ಕನ್ನಡಪ್ರಭ ವಾರ್ತೆ
ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಬರಗಾಲದಿಂದ ತತ್ತರಿಸಿರುವ ರೈತರಿಂದ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳು ಸಾಲ ವಸೂಲಾತಿಯ ನೆಪದಲ್ಲಿ ರೈತರ ಜಮೀನು ಹರಾಜು ಹಾಕಲು ಮುಂದಾಗಿರುವುದು ಖಂಡನೀಯ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಗೌಡ ತಿಳಿಸಿದರು.ಪಟ್ಟಣದ ಎಪಿಎಂಸಿ ರೈತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ರೈತರ ಸಾಲ ಬಲವಂತದಲ್ಲಿ ಮಾಡಬಾರದು ಎಂದು ಸರ್ಕಾರ ಆದೇಶಿಸಿದ್ದರೂ ತುರುವೇಕೆರೆ ಕರ್ಣಾಟಕ ಬ್ಯಾಂಕ್ ರೈತರ ಸಾಲಕ್ಕೆ ಅಂದಾಜು ಮೂರು ಕೋಟಿ ಬೆಲೆಬಾಳುವ ಜಮೀನನ್ನು 4.5 ಲಕ್ಷ ಸಾಲಕ್ಕೆ 34.80 ಲಕ್ಷಕ್ಕೆ ಡಿಕ್ರಿ ಮಾಡಿಸಿರುವುದು ಬಿಡ್ಡುದಾರರ ಜೊತೆ ಶಾಮೀಲು ಆಗಿರುವ ಶಂಕೆ ವ್ಯಕ್ತವಾಗಿದೆ. ಈ ರೀತಿ ಬ್ಯಾಂಕ್ ಮಾಡಿದ್ದು ಖಂಡನೀಯ. ಇದೇ ತಿಂಗಳ 12 ರಂದು ತುರುವೇಕೆರೆ ಬ್ಯಾಂಕ್ ಮುಂದೆ ಬೃಹತ್ ಪ್ರತಿಭಟನೆ ನಡೆಯಲಿದೆ. ಗುಬ್ಬಿ ತಾಲೂಕಿನಿಂದ 300 ಕ್ಕೂ ಅಧಿಕ ರೈತರು ತೆರಳಲಿದ್ದಾರೆ ಎಂದು ಹೇಳಿದರು.
ರೈತ ಸಂಘದ ತಾಲ್ಲೂಕು ಯುವಘಟಕದ ಅಧ್ಯಕ್ಷ ಶಿವಕುಮಾರ್ ಮಾತನಾಡಿ ರೈತರು ಎಂದಿಗೂ ಸುಸ್ತಿದಾರರಾಗಲು ಇಷ್ಟಪಡುವುದಿಲ್ಲ. ಸಂಕಷ್ಟದ ಪರಿಸ್ಥಿತಿಯಲ್ಲಿ ಅಸಹಾಯಕರಾಗಿದ್ದಾರೆ. ಇದನ್ನೇ ದುರುಪಯೋಗಪಡಿಸಿಕೊಂಡು ಬ್ಯಾಂಕುಗಳು ನ್ಯಾಯಾಲಯದಲ್ಲಿ ಅವರಿಗೆ ಇಷ್ಟ ಬಂದಂತೆ ಆದೇಶ ಮಾಡಿಸಿಕೊಂಡು ಜಮೀನು, ಮನೆಗಳನ್ನು ಹರಾಜುಹಾಕಲು ಮುಂದಾಗುತ್ತಿದ್ದಾರೆ. ಬ್ಯಾಂಕುಗಳ ಇಂತಹ ನೀತಿಗೆ ಧಿಕ್ಕಾರವಿರಲಿ ಎಂದು ಹೇಳಿದರು.ತುರುವೇಕೆರೆಯಲ್ಲಿ ನಡೆಯುವ ಪ್ರತಿಭಟನೆಯಲ್ಲಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸಾವಿರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸುವರು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್, ಪದಾಧಿಕಾರಿಗಳಾದ ಲೋಕೇಶ್, ಸತ್ತಿಗಪ್ಪ, ಯತೀಶ್, ಶಿವಣ್ಣ, ಸುರೇಶ್, ಕೃಷ್ಣಶೆಟ್ಟಿ, ಪ್ರಕಾಶ್, ಹನುಮಂತರಾಜು, ಕನ್ನಿಗಪ್ಪ, ವೆಂಕಟೇಶ್, ಈಶ್ವರಪ್ಪ ಇತರರು ಇದ್ದರು.