ಗ್ಯಾರಂಟಿಗಳು ಬಡಜನರ ಆರ್ಥಿಕ ಅಭಿವೃದ್ಧಿಗೆ ಸಹಕಾರಿ : ಶ್ರೀನಿವಾಸರಾವ್

KannadaprabhaNewsNetwork |  
Published : Jun 20, 2025, 12:34 AM ISTUpdated : Jun 20, 2025, 11:58 AM IST
ಕಂಪ್ಲಿಯಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ  | Kannada Prabha

ಸಾರಾಂಶ

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಡ ಜನರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದ್ದು, ಪ್ರತಿ ಹಂತದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಪ್ರಾಮಾಣಿಕತೆಯಿಂದ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು.

  ಕಂಪ್ಲಿ :  ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಡ ಜನರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದ್ದು, ಪ್ರತಿ ಹಂತದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಪ್ರಾಮಾಣಿಕತೆಯಿಂದ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕೆಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸರಾವ್ ತಿಳಿಸಿದರು.

ಪಟ್ಟಣದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಡವರಿಗೆ ಗ್ಯಾರಂಟಿ ಯೋಜನೆಗಳ ಸೌಲಭ್ಯ ತಲುಪಿಸುವಲ್ಲಿ ವಿಳಂಬವಾಗಬಾರದು. ಸೌಲಭ್ಯಗಳನ್ನು ನಿಗದಿತ ಅವಧಿಯಲ್ಲಿಯೇ ತಲುಪಿಸುವಂತಾಗಬೇಕು. ಅರ್ಹರಿಗೆ ಅನುಕೂಲವಾಗುವಂತೆ ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನವು ಶೇಕಡ ನೂರರಷ್ಟು ಪ್ರಗತಿಯಾಗಬೇಕು. ಗ್ಯಾರಂಟಿ ಯೋಜನೆಯ ಅನುಷ್ಠಾನದಲ್ಲಿ ಪ್ರಾಮಾಣಿಕತೆ ಇರಬೇಕು ಎಂದರು.

ತಾಲೂಕಿನಲ್ಲಿ 18938 ವಿದ್ಯುತ್ ಗ್ರಾಹಕರಿದ್ದು 18384 ಗ್ರಾಹಕರು ಗೃಹಜ್ಯೋತಿ ಯೋಜನೆಗೆ ಅರ್ಹತೆ ಹೊಂದಿದ್ದಾರೆ. ಇವರಲ್ಲಿ 16940 ಯೋಜನೆಯ ಫಲಾನುಭವಿಗಳಾಗಿದ್ದು 2025ರ ಮೇ ತನಕ ₹2.03 ಕೋಟಿ ಸಬ್ಸಿಡಿ ಮೊತ್ತವನ್ನು ಸರ್ಕಾರ ಮಂಜೂರು ಮಾಡಿದೆ ಎಂದು ಜೆಸ್ಕಾಂ ಎಇ ಭೀಮೇಶ್ ಸಭೆಗೆ ತಿಳಿಸಿದಾಗ, ಮೆಟ್ರಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಹೆಚ್ಚಿದೆ, ಮಾವಿನಹಳ್ಳಿಯಲ್ಲಿ ಐಪಿ ಸೆಟ್ ಸಮಸ್ಯೆ ಬಂದಾಗ ಅಲ್ಲಿನ ಲೈನ್‌ಮ್ಯಾನ್ ಸ್ಪಂದಿಸುತ್ತಿಲ್ಲ ಎಂದು ಸಮಿತಿ ಸದಸ್ಯರು ದೂರಿದರು. ಶಾಲೆಗಳಿಗೆ ಉಚಿತ ವಿದ್ಯುತ್ ನೀಡುವಂತೆ ಆದೇಶವಾಗಿದ್ದು ಸೌಲಭ್ಯ ಕಲ್ಪಿಸುವಲ್ಲಿ ಜೆಸ್ಕಾಂ ಅಧಿಕಾರಿಗಳು ನಿಗಾವಹಿಸಬೇಕು ಎಂದು ತಾಪಂ ಇಒ ಆರ್.ಕೆ. ಶ್ರೀಕುಮಾರ್ ತಿಳಿಸಿದಾಗ, ಉಚಿತ ವಿದ್ಯುತ್ ಪೂರ್ವದ ಬಿಲ್ ಪಾವತಿಸಬೇಕು ಎಂದು ಜೆಸ್ಕಾಂ ಎಇ ಭೀಮೇಶ್ ತಿಳಿಸಿದರು.

ಯುವನಿಧಿ ಯೋಜನೆ ಕುರಿತಂತೆ, 2023-24 ಹಾಗೂ 2025ನೇ ಸಾಲಿನಲ್ಲಿ ಉತ್ತೀರ್ಣರಾದವರು ಯುವನಿಧಿಗೆ ಅರ್ಜಿ ಸಲ್ಲಿಸಬಹುದು. ಫಲಿತಾಂಶ ಪ್ರಕಟವಾಗಿ 6 ತಿಂಗಳ ತನಕ ಯುವನಿಧಿಗೆ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಜಿಲ್ಲಾ ಆಪ್ತ ಸಮಾಲೋಚಕ ವೆಂಕಟೇಶ ಮಾಹಿತಿ ನೀಡಿದರು.

ಆದಾಯ ತೆರಿಗೆ ಪಾವತಿಸುವ ಪಡಿತರ ಚೀಟಿದಾರರಿಗೆ ಗೃಹಲಕ್ಷ್ಮಿಯೋಜನೆಗೆ ಅರ್ಹರಾಗುವುದಿಲ್ಲ. ಸ್ಥಳೀಯ ಆಡಳಿತದಿಂದ ಮರಣ ದಾಖಲೆ ಪಡೆದುಕೊಂಡು ಮೃತ ಫಲಾನುಭವಿಗೆ ಯೋಜನೆ ನಿಲ್ಲಿಸಲಾಗುವುದು ಎಂದು ಶಿರಗುಪ್ಪದ ಸಿಡಿಪಿಒ ಜಿ.ಪ್ರದೀಪ್ ತಿಳಿಸಿದರು.

ಅನಂತಪುರ ಬಸ್ಸು ಮೆಟ್ರಿ, ಹಳೆದರೋಜಿಯಲ್ಲಿ ಸರಿಯಾಗಿ ನಿಲ್ಲಿಸುತ್ತಿಲ್ಲ. ಕಂಪ್ಲಿ ಡಿಪ್ಲೋಮಾ ಕಾಲೇಜು, ಕೋಟೆ ಬಳಿ ಕಡ್ಡಾಯವಾಗಿ ಬಸ್ ನಿಲುಗಡೆಗೊಳಿಸಬೇಕು. ಸಂಜೆ4.30ರ ನಂತರ ಬಳ್ಳಾರಿಗೆ, ಬಳ್ಳಾರಿಯಿಂದ ಸಂಜೆ 5ರಿಂದ 7ಗಂಟೆ ತನಕ ಕಂಪ್ಲಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ಯಾರಂಟಿ ಸದಸ್ಯರು ಒತ್ತಾಯಿಸಿದಾಗ ಕಂಪ್ಲಿ ಸಂಚಾರಿ ನಿಯಂತ್ರಕ ಆದಿಶೇಷ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.

ಸಭೆಯಲ್ಲಿ ಗ್ಯಾರಂಟಿ ಯೋಜನೆಯ ಸದಸ್ಯರಾದ ಶಿವಕುಮಾರ್, ವಿಜಯಲಕ್ಷ್ಮಿ, ಶಿವರಾಜಕುಮಾರ್, ವಿ.ರಮೇಶ, ಗೌಡ್ರು ಕೆ.ಸಿದ್ದಪ್ಪ, ರೇಣುಕಮ್ಮ, ಎಂ.ರಾಜಾಭಕ್ಷಿ, ತಿಮ್ಮಪ್ಪ ಸೇರಿ ಅಧಿಕಾರಿಗಳಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ