- ಗುಬ್ಬಿಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಲೋಕಾರ್ಪಣೆ, ಶಿಕ್ಷಕರಿಗೆ ಬೀಳ್ಕೊಡುಗೆ
ಗುಬ್ಬಿಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2025-26 ನೇ ಸಾಲಿನ ಬೆಸ್ಟ್ ಎಸ್.ಡಿಎಂಸಿ ಪ್ರಶಸ್ತಿ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ತಿಮ್ಮರಾಜು ತಿಳಿಸಿದರು.
ಬುಧವಾರ ಗುಬ್ಬಿಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಟಿವಿ ಹಾಗೂ ಇತರ ಉಪಕರಣಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ಪ್ರತಿ ವರ್ಷ ರಾಜ್ಯಮಟ್ಟದಲ್ಲಿ ಪ್ರತಿ ತಾಲೂಕಿನ ಒಂದೊಂದು ಪ್ರೌಢ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಬೆಸ್ಟ್ ಎಸ್.ಡಿಎಂಸಿ ಪ್ರಶಸ್ತಿ ನೀಡಲಾಗುತ್ತದೆ. ಇದರ ಜೊತೆಗೆ ಆಯ್ಕೆಯಾದ ಪ್ರೌಢ ಶಾಲೆಗಳಿಗೆ ₹1 ಲಕ್ಷ, ಹಿರಿಯ ಪ್ರಾಥಮಿಕ ಶಾಲೆಗೆ ₹75 ಸಾವಿರ, ಕಿರಿಯ ಪ್ರಾಥಮಿಕ ಶಾಲೆಗೆ ₹50 ಸಾವಿರ ಅನುದಾನ ನೀಡಲಾಗುತ್ತದೆ. ಗುಬ್ಬಿಗಾ ಶಾಲೆಯ 2024-25 ನೇ ಸಾಲಿನ ಸಾಧನೆ ಆಧರಿಸಿ ಪ್ರಶಸ್ತಿ ಪತ್ರ ಹಾಗೂ ₹75 ಸಾವಿರ ಅನುದಾನ ನೀಡಲಾಗಿದ್ದು ಇದರಲ್ಲಿ ಶಾಲೆಯವರು ಸ್ಮಾರ್ಟ್ ಕ್ಲಾಸ್ ಟಿ.ವಿ, ಸ್ಪೀಕರ್ ವಿತ್ ಮೈಕ್, ಶಿಕ್ಷಕರಿಗೆ ಗಾಡ್ರೇಜ್ ಬೀರು ಹಾಗೂ ಶಾಲೆಗೆ ವೈ ಫೈ ಅಳವಡಿಸಿದ್ದಾರೆ. ಇದನ್ನು ಇಂದು ಅನಾವರಣಗೊಳಿಸಿದ್ದೇವೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಮಾತನಾಡಿ, ಗುಬ್ಬಿಗಾ ಶಾಲೆಯಲ್ಲಿ ಅತ್ಯುತ್ತಮ ಪ್ರವೇಶ ದ್ವಾರ, ಸುಸಜ್ಜಿತ ಗಾರ್ಡನ್, ಹೈಟೆಕ್ ಶೌಚಾಲಯ, ವಿಶ್ವ ಮಾನವ ಸಭಾಂಗಣ, ಶಾಲಾ ಆವರಣದಲ್ಲಿ 300 ಅಡಕೆ ಗಿಡದ ತೋಟ,ದ್ವಜದ ಕಟ್ಟೆ, ಶಾಲೆಯಲ್ಲಿ ಪ್ರಿಂಟರ್ ಹಾಗೂ ಪ್ರೊಜೆಕ್ಟರ್ ಸಹ ಅಳವಡಿಸಲಾಗಿದೆ. ಶಾಲೆ ಮುಖ್ಯೋಪಾಧ್ಯಾಯ ಅಶೋಕ್, ಶಾಲಾ ಎಸ್.ಡಿಎಂಸಿ ಅಧ್ಯಕ್ಷರು, ಶಾಲಾ ಹಳೇ ವಿದ್ಯಾರ್ಥಿ ಸಂಘದವರ ಕಾರ್ಯ ವೈಖರಿ ಉತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.