ಗ್ಯಾರಂಟಿಯಿಂದ ಬಡ ಜನತೆಗೆ ನೆಮ್ಮದಿಯ ಜೀವನ: ಶಾಸಕ ಪ್ರಕಾಶ ಕೋಳಿವಾಡ

KannadaprabhaNewsNetwork | Published : Feb 26, 2024 1:30 AM

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜಾರಿಗೊಳಿಸಿದ ಐದು ಗ್ಯಾರಂಟಿಗಳಿಂದ ರಾಜ್ಯದ ಜನತೆ ನೆಮ್ಮದಿಯಿಂದ ಜೀವನ ಸಾಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜಾರಿಗೊಳಿಸಿದ ಐದು ಗ್ಯಾರಂಟಿಗಳಿಂದ ರಾಜ್ಯದ ಜನತೆ ನೆಮ್ಮದಿಯಿಂದ ಜೀವನ ಸಾಗುತ್ತಿದ್ದಾರೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ತಾಲೂಕಿನ ಕುಪ್ಪೇಲೂರ ಗ್ರಾಮದ ತಿಮ್ಮನಗೌಡ ವೃತ್ತದಲ್ಲಿ ಭಾನುವಾರ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಏರ್ಪಡಿಸಿದ್ದ ಕುಪ್ಪೇಲೂರ ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಅಸಮಾನತೆ ಇರಬಾರದು, ಸಮ ಸಮಸಮಾಜ ನಿರ್ಮಾಣವಾಗಬೇಕು ಎಂಬುದು ಸರ್ಕಾರದ ಮೂಲ ಉದ್ದೇಶವಾಗಿದೆ. ಉಳ್ಳವರ ಬಳಿ ತೆರಿಗೆ ಸಂಗ್ರಹ ಮಾಡಿ ಬಡಜನತೆಯನ್ನು ಮುಖ್ಯವಾಹಿನಿಗೆ ತರಲು ಮುಂದಾಗಿದೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹ 3.71 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. 15ನೇ ಬಾರಿ ಬಜೆಟ್ ಮಂಡಿಸಿ ದಾಖಲೆ ಬರೆದಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ, ಗೃಹಜ್ಯೋತಿ, ಮಹಿಳಾ ಶಕ್ತಿ ಈ ಐದು ಯೋಜನೆಗಳಿಗೆ ₹50 ಸಾವಿರ ಕೋಟಿ ಅನುದಾನವನ್ನು ನೀಡುವ ಮೂಲಕ ನುಡಿದಂತೆ ನಡೆದಿದ್ದಾರೆ ಎಂದರು.

ನಾನು ಶಾಸಕನಾದ ಮೇಲೆ ಕ್ಷೇತ್ರಕ್ಕೆ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ₹ 30 ಕೋಟಿ, ಕುದರಿಹಾಳ ಕರ್ಲಗೇರಿ ಕುಡಿಯುವ ನೀರಿನ ಯೋಜನೆಗೆ ₹ 90 ಕೋಟಿ, ಬೈರನಪಾದ ಯೋಜನೆಗೆ ₹110 ಕೋಟಿ ಅನುದಾನ ತಂದಿರುವೆ. ಮುಖ್ಯಮಂತ್ರಿ ಸಿದ್ದಾರಾಮಯ್ಯ ₹25 ಕೋಟಿ ಶಾಸಕರ ಅನುದಾನ ನೀಡಿದ್ದು ಅದರಲ್ಲಿ ಶಿಕ್ಷಣ, ಶಾಲಾ ಅಭಿವೃದ್ಧಿ ಮತ್ತು ಗ್ರಾಮಗಳ ಬಸ್ ನಿಲ್ದಾಣಕ್ಕೆ ಬಳಸಲಾಗುವುದು ಎಂದರು. ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿಗೆ ₹5 ಕೋಟಿ, ರಾಣಿಬೆನ್ನೂರು ನಗರ ಸ್ವಚ್ಛಗೊಳಿಸುವ ಯೋಜನೆಗೆ ₹ 15 ಕೋಟಿ, ಅಮೃತ ಯೋಜನೆಯಡಿ ₹ 20 ಕೋಟಿ, ಮೊರಾರ್ಜಿ ಶಾಲೆ ಕಟ್ಟಡಕ್ಕೆ ₹ 20 ಕೋಟಿ, ನೂತನ ಎಆರ್‌ಟಿಓ ಕಚೇರಿ ಮತ್ತು ಟ್ರಯಲ್ ನೀಡಲು ಟ್ರ‍್ಯಾಕ್ ನಿರ್ಮಾಣಕ್ಕೆ ₹ 11 ಕೋಟಿ, ಕೃಷ್ಣಮೃಗ ಅಭಯಾರಣ್ಯ ಪ್ರವಾಸೋದ್ಯಮವನ್ನಾಗಿಸಲು ₹1.60 ಕೋಟಿ, ಕುರಿ ಉಣ್ಣೆ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ₹ 5 ಕೋಟಿ ಅನುದಾನ ತಂದಿರುವೆ. ಇದಲ್ಲದೆ ತಾಲೂಕಿನ ಅಡಿಕೆ ಬೆಳೆಯನ್ನು ಎನ್‌ಆರ್‌ಇಜಿ ಯೋಜನೆಯಲ್ಲಿ ಸೇರ್ಪಡೆ ಮಾಡಿಸಲಾಗಿದ್ದು ಎಕರೆಗೆ ₹ 60 ರಿಂದ 75 ಸಾವಿರ ಬರುವಂತೆ ಮಾಡಲಾಗಿದೆ. ಅಡಕೆಗೆ ಹನಿ ನೀರಾವರಿ ಯೋಜನೆ ತರಲಾಗಿದೆ. ನೀವು ನನಗೆ ಆಶೀರ್ವಾದ ಮಾಡಿ ವಿಧಾನಸಭೆಗೆ ಕಳಿಸಿದ್ದೀರಿ, ಇನ್ನು ನಾಲ್ಕು ವರ್ಷ ಅವಧಿ ಇದೆ. ಇನ್ನು ಹೆಚ್ಚಿನ ಯೋಜನೆ ಮತ್ತು ಅನುದಾನ ತಂದು ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಸಿಡಿಪಿಓ ಪಾರ್ವತಿ ಹುಂಡೇಕಾರ, ಹೆಸ್ಕಾಂ ಸಹಾಯಕ ಕಾರ್ಯ ಪಾಲನ ಎಂಜಿನಿಯರ್ ಲಕ್ಷ್ಮಣ ಕೆ., ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕ ಪ್ರಶಾಂತ ಸಂಗ್ರೇಸಿ, ಆಹಾರ ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿ ಶಿವಪ್ಪ ಹೊನ್ನಾಳಿ ಮಾತನಾಡಿ, ತಮ್ಮ ಇಲಾಖೆಗಳ ವತಿಯಿಂದ ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗೆ ಖರ್ಚು ಮಾಡಲಾದ ಹಣದ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಮಾದೇನಹಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಗ್ರಾಪಂ ಉಪಾಧ್ಯಕ್ಷ ರಾಮಪ್ಪ ಆಡಿನವರ, ತಾಪಂ ಮಾಜಿ ಸದಸ್ಯ ಭರಮಪ್ಪ ಕೂರಕಲಿ, ತಾಪಂ ಇಒ ಸುಮಲತಾ ಎಸ್.ಪಿ., ಬಿಇಒ ಎಂ.ಎಚ್. ಪಾಟೀಲ, ಮಂಜುಗೌಡ ಪಾಟೀಲ, ರವೀಂದ್ರ ಗೌಡ ಪಾಟೀಲ. ಸುರೇಶ್ ಬಾನುವಳ್ಳಿ, ನೀಲಕಂಠಪ್ಪ ಕುಸಗೂರ, ಚಂದ್ರಣ್ಣ ಬೇಡರ, ಕೃಷ್ಣಪ್ಪ ಕಂಬಳಿ, ಹನುಮಂತಪ್ಪ ಸಂಕಣ್ಣನವರ, ಟಿ. ಬಿ. ಮೂಗನವರ ಮತ್ತಿತರರಿದ್ದರು.

Share this article