ಕುಷ್ಟಗಿ: ದೇಶದಲ್ಲಿಯೇ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಮಾದರಿಯಾಗಿವೆ ಎಂದು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಹೇಳಿದರು.
ಗ್ಯಾರಂಟಿ ಯೋಜನೆಗಳಿಂದ ಬಡವರ ಬದುಕು ಬದಲಾಗಿದೆ. ಪ್ರತಿ ತಿಂಗಳ ಅವರ ಖಾತೆಗೆ ಹಣ ಜಮಾವಣೆ ಆಗುತ್ತಿದೆ ಇದರಿಂದ ಮಹಿಳೆಯರಿಗೆ ದಿನ ನಿತ್ಯದ ಬದುಕಿಗೆ ಆತ್ಮವಿಶ್ವಾಸ ಮೂಡಿದೆ. ಈಗಾಗಲೇ ನವೆಂಬರ ತಿಂಗಳ ಹಣ ಕೆಲವೇ ದಿನದಲ್ಲಿ ಸಿಗಲಿದೆ. ಅದರಂತೆ ಒಟ್ಟು ಐದು ಗ್ಯಾರಂಟಿ ಸರ್ಕಾರ ನೀಡುತ್ತಿದೆ ಎಂದರು.
ಕುಷ್ಟಗಿ ತಾಲೂಕು ಗ್ಯಾರಂಟಿ ಸಮಿತಿಯ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಭೇಟಿ ನೀಡಿ ಫಲಾನುಭವಿಗಳ ಕಷ್ಟ ಅರಿತುಕೊಂಡು ಪರಿಹಾರ ಕಂಡುಕೊಳ್ಳುವಲ್ಲಿ ಕೆಲಸ ಮಾಡುತ್ತಿದೆ ಎಂದರು.ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಫಾರೋಕ ಡಾಲಾಯತ್ ಮಾತನಾಡಿ, ಈಗಾಗಲೆ ತಾಲೂಕಿನ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ ಗ್ಯಾರಂಟಿ ಯೋಜನೆಗಳ ಶಿಬಿರ ಕೈಗೊಂಡಿದ್ದು, ಕೆಲ ಸಮಸ್ಯೆಗಳಿಗೆ ಸ್ಥಳೀಯವಾಗಿಯೆ ಪರಿಹಾರ ಕಲ್ಪಿಸಿಕೊಡಲಾಗಿದೆ ಎಂದರು.
ಪಪಂ ಅಧ್ಯಕ್ಷ ನಾರಾಯಣಗೌಡ ಮದಿಕೇರಿ ಮಾತನಾಡಿ, ಈ ಗ್ಯಾರಂಟಿ ಯೋಜನೆ ರಾಜ್ಯಕ್ಕೆ ಹಾಗೂ ದೇಶಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.ಗ್ಯಾರಂಟಿ ಯೋಜನೆಯ ಅನುಷ್ಠಾನದ ಪ್ರಾಧಿಕಾರದ ಸದಸ್ಯ ವೀರಬಸಯ್ಯ ಕಾಡಗಿಮಠ ಸರ್ಕಾರ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಗ್ಯಾರಂಟಿ ಅನುಷ್ಠಾನ ಸಮಿತಿಯ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಗತಿಯ ಕುರಿತು ವರದಿ ನೀಡಿದರು.ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಅಮರೇಶ ಗಾಂಜಿ, ತಾಪಂ ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ, ಗ್ಯಾರಂಟಿ ಸಮಿತಿ ಸದಸ್ಯ ನರಸಪ್ಪ ಬಿಂಗಿ ಮತ್ತು ಪಪಂ ಮುಖ್ಯಾಧಿಕಾರಿ ಮಹೇಶ ಅಂಗಡಿ, ಪಪಂ ಸದಸ್ಯರು ಸಾರಿಗೆ ಇಲಾಖೆ ಅಧಿಕಾರಿ ಸಂಗಮೇಶ ಸಿಂಗಾರಿ, ಜೆಸ್ಕಾಂ ಶಾಖಾಧಿಕಾರಿ ರಶ್ಮಿ, ಆರೋಗ್ಯ ಇಲಾಖೆಯ ಅನ್ವರ್, ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ಮಹಿಳೆಯರು ಮತ್ತು ಸರ್ಕಾರಿ ಎಲ್ಲ ಇಲಾಖೆಗಳ ಅಧಿಕಾರಿಗಳು ಇದ್ದರು.