ಅತಿಥಿ ಶಿಕ್ಷಕರಿಗೆ 4 ತಿಂಗಳ ಗೌರವಧನ ಬಾಕಿ

KannadaprabhaNewsNetwork |  
Published : Sep 28, 2024, 01:19 AM IST
ಪೋಟೊ27ಕೆಎಸಟಿ1: ಸುರೇಂದ್ರ ಕಾಂಬಳೆ ಬಿಇಒ ಕುಷ್ಟಗಿ, ಶ್ರೀಕಾಂತ ಕಿರಗಿ ಅಧ್ಯಕ್ಷರು ಅತಿಥಿ ಶಿಕ್ಷಕರ ಸಂಘ ಕುಷ್ಟಗಿ, ಶಶಿಕುಮಾರ ಆಲ್ವಿ ಬಿಪಿಎಡ್ ಪಧವಿಧರ. | Kannada Prabha

ಸಾರಾಂಶ

ಸರ್ಕಾರಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ಗೌರವಧನ ಬಾರದ ಹಿನ್ನೆಲೆಯಲ್ಲಿ ಕುಟುಂಬ ನಿರ್ವಹಣೆಗೆ ಪರದಾಡುವಂತಾಗಿದೆ. ಅವರ ಕುಟುಂಬ ನಿರ್ವಹಣೆಗೆ ಸಾಲ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ: ಸರ್ಕಾರಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಕಳೆದ ಮೂರ್ನಾಲ್ಕು ತಿಂಗಳಿಂದ ಗೌರವಧನ ಬಾರದ ಹಿನ್ನೆಲೆಯಲ್ಲಿ ಕುಟುಂಬ ನಿರ್ವಹಣೆಗೆ ಪರದಾಡುವಂತಾಗಿದೆ.

ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 502 ಅತಿಥಿ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢಶಾಲೆಗಳಲ್ಲಿ 109 ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಕಳೆದ 4 ತಿಂಗಳಿಂದ ಕುಟುಂಬ ನಿರ್ವಹಣೆಗೆ ಅವರೆಲ್ಲ ಪರದಾಡುತ್ತಿದ್ದಾರೆ.

ಸರ್ಕಾರಿ ಶಿಕ್ಷಕರಷ್ಟೆ ಈ ಅತಿಥಿ ಶಿಕ್ಷಕರೂ ಕೆಲಸ ನಿರ್ವಹಿಸುತ್ತಾರೆ. ಪಾಠ ಮತ್ತು ಪಠ್ಯೇತರ ಚಟುವಟಿಕೆ ನಡೆಸುತ್ತಾರೆ. ಸರ್ಕಾರದ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿಯೂ ತೊಡಗಿಕೊಳ್ಳುತ್ತಾರೆ. ಆದರೂ ಗೌರವಧನ ಮಾತ್ರ ಸಕಾಲಕ್ಕೆ ಸಿಗುತ್ತಿಲ್ಲ.

ಸಾಲದ ಹೊರೆ: ಬಡ ಕುಟುಂಬದಿಂದ ಬಂದಿರುವ ಕೆಲ ಅತಿಥಿ ಶಿಕ್ಷಕರು ನಿತ್ಯವೂ ತಮ್ಮ ಊರಿನಿಂದ ಗ್ರಾಮೀಣ, ಪಟ್ಟಣಗಳ ಶಾಲೆಗೆ ಹಾಜರಾಗುತ್ತಾರೆ. ಅಂಥವರಿಗೆ ನಿತ್ಯ ಬಸ್‌ ಚಾರ್ಜ್‌ ಅಥವಾ ದ್ವಿಚಕ್ರ ವಾಹನದ ಪೆಟ್ರೋಲ್‌ ಖರ್ಚು ನಿಭಾಯಿಸುವುದೂ ಕಷ್ಟಕರವಾಗಿದೆ. ಆರೋಗ್ಯ, ಮಕ್ಕಳ ಶಿಕ್ಷಣ, ರೇಷನ್‌ಗೆ ಸಾಲ ಮಾಡುವಂತಾಗಿದೆ.

ದೈಹಿಕ ಶಿಕ್ಷಕರನ್ನು ಮರೆತ ಸರ್ಕಾರ: ಸರ್ಕಾರವು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಕರನ್ನು ಹೊರತುಪಡಿಸಿ ಉಳಿದ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡಿದೆ. ದೈಹಿಕ ಶಿಕ್ಷಣ ಶಿಕ್ಷಕರಿಗೆ ಅತಿಥಿ ಶಿಕ್ಷಕರಾಗುವ ಭಾಗ್ಯವಿಲ್ಲ.

ಡಾ. ಎಲ್.ಆರ್. ವೈದ್ಯನಾಥ ವರದಿ ಪ್ರಕಾರ 6ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ದೈಹಿಕ ಶಿಕ್ಷಣ ಬೋಧಿಸಬೇಕು. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಇರಬೇಕು ಎಂಬ ನಿಯಮವಿದೆ. ತಾಲೂಕಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಕಾಡುತ್ತಿದೆ. ದೈಹಿಕ ಶಿಕ್ಷಣವನ್ನು ಬಹುತೇಕ ಶಾಲೆಗಳಲ್ಲಿ ಸಹ ಶಿಕ್ಷಕರು ನಡೆಸುತ್ತಿರುವುದು ಕಂಡು ಬರುತ್ತಿದ್ದು, ಇದರಿಂದ ಮಕ್ಕಳಿಗೆ ಪರಿಣಾಮಕಾರಿಯಾಗಿ ಬೋಧನೆಯಾಗುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ.ಸರ್ಕಾರ ಅತಿಥಿ ಶಿಕ್ಷಕರಿಗೆ ಬಾಕಿ ಇರುವ ನಾಲ್ಕು ತಿಂಗಳ ವೇತನ ಮಂಜೂರು ಮಾಡಬೇಕು. ಜತೆಗೆ ಪ್ರಮುಖ ಬೇಡಿಕೆಗಳಾದ ನೇಮಕಾತಿಯಲ್ಲಿ ಶೇ.5 ರಷ್ಟು ಕೃಪಾಂಕ, ಅನುಭವ ಇರುವವರಿಗೆ ಆದ್ಯತೆ ನೀಡಬೇಕು. ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಕುಷ್ಟಗಿ ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಕಾಂತ ಕಿರಗಿ ಹೇಳಿದರು. ಅತಿಥಿ ಶಿಕ್ಷಕರ ವೇತನದ ಕುರಿತು ಘೋಷಣೆ ಮಾಡಿದ್ದು, ಬಜೆಟ್ ಬಾರದ ಹಿನ್ನೆಲೆಯಲ್ಲಿ ಇನ್ನೂ ಪಾವತಿಯಾಗಿಲ್ಲ. ಒಂದು ವಾರದಲ್ಲಿ ಪಾವತಿಯಾಗುವ ಸಾಧ್ಯತೆ ಇದೆ ಎಂದು ಕುಷ್ಟಗಿ ಬಿಇಒ ಸುರೇಂದ್ರ ಕಾಂಬಳೆ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!