ಕನ್ನಡಪ್ರಭ ವಾರ್ತೆ ಹಾಸನ
ನಗರದ ಎಂ.ಜಿ ರಸ್ತೆಯ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸೋಮವಾರ ರಾತ್ರಿ ನಡೆದ ಗುರು ತೋರಿದ ದಾರಿ ತಿಂಗಳ ಮಾಮನ ತೇರಿನ 118ನೇ ಪವಿತ್ರ ಹುಣ್ಣಿಮೆ ಕಾರ್ಯಕ್ರಮ ಹಾಗೂ ಗುರು ಪೌರ್ಣಿಮೆ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಗುರುವಿಗೆ, ಗುರುತ್ವಕ್ಕೆ ಇರುವ ಶಕ್ತಿಯನ್ನು ಯಾರೂ ಅಲಕ್ಷ್ಯ ಮಾಡಬಾರದು. ಮನಸ್ಸಿನಲ್ಲಿ ಗುರುವಿನ ಬಗೆಗೆ ಪೂಜ್ಯ ಭಾವನೆ ಮೂಡಿಸಿಕೊಂಡು, ಗುರು ತೋರುವ ಸನ್ಮಾರ್ಗದಲ್ಲಿ ನಡೆದು, ನಮ್ಮಲ್ಲಿ ಮೂಡುವ ಜ್ಞಾನವನ್ನು ಪಸರಿಸುವ ಕೆಲಸ ಮಾಡಿಕೊಂಡು ಹೋದಾಗ ಮಾತ್ರ ಈ ಬದುಕಿಗೆ ಅರ್ಥ ಸಿಗಲಿದೆ ಎಂದರು.ಜ್ಞಾನ ಯಾರ ಸ್ವತ್ತೂ ಅಲ್ಲ, ಪ್ರತಿಯೊಬ್ಬರೂ ಜ್ಞಾನದಿಂದ ಯಶಸ್ಸನ್ನು ಸಾಧಿಸಬಹುದು. ಇದಕ್ಕೆ ಹಲವು ಮಹನೀಯರ ನಿದರ್ಶನಗಳು ನಮ್ಮ ಮುಂದಿವೆ. ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಸಿದ್ಧಾರ್ಥ ತನ್ನ ಬಾಲ್ಯದಲ್ಲಿ ಎಲ್ಲವನ್ನೂ ತ್ಯಜಿಸಿ ಪರಿಶ್ರಮದಿಂದ ಬುದ್ಧನಾದ. ಅಂತಹ ಮಹಾನ್ ವ್ಯಕ್ತಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವಾಯಿತು, ಅಂತೆಯೇ ನಮ್ಮಲ್ಲೂ ಒಳಿತುಗಳು ಬೆಳೆದಾಗ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಶ್ರೀ ಆದಿಚುಂಚನಗಿರಿ ಹಾಸನ ಮಠದ ಶಂಭುನಾಥ ಸ್ವಾಮೀಜಿ ಪ್ರಾಸ್ತವಿಕವಾಗಿ ಮಾತನಾಡಿ, ಜ್ಞಾನದ ಬೆಳಕು ಹಚ್ಚುವ ಶಕ್ತಿ ಗುರುಗಳಿಗೆ ಮಾತ್ರವಿದ್ದು, ಜೀವನ ಸಾರ್ಥಕವಾಗಬೇಕೆಂದರೆ ಜೀವಿತದ ಕೊನೆಯವರೆಗೆ ಗುರುಗಳನ್ನು ಪೂಜಿಸಬೇಕು. ಗುರುವಾಗಬೇಕೆಂದರೆ ಭಗವಂತನ ಸಾಕ್ಷಾತ್ ಗುಣಗಳಿರಬೇಕು. ಅಂದಾಗ ಮಾತ್ರ ಗುರು ಎಂಬ ಪಟ್ಟ ಧರಿಸಲು ಸಾಧ್ಯ ಎಂದು ಹೇಳಿದರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಗುರು ಪರಂಪರೆಯನ್ನು ಎತ್ತಿ ಹಿಡಿದಿದೆ. ಶ್ರೀ ಮಠದ 71ನೇ ಪೀಠಾಧಿಪತಿಯಾಗಿದ್ದ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಪ್ರಸ್ತುತ ಪೀಠಾಧಿಪತಿಗಳಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರು ಗುರುವಿನ ಸ್ಥಾನದಲ್ಲಿ ನಿಂತು ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.