಗಳನ್ನು ಅವರ ಖಾತೆಗೆ ನೀಡುವ ಗೃಹಲಕ್ಷ್ಮೀ ಹಾಗೂ ಪದವಿ ಮತ್ತು ಡಿಪ್ಲೋಮಾ ಪಡೆದು ಉದ್ಯೋಗ ಲಭಿಸದಿರುವ ಯುವಕರಿಗೆ 2 ವರ್ಷಗಳ ವರೆಗೆ ಪ್ರತಿ ತಿಂಗಳು ಭತ್ಯೆ ನೀಡುವ ಯುವನಿಧಿ ಯೋಜನೆಗಳು ಅತ್ಯಂತ ಜನಪ್ರಿಯ ಯೋಜನೆಗಳಾಗಿದ್ದು, ನೆರೆಯ ರಾಜ್ಯ ಸರ್ಕಾರಗಳು ರಾಜ್ಯದ ಮಾದರಿಯಲ್ಲಿ ಈ ಯೋಜನೆಗಳನ್ನು ಅನುಷ್ಠಾನಕ್ಕೆ ಮುಂದಾಗಿರುವುದು ಯೋಜನೆಯ ಮಹತ್ವವನ್ನು ಸಾರಿ ಹೇಳುತ್ತಿವೆ ಎಂದರು.

ಈ ಯೋಜನೆಗಳು ಜನಸಾಮಾನ್ಯರ ಬದುಕಿನಲ್ಲಿ ಒಂದಿಲ್ಲೊಂದು ರೀತಿಯ ಬದಲಾವಣೆ, ಸುಧಾರಣೆ ತಂದಿರುವುದಲ್ಲದೇ ಆರ್ಥಿಕ ಸಂಚಲ ಸೃಷ್ಟಿಸಿದೆ. ಜಿಎಸ್‌ಟಿ ಸಂಗ್ರಹದಲ್ಲಿ ರಾಜ್ಯ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಯಾವುದೇ ಸರ್ಕಾರ ಜನರ ವೆಚ್ಚ ಸಾಮರ್ಥ್ಯವನ್ನು ಅಥವಾ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದಲ್ಲಿ ಅಂತಹ ಸಮಾಜದಲ್ಲಿ ಆರ್ಥಿಕ ಚಲನಶೀಲತೆ ಆರೋಗ್ಯಕರವಾಗಿರುತ್ತದೆ. ಜಿಡಿಪಿ ಬೆಳವಣಿಗೆಯೂ ಉತ್ತಮ ರೀತಿಯಲ್ಲಿ ಇರುತ್ತದೆ ಎನ್ನುವ ಆರ್ಥಿಕ ಮಂತ್ರದ ಮೂಲಪಾಠಕ್ಕೆ ಈ ಯೋಜನೆಗಳು ಸಾಕ್ಷಿಯಾಗಿವೆ ಎಂದರು.

ಮುಂದಿನ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳೊಂದಿಗೆ ಇನ್ನಷ್ಟು ಜನಪರವಾಗಿ ಅನೇಕ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ರಚನಾತ್ಮಕವಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಗೊಳಿಸಿ ಮಾದರಿ ಜಿಲ್ಲೆ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದೇನೆ ಎಂದರು.

ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್‌ಬಾನು, ಎಂಎಡಿಬಿ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥಗೌಡ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನಕುಮಾರ್, ಜಿಪಂ ಸಿಇಒ ಎನ್.ಹೇಮಂತ್, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಲ್ಲೇಶಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಮಾರುತಿ ಮತ್ತಿತರರಿದ್ದರು.

Share this article