ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅತಿಥಿ ಉಪನ್ಯಾಸಕರಿಗೆ ತಿಂಗಳಿಗೊಂದು ಸಾಮಾನ್ಯ ರಜೆ ತೆಗೆದುಕೊಳ್ಳುವ ಅವಕಾಶ ನೀಡಿ ಸರ್ಕಾರ ರಜೆ ಮಂಜೂರು ಮಾಡಿದೆ. ಆದರೆ, ಸಾಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು ಸಾಮಾನ್ಯ ರಜೆ ತೆಗೆದುಕೊಂಡು, ಹಾಜರಿ ಪುಸ್ತಕದಲ್ಲಿ ನಮೂದು ಮಾಡಿದ್ದರೂ ಈ ಕಾಲೇಜಿನ ಮ್ಯಾನೇಜರ್ ಮಂಜಪ್ಪ ಅವರು ತಿಂಗಳ ಗೌರವಧನ ಬಿಲ್ ಮಾಡುವಾಗ ವಿನಾಕಾರಣ ಕಿರಿಕಿರಿ ಮಾಡುತ್ತಿದ್ದಾರೆ ಎಂದು ಮನವಿದಾರರು ಆರೋಪಿಸಿದರು.
ಈ ಕಾಲೇಜಿನಲ್ಲಿ 33 ಅತಿಥಿ ಉಪನ್ಯಾಸಕರು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಆದರೆ. ಸಾಮಾನ್ಯ ರಜೆ ಬಳಸಿದ ಅತಿಥಿ ಉಪನ್ಯಾಸಕರ ಗೌರವಧನ ತಡೆ ಹಿಡಿದಿದ್ದಾರೆ. ಸರ್ಕಾರವೇ ಸಾಮಾನ್ಯ ರಜೆ ತೆಗೆದುಕೊಳ್ಳಲು ಅವಕಾಶ ಕೊಟ್ಟರೂ ಈ ಕಾಲೇಜಿನ ಮ್ಯಾನೇಜರ್ ಮಂಜಪ್ಪ ಗೌರವಧನ ವೇತನಕ್ಕೆ ಕತ್ತರಿ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.ಈ ಸಂಬಂಧ ಕಾಲೇಜಿನ ಪ್ರಾಂಶುಪಾಲರಿಗೆ ಲಿಖಿತ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಅತಿಥಿ ಉಪನ್ಯಾಸಕರಿಗೆ ಜೂನ್ ತಿಂಗಳ ಗೌರವಧನ ಕೊಡಿಸಬೇಕು. ಜೊತೆಗೆ ಅತಿಥಿ ಉಪನ್ಯಾಸಕರಿಗೆ ನೀಡುತ್ತಿರುವ ಕಿರುಕುಳ ನಿಲ್ಲಿಸಬೇಕು. ಇದು ಹೀಗೆ ಮುಂದುವರೆದರೆ ಇದರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಮನವಿ ಸಲ್ಲಿಸುವ ಸಂದರ್ಭ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉನ್ಯಾಸಕರ ರಾಜ್ಯ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ ಡಾ.ಸೋಮಶೇಖರ್. ಎಚ್. ಶಿಮೊಗ್ಗಿ, ಪ್ರಮುಖರಾದ ಧನಂಜಯಪ್ಪ, ನವೀನ್, ಲಕ್ಷ್ಮಣ್, ಎ.ಬಿ.ಶಾಬಾಜ್, ಡಾ.ಗಣಪತಿ, ಸಂದೀಪ್ , ಕೆ.ರಾಜೇಶ್ ಕುಮಾರ್ ಮತ್ತಿತರರು ಇದ್ದರು.